ಕಂಬಿ ಹಿಂದೆ ದರ್ಶನ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲೈನ್ ಕ್ಲಿಯರ್...!
ಹೆಚ್ಚೇನ್ ಇಲ್ಲ.. ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮತ್ತು ಧ್ರುವಾ ಸರ್ಜಾ ನಡುವೆ ನಾನಾ.. ನೀನಾ.. ಎನ್ನುವ ಸಮರದ ವಾತಾವರಣ ನಿರ್ಮಾಣವಾಗಿತ್ತು. ಮಾಡಬಾರದ್ದನ್ನ ಮಾಡಿ ಸದ್ಯಕ್ಕೆ ಪೊಲೀಸರ ಆತಿಥ್ಯವನ್ನ ಸ್ವೀಕರಿಸುತ್ತಿರುವ ಶ್ರೀಯುತ ದರ್ಶನ್ ಅಭಿನಯದ ಡೆವಿಲ್ ಮತ್ತು ಧ್ರುವಾ ಸರ್ಜಾ ಅಭಿನಯದ ಕೆಡಿ ಒಂದೇ ದಿನ ತೆರೆಗೆ ಬರಲಿವೆ ಎಂಬ ಸುದ್ದಿ ಕೇಳಿ ಗಾಂಧಿನಗರದಲ್ಲಿ ಕಂಪನವಾಗಿತ್ತು.
ಇನ್ನೂ.. ಸ್ಟಾರ್‌ಗಳೇ ವಾರ್‌ಗೆ ಸಿದ್ಧವಾದಾಗ ಫ್ಯಾನ್ಸ್ ಕೇಳಬೇಕಾ..? ಸಾಮಾಜಿಕ ಜಾಲತಾಣದಲ್ಲಿ ಯುದ್ಧದ ಘೋಷಣೆಯನ್ನೇ ಎರಡು ಬಣ ಮಾಡಿದ್ದವು. ಆದರೆ.. ಈಗ ಯಾವ ಡೆವಿಲ್ ಇಲ್ಲ. ಯಾವ ಎವಿಲ್ ಇಲ್ಲ. ಯಾಕೆಂದರೆ.. ಸದ್ಯಕ್ಕೆ ದರ್ಶನ್ ಕಂಬಿ ಹಿಂದೆ ಇದ್ದಾನೆ. ಯಾವತ್ತು ಹೊರ ಬರುತ್ತಾನೆ ಎನ್ನುವುದು ಆ ದೇವರಿಗೆ ಗೊತ್ತು.

ಇನ್ನೂ ಯೋಗ ಮತ್ತೊಮ್ಮೆ ಕೈ ಹಿಡಿದು ಆಚೆ ಕರೆತಂದರೂ ಕೂಡ ಚಿತ್ರೀಕರಣಕ್ಕೆ ಹಾಜರಾಗುವುದು ಯಾವತ್ತು ಎಂಬ ಲೆಕ್ಕಾಚಾರ ಈಗ್ಲೇ ಹಾಕಲು ಸಾಧ್ಯ ಇಲ್ಲ. ಯಾಕೆಂದರೆ.. ಇದು ಸಾಮಾನ್ಯ ಪ್ರಕರಣವಲ್ಲ. ಕೊಲೆಯ ಪ್ರಕರಣ. ಅವತ್ತು ಪರಿಸ್ಥಿತಿಯನ್ನ ಸಂಭಾಳಿಸುವಲ್ಲಿ ವಿಫಲವಾದ ಕಾರಣ, ಸಹಜವಾಗಿಯೇ ಮನಸ್ಥಿತಿ ಹಾಳಾಗಿಯೇ ಇರುತ್ತೆ. ಇದೆಲ್ಲದರಿಂದ ಹೊರ ಬರಲು ಸಮಯ ಬೇಕೆ ಬೇಕು. ಹೇಗೆ ಯೋಚನೆ ಮಾಡಿದರೂ ಡೆವಿಲ್ ಈ ವರ್ಷ ಬರಲು ಸಾಧ್ಯವೇ ಇಲ್ಲ.
ಈ ಕಾರಣಕ್ಕೆ ಧ್ರುವ ಸರ್ಜಾ ಎದುರಿದ್ದ ಲೈನ್ ಕ್ಲಿಯರ್ ಆಗಿದೆ ಎಂಬ ಮಾತು ಚಂದನವನದಲ್ಲಿ ಕೇಳಿ ಬರುತ್ತಿದೆ. ಈ ಮೊದಲು ಡಿಸೆಂಬರ್‌ನಲ್ಲಿ ರಿಲೀಸ್ ಎಂದು ಹೇಳಿದ್ದ ಚಿತ್ರತಂಡ ಸದ್ಯದಲ್ಲಿಯೇ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೆ.ಡಿ ಬಿಡುಗಡೆಯಾಗಲಿದೆ ಎಂಬ ಘೋಷಣೆಯನ್ನೂ ಮಾಡುವ ಸಾಧ್ಯತೆ ಇದೆ ಎಂಬ ಚರ್ಚೆ ಕೂಡ ನಡೆಯುತ್ತಿದೆ.

ಅಂದ್ಹಾಗೇ ದರ್ಶನ್ ಅರೆಸ್ಟ್ ಆದ ಬೆನ್ನಲ್ಲಿಯೇ ಮಾಧ್ಯಮದವರು, ಧ್ರುವಾ ಅವರಲ್ಲಿ ಈ ಪ್ರಕರಣದ ಕುರಿತು ಮಾತನಾಡುವಂತೆ ಮನವಿಯನ್ನ ಮಾಡಿಕೊಂಡಿದ್ದರು. ಆದರೆ.. ಆದರೆ, ಧ್ರುವಾ ಸರ್ಜಾಗೆ ಈ ವಿಚಾರದಲ್ಲಿ ಎಳ್ಳಷ್ಟು ಆಸಕ್ತಿ ಇದ್ದಂತೆ ಇಲ್ಲ. ಹೀಗಾಗಿಯೇ ಪ್ರಶ್ನೆ ಕೇಳಿಯೂ ಕೇಳಿಸದಂತೆ ಹೋದರು ಧ್ರುವ ಸರ್ಜಾ.
ಇನ್ನೂ ಧ್ರುವ ಮತ್ತು ದರ್ಶನ್ ಮಧ್ಯೆದ ಮನಸ್ತಾಪದ ಕಥೆ ನಿಮಗೆ ಗೊತ್ತೇ ಇರಬೇಕು. ಆದರೂ ಸಂಕ್ಷಿಪ್ತವಾಗಿ ಹೇಳಬೇಕು ಅಂದರೆ ಕಾವೇರಿಗಾಗಿ ಇಡೀ ಕನ್ನಡ ಚಿತ್ರರಂಗ ಒಂದೇ ವೇದಿಕೆಯನ್ನೇರಿದ್ದ ಸಮಯದಲ್ಲಿ ದರ್ಶನ್ ಮುಖವನ್ನ ಧ್ರುವ ಒಮ್ಮೆಯೂ ನೋಡಿರಲಿಲ್ಲ. ದರ್ಶನ್ ಬಂದಾಗ ಎಲ್ಲರೂ ಎದ್ದು ನಿಂತರೂ ಧ್ರುವ ಮಾತ್ರ ಕುರ್ಚಿಯಿಂದ ಕದಲಿರಲಿಲ್ಲ.ಈ ಕುರಿತು ಒಂದು ವಾರದ ನಂತರ ಪ್ರಶ್ನೆ ಮಾಡಿದಾಗ ಉತ್ತರಿಸಿದ್ದ ಧ್ರುವ, ದರ್ಶನ್ ಅವರು ಹಿರಿಯ ನಟ, ಸೀನಿಯರ್ ಕೂಡ. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲೂ ಅದೇ ಮರ್ಯಾದೆ ಇರುತ್ತೆ. ಅದರೆ ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು ಎಂದಿದ್ದರು. ದರ್ಶನ್ ಕಥೆ ಗೊತ್ತಿಲ್ಲ. ಧ್ರುವ ಆಡಿದ್ದ ಈ ಮಾತು ದರ್ಶನ್ ಅಭಿಮಾನಿಗಳನ್ನ ಕೆರಳಿಸಿತ್ತು. ಅಲ್ಲಿಂದ ಎರಡು ಬಣದ ನಡುವೆ ಸಮರ ಶುರುವಾಗಿತ್ತು.

ಒಟ್ನಲ್ಲಿ ಸದ್ಯಕ್ಕೆ ಡಿಸೆಂಬರ್ ನಲ್ಲಿ ಡೆವಿಲ್ ತೆರೆಗೆ ಬರಲು ಸಾಧ್ಯ ಇಲ್ಲ. ಹೀಗಾಗಿ ಗಲ್ಲಾಪೆಟ್ಟಿಗೆಯ ಅಖಾಡಕ್ಕೆ ಧ್ರುವ ಒಬ್ಬರೇ ಧುಮುಕಲಿದ್ದಾರೆ. ಇನ್ನೂ ಈ ವರ್ಷ ಕನ್ನಡ ಚಿತ್ರರಂಗದ ಹಣೆಬರಹವೇ ಸರಿ ಇಲ್ಲ. ಕೆ.ಡಿಯಿಂದ ಆದರೂ ಹಣೆಬರಹ ಬದಲಾಗುತ್ತಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ


Click it and Unblock the Notifications











