ಚುನಾವಣೆ ಬಳಿಕ ನಿಟ್ಟುಸಿರು ಬಿಟ್ಟ ಸ್ಯಾಂಡಲ್‌ವುಡ್; ಈ ವಾರ ಯಾವೆಲ್ಲ ಚಿತ್ರಗಳು ರಿಲೀಸ್?
ಲೋಕಸಭೆ ಚುನಾವಣೆ ಹಾಗೂ ಐಪಿಎಲ್ ಭರಾಟೆ ನಡುವೆ ತೆರೆಮೇಲೆ ಸಿನಿಮಾಗಳ ಆರ್ಭಟ ಕಮ್ಮಿ ಆಗಿತ್ತು. ಒಟ್ಟೊಟ್ಟಿಗೆ ಐಪಿಎಲ್ ಕ್ರಿಕೆಟ್ ಟೂರ್ನಿ, ಲೋಕಸಭೆ ಚುನಾವಣೆ ಬಂದು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಲು ಹಿಂದೇಟು ಹಾಕುವಂತಾಗಿತ್ತು. ಕಳೆದೆರಡು ತಿಂಗಳಲ್ಲಿ ಕನ್ನಡದ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲಿಲ್ಲ.
ಅಂತೂ ಇಂತೂ ಇದೀಗ ಐಪಿಎಲ್ ಹಾಗೂ ಚುನಾವಣೆ ಎರಡೂ ಮುಕ್ತಾಯವಾಗಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ಅಧಿಕಾರ ಬರಲಿದೆ. ಎನ್‌ಡಿಎ ಒಕ್ಕೂಟ 5 ವರ್ಷಗಳ ಕಾಲ ಸುಭದ್ರ ಸರ್ಕಾರ ಕೊಡಲು ಸಿದ್ಧವಾಗಿದೆ. ಶನಿವಾರವೇ 3ನೇ ಬಾರಿ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸಿಲಿದ್ದಾರೆ. ಇನ್ನು ಕನ್ನಡದಲ್ಲಿ ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಆಗ್ತಿದೆ.

ಮುಂದಿನ ವಾರ ಧನಂಜಯ್ ನಟನೆಯ 'ಕೋಟಿ' ಸಿನಿಮಾ ತೆರೆಗೆ ಬರ್ತಿದೆ. ಇನ್ನು ಈ ವಾರ ಮೂರು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲಿವೆ. ಅದರಲ್ಲಿ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಕೂಡ ಇದೆ. 3 ವರ್ಷಗಳ ಹಿಂದೆ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಈ ಸಿನಿಮಾ ಮತ್ತೆ ತೆರೆಗೆ ಬರ್ತಿದೆ. ತರುಣ್ ಸುಧೀರ್ ನಿರ್ದೇಶನದ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದರು.
ನಟ ದರ್ಶನ್ ಎರಡು ಶೇಡ್‌ಗಿಳಿರುವ ಪಾತ್ರದಲ್ಲಿ 'ರಾಬರ್ಟ್' ಆಗಿ ಅಬ್ಬರಿಸಿದ್ದರು. ಇತ್ತೀಚೆಗೆ ದೊಡ್ಡ ಸಿನಿಮಾಗಳ ಬಿಡುಗಡೆ ಇಲ್ಲದೇ ಥಿಯೇಟರ್‌ಗಳ ಬಾಗಿಲು ಮುಚ್ಚುವಂತಹ ಸಂದರ್ಭ ಎದುರಾಗಿತ್ತು. ಇಂತಹ ಸಮಯದಲ್ಲಿ ಒಂದಷ್ಟು ಹಿಟ್ ಸಿನಿಮಾಗಳು ರೀ ರಿಲೀಸ್ ಆಗಿ ಸದ್ದು ಮಾಡಿತ್ತು. ಪುನೀತ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದಿದ್ದ 'ಜಾಕಿ' ಸಖತ್ ಸದ್ದು ಮಾಡಿತ್ತು.

ಇತ್ತೀಚೆಗೆ ಉಪೇಂದ್ರ ನಟನೆಯ 'A' ಸಿನಿಮಾ ಮತ್ತೆ ತೆರೆಗೆ ಬಂದು ಅಭಿಮಾನಿಗಳನ್ನು ರಂಜಿಸಿತ್ತು. ವಿಷ್ಣುವರ್ಧನ್ ಅಭಿನಯದ 'ಕೃಷ್ಣನೀ ಬೇಗನೆ ಬಾರೋ' ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದ್ದವು. ಅಪ್ಪು ನಟನೆಯ 'ಅಂಜನಿಪುತ್ರ' ಹಾಗೂ 'ಪವರ್' ಚಿತ್ರಗಳು ಒಂದೇ ದಿನ ರೀ-ರಿಲೀಸ್ ಆಗಿದ್ದು ಸುದ್ದಿ ಆಗಿತ್ತು. ಇದೀಗ ದರ್ಶನ್ 'ರಾಬರ್ಟ್' ಸಿನಿಮಾ ಸರದಿ.
ನರ್ತಕಿ, ಸ್ವಪ್ನ, ವೈಭವ್, ನವರಂಗ್, ಕಾಮಾಕ್ಯ, ವಿನಾಯಕ, ಮಾರುತಿ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ 'ರಾಬರ್ಟ್' ಸಿನಿಮಾ ಬಿಡುಗಡೆ ಆಗುತ್ತಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ತೆರೆಗೆ ಬರ್ತಿದೆ. 'ರಾಬರ್ಟ್' ಜೊತೆಗೆ ಹೊಸಬರ 'ಸಹರಾ' ಹಾಗೂ 'ಅನರ್ಥ' ಚಿತ್ರಗಳು ಇದೇ ವಾರ ಪ್ರೇಕ್ಷಕರ ಮುಂದೆ ಬರಲಿವೆ.


Click it and Unblock the Notifications











