ಅಮೃತಾ ಅಯ್ಯಂಗಾರ್‌ಗೆ ವಿಲನ್ ಆದ ಡಾಲಿ; ಆದರೆ, ಇಲ್ಲೊಂದು ಸ್ಮಾಲ್ ಟ್ವಿಸ್ಟ್
ಯಾವುದೇ ಚಿತ್ರರಂಗಕ್ಕೆ ಹೋದರೂ ಕೆಲವು ಸೂಪರ್ ಹಿಟ್ ಪೇರ್‌ಗಳು ಸಿಗುತ್ತವೆ. ಆ ಜೋಡಿ ಒಟ್ಟಿಗೆ ತೆರೆಮೇಲೆ ಬಂದರೆ ಮುಗಿದೇ ಹೋಯ್ತು. ಆ ಸಿನಿಮಾಗೆ ಯಶಸ್ಸು ಸಿಗೋದು ಗ್ಯಾರಂಟಿ. ಕನ್ನಡ ಚಿತ್ರರಂಗದಲ್ಲೂ ಇಂತಹದ್ದೇ ಒಂದಿಷ್ಟು ಹಿಟ್ ಜೋಡಿಗಳು ಇದ್ದಾವೆ. ಅದರಲ್ಲಿ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಜೋಡಿ ಕೂಡ ಒಂದು.
ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಸ್ಯಾಂಡಲ್‌ವುಡ್‌ನ ಹಿಟ್ ಪೇರ್. ಒಂದಲ್ಲ ಎರಡಲ್ಲ ಮೂರು ಸಿನಿಮಾಗಳಲ್ಲಿ ಈ ಜೋಡಿ ನಟಿಸಿದೆ. ಇದೇ ಕಾರಣಕ್ಕೆ ಈ ಜೋಡಿ ಕಂಡರೆ ಅಭಿಮಾನಿಗಳಿಗೆ ಅದೇನೋ ಪ್ರೀತಿ. ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದರೆ ಅಲ್ಲೊಂದು ಗುಸು ಗುಸು ಗೊತ್ತಿಲ್ಲದಂತೆಯೇ ಶುರುವಾಗಿ ಬಿಡುತ್ತೆ.

ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದ್ದರಿಂದ ಡಾಲಿ-ಅಮೃತಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೇನೋ ಅಂತ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದೂ ಇದೆ. ಒಂದಿಷ್ಟು ದಿನ ಈ ಜೋಡಿಯನ್ನು ಅವರು ಕಾಡಿದ್ದೂ ಇದೆ. ಅದ್ಯಾವಾಗ ಡಾಲಿ ತನ್ನ ಭಾವಿ ಪತ್ನಿಯನ್ನು ಪರಿಚಯಿಸಿದರೋ ಅಲ್ಲಿಂದ ಒಂದಿಷ್ಟು ಮಂದಿ ಸೈಲೆಂಟ್ ಆಗಿದ್ದರು. ಆದರೂ, ಇದೇ ಈ ಗ್ಯಾಪ್‌ನಲ್ಲಿ ಈ ಜೋಡಿಯ ಹೊಸ ಸಿನಿಮಾವೊಂದು ರಿಲೀಸ್‌ಗೆ ರೆಡಿಯಾಗಿದೆ.
ಧನಂಜಯ್ ಕೆಲವು ದಿನಗಳ ಹಿಂದಷ್ಟೇ ತಮ್ಮ ಭಾವಿ ಪತ್ನಿ ಧನ್ಯತಾರನ್ನು ಪರಿಚಯಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಧನ್ಯತಾರನ್ನು ಮುಂದಿನ ವರ್ಷ ವಿವಾಹವಾಗಲಿದ್ದಾರೆ. ಅದಕ್ಕೂ ಮುನ್ನ ಈ ಜೋಡಿ ಫೋಟೊಶೂಟ್ ಕೂಡ ಮಾಡಿಸಿದೆ. ಅಲ್ಲಿವರೆಗೂ ಧನಂಜಯ್ ಹಾಗೂ ಅಮೃತಾ ಇಬ್ಬರೂ ಸಪ್ತಪದಿ ತುಳಿಯುತ್ತಾರೆನ್ನುವ ಸುದ್ದಿ ಓಡಾಡಿದ್ದೇ ಹೆಚ್ಚು. ಇತ್ತ ಧನಂಜಯ್ ವಿವಾಹ ತಯಾರಿಯಲ್ಲಿ ಇರುವಾಗಲೇ ತೆರೆಮೇಲಿನ ಈ ಜೋಡಿ ಹೊಸ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಅದು ರಿಲೀಸ್ ಆಗುತ್ತಿದೆ.

ಹೌದು, ಡಾಲಿ ಧನಂಜಯ್ ಹೊಸ ಸಿನಿಮಾ 'ಜಿಬ್ರಾ' ರಿಲೀಸ್‌ಗೆ ರೆಡಿಯಾಗಿದೆ. ಇದೇ ನವೆಂಬರ್ 22ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ಮೂಲತ: ತೆಲುಗಿನಲ್ಲಿ ನಿರ್ಮಾಣವಾಗಿದ್ದು, ಕನ್ನಡದಲ್ಲಿಯೂ ಡಬ್ ಆಗಿ ರಿಲೀಸ್ ಆಗುತ್ತಿದೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಸತ್ಯದೇವ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಸತ್ಯದೇವ್‌ಗೆ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾಲಿಯದ್ದು ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಪವರ್‌ಫುಲ್ ಪಾತ್ರವೆಂದು ಹೇಳಲಾಗುತ್ತಿದೆ. ನಟ ರಾಕ್ಷಸನ ಖಡಕ್ ವಿಲನ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಅಮೃತಾ ಅಯ್ಯಂಗಾರ್ ಆರಾಧಿಯಾ ಅನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ಅಮೃತಾ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರ ಪಾತ್ರವೇನು ಅನ್ನುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.
ಈ ಹಿಂದೆ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಜೋಡಿಯಾಗಿ ನಟಿಸಿದ ಮೂರು ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಮೊದಲ ಸಿನಿಮಾ 'ಪಾಪ್ ಕಾರ್ನ್ ಮಂಕಿ ಟೈಗರ್'. ಈ ಸಿನಿಮಾವನ್ನು ದುನಿಯಾ ಸೂರಿ ನಿರ್ದೇಶಿಸಿದ್ದರು. ಅದು ಹಿಟ್ ಆಗಿತ್ತು. ಧನಂಜಯ್ ನಿರ್ಮಿಸಿದ್ದ ಎರಡನೇ ಸಿನಿಮಾ 'ಬಡವ ರಾಸ್ಕಲ್' ಕೂಡ ಹಿಟ್ ಆಯ್ತು. ಅದೇ ಮೂರನೇ ಸಿನಿಮಾ ಕೆಆರ್‌ಜಿ ಸ್ಟುಡಿಯೋ ನಿರ್ಮಿಸಿದ 'ಗುರುದೇವ್ ಹೊಯ್ಸಳ' ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಈಗ ನಾಲ್ಕನೇ ಸಿನಿಮಾ 'ಜಿಬ್ರಾ' ಬಿಡುಗಡೆಯಾಗುತ್ತಿದೆ.


Click it and Unblock the Notifications










