'ನಾನು ಧನ್ಯ' ಎಂದು ಡಾಲಿ ಹೇಳಿದ ಬೆನ್ನಲ್ಲೇ 'ಅಮೃತಾ ಅಯ್ಯಂಗಾರ್' ಮದ್ವೆ ಚಿಂತೆ ಮಾಡ್ತಿರುವ ಅಭಿಮಾನಿಗಳು..!
ಡಾಲಿ ಧನಂಜಯ್ ರಾಜ್ಯೋತ್ಸವದ ಪ್ರಯುಕ್ತ ಶುಭ ಸುದ್ದಿಯನ್ನು ನೀಡಿದ್ದಾರೆ. ಮದುವೆಯಾಗುತ್ತಿರುವ ತಮ್ಮ ಮನದರಸಿಯನ್ನು ಪರಿಚಯ ಮಾಡಿಸಿದ್ದಾರೆ. ಮದ್ವೆಗೆ ಎಲ್ಲರು ಬರಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ. ಸಹಜವಾಗಿ ಡಾಲಿ ಧನಂಜಯ್ ಅವರ ಅಭಿಮಾನಿಗಳಿಗೆ ಈ ಸುದ್ದಿ ಖುಷಿಯನ್ನು ನೀಡಿದೆ. ಡಾಲಿ ಧನಂಜಯ್ ಅವರಿಗೆ ಶುಭಾಶಯಗಳ ಮಹಾಪೂರ ಕೂಡ ಹರಿದು ಬರುತ್ತಿದೆ. ಇದೇ ಸಮಯದಲ್ಲಿ ಇನ್ನೊಂದು ವರ್ಗಕ್ಕೆ ಅಮೃತಾ ಐಯ್ಯಂಗಾರ್ ಮದುವೆಯ ಚಿಂತೆ ಶುರುವಾಗಿದೆ.
ಹೌದು, ಅಸಲಿಗೆ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ ಅನೇಕರಲ್ಲಿತ್ತು. ಯಾಕೆಂದರೆ.. ಇಬ್ಬರು ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದ್ದರು. ಎಲ್ಲೆಡೆ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಇನ್ನೂ ಎಲ್ಲಕ್ಕಿಂತ ಬಹೆಚ್ಚಾಗಿ ಗಣೇಶ್ ನಡೆಸಿಕೊಡ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ಅಮೃತಾ ಐಯ್ಯಂಗಾರ್ ಅವರ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ''ಮಂಡಿಯೂರಿ ಬೇಡುವೆನು.. ಹೃದಯ ಕಾಲಡಿ ಇಡುವೆನು.. ತೆಗೆದು ಬಚ್ಚಿಟ್ಕೋ, ಇಲ್ಲ ತುಳಿದು ಕಾಲ್ ತೊಳೆದುಕೋ, ಬೇಡ ಈ ಮೌನ, ಮಾಡು ತೀರ್ಮಾನ'' ಎಂದೆಲ್ಲ ಕವಿತೆಯನ್ನು ಹೇಳಿದ್ದರು. ಧನಂಜಯ್ ನೀಡಿದ್ದ ಗುಲಾಬಿ ಹೂ ಪಡೆದು ಅಮೃತಾ ಐಯ್ಯಂಗಾರ್ ನಾಚಿ ನೀರಾಗಿದ್ದರು.
ಈ ಎಲ್ಲ ಕಾರಣಕ್ಕೆ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ಹೋದಲ್ಲಿ ಬಂದಲ್ಲಿ ಜನ ಇವರ ಕುರಿತು ಮಾತನಾಡಲು ಶುರುಮಾಡಿದ್ದರು. ಜೋಡಿ ಚೆನ್ನಾಗಿದೆ ಎನ್ನುತ್ತಿದ್ದರು. ಇನ್ನೂ ಕೆಲವರು ನಿಮ್ಮ ಇಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಕೂಡ ನೇರಾನೇರವಾಗಿಯೇ ಇಬ್ಬರ ಬಳಿ ಕೇಳಿದ್ದರು. ಇದಕ್ಕೆ ಇಬ್ಬರು ನಕ್ಕು ಸುಮ್ಮನಾಗುತ್ತಿದ್ದರು. ಈ ವಿಚಾರ ಊರಲ್ಲೆಲ್ಲಾ ಹರಡಿರುವ ಕಾರಣಕ್ಕೆ ನನಗೆ ಯಾರು ಹೆಣ್ಣು ಕೊಡ್ತಿಲ್ಲ ಎಂದು ಡಾಲಿ ಧನಂಜಯ್ ಹೇಳುತ್ತಿದ್ದರು.
ಆದರೆ ಈಗ ಡಾಲಿ ಧನಂಜಯ್ ಮದುವೆಗೆ ಅಣಿಯಾಗಿದ್ದಾರೆ. ಆದರೆ ಅಮೃತಾ ಐಯ್ಯಂಗಾರ್ ಜೊತೆ ಅಲ್ಲ ಬದಲಿಗೆ ಡಾಕ್ಟರ್ ಧನ್ಯತಾ ಅವರ ಜೊತೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅಮೃತಾ ಐಯ್ಯಂಗಾರ್ ಅವರಿಗೆ ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಅಣ್ಣಂದು ಮದುವೆ ಫಿಕ್ಸ್ ಆಯ್ತು ನೀವು ಬೇಗ ಮದುವೆಯಾಗಿ ಎನ್ನುತ್ತಿದ್ದಾರೆ.

ಇನ್ನೂ ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರವನ್ನು ಕೂಡ ನೀಡಿರುವ ಅಮೃತಾ ಅಯ್ಯಂಗಾರ್ ಮದ್ವೆ ಯಾವಾಗ ಎನ್ನುವುದು ಇನ್ನೂ ಗೊತ್ತಿಲ್ಲ ಎಂದಿದ್ದಾರೆ. ಅಮೃತಾ ಅವರ ಈ ಉತ್ತರಕ್ಕೆ ಪ್ರತಿಕ್ರಿಯೆಯನ್ನು ಕೂಡ ನೀಡಿರುವ ಕೆಲವರು ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು ಎಂದು ಆಶೀರ್ವಾದವನ್ನು ಮಾಡಿದ್ದಾರೆ. ಇನ್ನುಳಿದಂತೆ ಡಾಕ್ಟರ್ ಧನ್ಯತಾ ಜೊತೆ ಮದುವೆಯಾಗಲು ಸಿದ್ಧವಾಗಿರುವ ಡಾಲಿ ಧನಂಜಯ್ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ತರುಣ್ ಸುಧೀರ್, ಸೋನಾಲ್ ಮಾಂಥೆರೋ, ವಸಿಷ್ಠ ಸಿಂಹ, ಸಪ್ತಮಿ ಗೌಡ ಸೇರಿ ಚಿತ್ರರಂಗದ ಅನೇಕರು ಡಾಲಿ ಧನಂಜಯ್ ಅವರಿಗೆ ಶುಭಾಶಯ ಕೋರಿದ್ದಾರೆ.
ಇನ್ನೂ ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಅವರ ಮದುವೆ ಮುಂಬರುವ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ನಡೆಯಲಿದೆ ಎನ್ನುವ ಸುದ್ದಿ ಇದೆ. ಅದೇ ದಿನ ಆರತಕ್ಷತೆ ಸಮಾರಂಭ ಕೂಡ ನಡೆಯಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನೂ ರಾಜಕೀಯದ ಗಣ್ಯರು ಮತ್ತು ಚಿತ್ರರಂಗ ಅನೇಕರು ಮದುವೆಯಲ್ಲಿ ಭಾಗಿಯಾಗಲಿದ್ದಾರೆ.


Click it and Unblock the Notifications











