"ಆರ್‌ಸಿಬಿ ಕಪ್ ಗೆದ್ರೆ ಏನೇನಾಗುತ್ತೋ ಗೊತ್ತಿಲ್ಲ, ಫ್ಯಾನ್ಸ್‌ನ ತಡೆಯೋಕ್ಕಂತೂ ಆಗಲ್ಲ"; ಯುವಕನ ವೀಡಿಯೋ ವೈರಲ್
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮೊನ್ನೆ(ಜೂನ್ 4) ಭಾರೀ ದುರಂತವೇ ನಡೆದು ಹೋಗಿದೆ. ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಘಟನೆ ನಡೆದಿತ್ತು. ದುರಂತದಲ್ಲಿ 11 ಮಂದಿ ಪ್ರಾಣಬಿಟ್ಟಿದ್ದು 30ಕ್ಕೂ ಅಧಿಕ ಜನ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೇಳೆ ಆರ್‌ಸಿಬಿ ಕಪ್ ಗೆದ್ದರೆ ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆ ಮೇರೆ ಮೀರುತ್ತದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದ ವೀಡಿಯೋ ಈಗ ವೈರಲ್ ಆಗ್ತಿದೆ.
ಕಾಲ್ತುಳಿತಕ್ಕೆ ಕಾರಣ ಯಾರು? ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಕಾರ್ಯಕ್ರಮಕ್ಕೆ ಸರಿಯಾದ ವ್ಯವಸ್ಥೆ ಮಾಡದ ಸರ್ಕಾರದ ವಿರುದ್ಧವೂ ಜನ ಅಸಮಾಧಾನಗೊಂಡಿದ್ದಾರೆ. ಘಟನೆ ಹಿನ್ನೆಲೆ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿ 5 ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಹಾಗೂ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸಿಎಂ ಹಾಗೂ ಡಿಸಿಎಂ ರಾಜಿನಾಮೆ ಕೊಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

ಎರಡೆರಡು ಕಡೆ ಕಾರ್ಯಕ್ರಮ ಆಯೋಜಿಸಿ ಪೊಲೀಸರು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಂತೆ ಆಗಿತ್ತು. ಈ ಬಗ್ಗೆ ಕೂಡ ಅಸಮಾಧಾನ ವ್ಯಕ್ತವಾಗುತ್ತಿದೆ. ಕರ್ನಾಟಕ ಸರ್ಕಾರ ಹಾಗೂ ಕೆಎಸ್‌ಸಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ಕೆಲ ಅಭಿಮಾನಿಗಳ ಅತಿರೇಕದ ಬಗ್ಗೆಯೂ ಬೇಸರ ವ್ಯಕ್ತವಾಗುತ್ತಿದೆ. ಜೀವಕ್ಕಿಂತ ಈ ಸಂಭ್ರಮಾಚರಣೆ ಮುಖ್ಯವಾಗಿತ್ತಾ? ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ. ಇನ್ನು ಅಭಿಮಾನಿಗಳು ಯಾವ ಸಂಖ್ಯೆಯಲ್ಲಿ ವಿಜಯೋತ್ಸವಕ್ಕೆ ಬರಬಹುದು ಎಂದು ಅಂದಾಜಿಸದೇ ಹೋಗಿದ್ದು ಘಟನೆಗೆ ಕಾರಣ ಎನ್ನಬಹುದು.
ಮಂಗಳವಾರ ರಾತ್ರಿ ಆರ್‌ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಿಸಿದ್ದರು. ಹೊರರಾಜ್ಯಗಳಲ್ಲಿ ಕೂಡ ಕೆಲವಡೆ ಅಭಿಮಾನಿಗಳು ಬೀದಿಗಿಳಿದು ಸೆಲೆಬ್ರೇಷನ್ ಮಾಡಿದ್ದರು. ಇದನ್ನೆಲ್ಲಾ ಮನಗಂಡು ಸರ್ಕಾರ ಕಾರ್ಯಕ್ರಮದ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ಫೈನಲ್ ಪಂದ್ಯಕ್ಕೂ ಮುನ್ನ ಈ ಬಾರಿ ಆರ್‌ಸಿಬಿ ಕಪ್ ಗೆದ್ದರೆ ಅಭಿಮಾನಿಗಳ ಅಭಿಮಾನ ಯಾವ ರೀತಿ ಇರುತ್ತದೆ ಎಂದು ಯುವಕನೊಬ್ಬ ಆಡಿದ್ದ ಮಾತುಗಳು ಈಗ ಸದ್ದು ಮಾಡ್ತಿದೆ.
"ಆರ್‌ಸಿಬಿ ಕಪ್ ಗೆದ್ದರೆ ನೆಟ್‌ವರ್ಕ್ ಎಲ್ಲಾ ಹ್ಯಾಂಗ್ ಆಗುತ್ತೆ. ಒಂದರ್ಥದಲ್ಲಿ ಸಣ್ಣ ಭೂಕಂಪ ಆಗುವಂತಹ ಅನುಭವ ಆಗುತ್ತದೆ. ಪಂದ್ಯ ಗೆದ್ದ ಬಳಿಕ ಎಲ್ಲರೂ ಮನೆ ಸೇರಿಕೊಳ್ಳಿ. 3ನೇ ವಿಶ್ವ ಯುದ್ಧಕ್ಕಿಂತ ಪರಿಸ್ಥಿತಿ ಭಿನ್ನ ಇರಲ್ಲ. ಅಷ್ಟರಮಟ್ಟಿಗೆ ಅಭಿಮಾನಿಗಳ ಉತ್ಸಾಹ ಇರುತ್ತದೆ. ಕುಡಿಯದೇ ನಶೆ ಏರುತ್ತೆ, ಬಡವರು ಶ್ರೀಮಂತರಂತೆ ಆಡುತ್ತಾರೆ. ರೋಡಲ್ಲಿ ಎಷ್ಟೋ ಜನ ಬಿದ್ದಿರುತ್ತಾರೆ. ಬಟ್ಟೆ ಅವರ ಮೈಮೇಲೆ ಇರುತ್ತೋ ಇಲ್ವೋ ಗೊತ್ತಿಲ್ಲ. ಆರ್‌ಸಿಬಿ ಮಹಿಳಾ ತಂಡ ಗೆದ್ದಾಗಲೇ ಅಭಿಮಾನಿಗಳು ಹೆಂಗೆಂಗೋ ಆಡಿದ್ದರು. ನಾನು ಕೂಡ ವಿಚಿತ್ರವಾಗಿ ಆಡಿದ್ದೆ. ಇನ್ನು ಈ ಸಲ ನಮ್ಮ ಹುಡುಗರು ಗೆದ್ರೆ, ಎಲ್ಲರೂ ದಿಕ್ಕಾಪಾಲಾಗಿ ಹೋಗುತ್ತಾರೆ" ಎಂದು ಯುವಕ ಹೇಳಿದ್ದ. ಮೊನ್ನೆ ಕೆಲವರ ಸಂಭ್ರಮಾಚರಣೆ ನೋಡಿದರೆ ಯುವಕನ ಮಾತು ನಿಜ ಅನ್ನಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ ಒಬ್ಬೊರದ್ದು ಒಂದೊಂದು ಕಥೆ. ಯುವಕರು ಮಾತ್ರವಲ್ಲ ಮಹಿಳೆಯರು, ಮಕ್ಕಳು ಕೂಡ ಅಂದು ಸಂಭ್ರಮಾಚರಣೆಗೆ ಬಂದಿದ್ದರು. 2 ಲಕ್ಷಕ್ಕೂ ಹೆಚ್ಚು ಜನ ಬೀದಿಗೆ ಇಳಿದಿದ್ದರು ಎನ್ನುವ ಅಂದಾಜಿದೆ. ಎಲ್ಲರಿಗೂ ಆರ್‌ಸಿಬಿ ಗೆಲುವು ತಮ್ಮದೇ ಗೆಲುವು ಎನ್ನುವಂತಾಗಿತ್ತು. ಆರ್‌ಸಿಬಿ ತಂಡವನ್ನು ನೋಡಬೇಕು, ಮುಖ್ಯವಾಗಿ ವಿರಾಟ್ ಕೊಹ್ಲಿಯ ದರ್ಶನ ಮಾಡಬೇಕು ಎನ್ನುವುದು ಬಹುತೇಕರ ಆಸೆಯಾಗಿತ್ತು. 18 ವರ್ಷಗಳ ಬಳಿಕ ಆರ್‌ಸಿಬಿ ತಂಡ ಮೊದಲ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದು ಭಾರೀ ಸಂಭ್ರಮಕ್ಕೆ ಕಾರಣವಾಗಿತ್ತು.


Click it and Unblock the Notifications











