ಜೈಲಿನಿಂದ ಹೊರಬಂದರೂ ದರ್ಶನ್, ಅಲ್ಲು ಅರ್ಜುನ್‌ಗೆ ತಪ್ಪಿಲ್ಲ ಸಂಕಷ್ಟ
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಪಡೆದು ಕೊಂಚ ನಿರಾಳರಾಗಿದ್ದಾರೆ. ಅತ್ತ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಒಂದು ದಿನ ಜೈಲಿನಲ್ಲಿ ಇದ್ದು ಬರುವಂತಾಯಿತು. ಆದರೆ ಇಬ್ಬರಿಗೂ ಇನ್ನು ಸಂಕಷ್ಟ ತಪ್ಪಿದಂತೆ ಕಾಣುತ್ತಿಲ್ಲ.
ನಟ ದರ್ಶನ್ ಜಾಮೀನು ಪಡೆದು ಹೊರಬಂದಿದ್ದರೆ ಅಲ್ಲು ಅರ್ಜುನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಇದು ಆಪ್ತರು ಹಾಗೂ ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಪೊಲೀಸರು ಮಾತ್ರ ಇದಕ್ಕೆ ತಿರುಗೇಟು ನೀಡಲು ಮುಂದಾಗಿದ್ದಾರೆ. ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಾಗಲೇ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚಿಸಿದ್ದರು.

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಜಾಮೀನು ಮಂಜೂರಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ. "ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ" ಎಂದಿದ್ದಾರೆ.
ಅಕ್ಟೋಬರ್ 30ರಂದು ಮಧ್ಯಂತರ ಜಾಮೀನು ಪಡೆದು ನಟ ದರ್ಶನ್ ಬಳ್ಳಾರಿ ಜೈಲಿನಿಂದ ಹೊರಬಂದಿದ್ದರು. ಶುಕ್ರವಾರ ಪ್ರಕರಣದಲ್ಲಿ 7 ಜನ ಅರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರೆ ಏನಾಗಬಹುದು ಎನ್ನುವ ಚರ್ಚೆ ಶುರುವಾಗಿದೆ. ಹೈಕೋರ್ಟ್ ಜಾಮೀನು ನೀಡಿರುವುದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳುತ್ತಾ? ಅಥವಾ ಜಾಮೀನು ರದ್ದು ಮಾಡುತ್ತಾ ಕಾದು ನೋಡಬೇಕಿದೆ.
ಸದ್ಯ ಕೆಂಗೇರಿ ಬಿಜಿಎಸ್ ಆಸ್ಪತ್ರೆಯಲ್ಲಿ ನಟ ದರ್ಶನ್ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ(ಡಿಸೆಂಬರ್ 16) ವೈದ್ಯರ ಅನುಮತಿ ಪಡೆದು ಸೆಷನ್ಸ್ ಕೋರ್ಟ್ ಮುಂದೆ ಹಾಜರಾಗಿದ್ದರು. 1 ಲಕ್ಷ ರೂ. ಬಾಂಡ್‌ಗೆ ಸಹಿ ಮಾಡಿ ದರ್ಶನ್ ಮತ್ತೆ ಆಸ್ಪತ್ರೆಗೆ ವಾಪಸ್ ಆಗಿದ್ದಾರೆ.
ಅತ್ತ ಅಲ್ಲು ಅರ್ಜುನ್‌ಗೆ ಕಾಲ್ತುಳಿತ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡಿದ್ದರ ಬಗ್ಗೆ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. 'ಪುಷ್ಪ'-2 ಸಿನಿಮಾ ಪ್ರೀಮಿಯರ್ ಶೋ ವೇಳೆ ಹೈದರಾಬಾದ್ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ಅಭಿಮಾನಿಗಳ ತಳ್ಳಾಟ ಹೆಚ್ಚಾಗಿ ಕಾಲ್ತುಳಿತವಾಗಿ ಮಹಿಳೆಯೊಬ್ಬರು ಸಾವನ್ನಪಿದ್ದರು. ಪ್ರಕರಣ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಕಳೆದ ಶುಕ್ರವಾರ(ಡಿಸೆಂಬರ್ 13) ಅಲ್ಲು ಅರ್ಜುನ್ ನಿವಾಸಕ್ಕೆ ತೆರಳಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಅಷ್ಟರfಲ್ಲಿ ಅಲ್ಲು ಅರ್ಜುನ್ ಪರ ವಕೀಲರು ಮಧ್ಯಂತರ ಜಾಮೀನು ಪಡೆದಿದ್ದರು.
ಮಧ್ಯಂತರ ಜಾಮೀನು ಸಿಕ್ಕರೂ ಬಿಡುಗಡೆ ಪ್ರಕ್ರಿಯೆ ತಡವಾಯಿತು. ಹಾಗಾಗಿ ಅಲ್ಲು ಅರ್ಜುನ್ ಚಂಚಲ್‌ಗೂಡ್ ಜೈಲಿನಲ್ಲಿ ಒಂದು ರಾತ್ರಿ ಕಳೆಯುವಂತಾಯಿತು. ಶನಿವಾರ ಬೆಳ್ಳಂ ಬೆಳಗ್ಗೆ 'ಪುಷ್ಪ'-2 ನಟ ಜೈಲಿನಿಂದ ಬಿಡುಗಡೆ ಆಗಿ ಹೊರ ಬಂದರು. ಬಳಿಕ ತೆಲುಗು ಚಿತ್ರರಂಗದ ಖ್ಯಾತನಾಮರು ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು.
ಇದೀಗ ಹೈದರಾಬಾದ್ ಪೊಲೀಸರು ಕೂ ಅಲ್ಲು ಅರ್ಜುನ್‌ಗೆ ನೀಡಿರುವ ಮಧ್ಯಂತರ ಜಾಮೀನು ರದ್ದ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚರ್ಚೆ ನಡೆಸುತ್ತಿದ್ದಾರೆ. ಉನ್ನತ ಅಧಿಕಾರಿಗಳಿಂದ ಅನುಮತಿ ಪಡೆದು ಮುಂದುವರೆಯಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ ದರ್ಶನ್ ಹಾಗೂ ಅಲ್ಲು ಅರ್ಜುನ್ ಇಬ್ಬರಿಗೂ ಸಂಕಷ್ಟ ಇನ್ನು ತಪ್ಪಿಲ್ಲ ಎನ್ನುವಂತಾಗಿದೆ.


Click it and Unblock the Notifications











