ಕಂದಮ್ಮ ಕೀರ್ತನಾ ಚಿಕಿತ್ಸೆಗಾಗಿ ಸುದೀಪ್ ಕರೆಗೆ ಓಗೊಟ್ಟ ಜನ; ಹರಿದು ಬಂದಿದ್ದು ಎಷ್ಟು ಹಣ?
ಪುಟ್ಟ ಕಂದಮ್ಮ ಕೀರ್ತನಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇತ್ತೀಚೆಗೆ ನಟ ಸುದೀಪ್ ಮನವಿ ಮಾಡಿ ಆಕೆಯ ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಿದ್ದರು. 2 ತಿಂಗಳ ಹಿಂದೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡ ಕೀರ್ತನಾಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಕಿಚ್ಚ ಸುದೀಪ್ ಮನವಿ ಮಾಡಿದ ಮೇಲೆ ಆಕೆಯ ಕುಟುಂಬಕ್ಕೆ ಹೆಚ್ಚಿನ ನೆರವು ಹರಿದು ಬರ್ತಿದೆ.
ಅರಣ್ಯ ಇಲಾಖೆಯ ಡೆಪ್ಯೂಟಿ ಆರ್‌ಎಫ್‌ಒ ಕಿಶೋರ್ ಕುಮಾರ್ ಹಾಗೂ ಅವರ ಪತ್ನಿ ನಾಗಶ್ರೀ ದಂಪತಿ ಮಗಳು ಕೀರ್ತನಾ. 2 ವರ್ಷದ ಕಂದಮ್ಮ ಬಲು ಅಪರೂಪದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ(SMA) ಟೈಪ್ 2 ಎಂಬ ಜೆನೆಟಿಕ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಕೆಯ ಕಾಯಿಲೆ ಎಷ್ಟು ಗಂಭೀರ ಸ್ವರೂಪದ್ದು ಆಕೆ ಚೇತರಿಸಿಕೊಳ್ಳಲು ಎಷ್ಟು ಹಣ ಬೇಕು ಎಂದು ಕಿಚ್ಚ ಸುದೀಪ್ ತಿಳಿಸಿದ್ದರು.

ಪುಟ್ಟ ಕಂದಮ್ಮ ಕೀರ್ತನಾಳ ಚಿಕಿತ್ಸಗೆ ಬರೋಬ್ಬರಿ 16 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ. ಒಂದು ತಿಂಗಳ ಸಿರಫ್‌ಗೆ ಅಂದಾಜು 12 ಲಕ್ಷ ರೂ. ಬೇಕಾಗುತ್ತಿದೆ. ಇದೇ ಕಾರಣಕ್ಕೆ ನಟ ಸುದೀಪ್ ಸೇರಿದಂತೆ ಸಾಕಷ್ಟು ಜನ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ. ಸುದೀಪ್ ಈಗಾಗಲೇ ನಾನು ಸಹಾಯ ಮಾಡಿದ್ದೇನೆ, ನೀವು ಕೈ ಜೋಡಿಸಿ ಎಂದು ಕೇಳಿಕೊಂಡಿದ್ದರು.
ಒಂದು ವರ್ಷ ತುಂಬುವವರೆಗೂ ಎಲ್ಲಾ ಮಕ್ಕಳಂತೆ ಇದ್ದಳು ಕೀರ್ತನಾ. ಆದರೆ ಆ ಬಳಿಕ ಎಲ್ಲಾ ಮಕ್ಕಳಂತೆ ತೆವಳಲು, ನಡೆಯಲು ಸಾಧ್ಯವಾಗದೇ ಇದ್ದಾಗ ಮಗಳನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. 4 ತಿಂಗಳ ಕಾಲ ಸಾಕಷ್ಟು ತಪಾಸಣೆ ನಡೆಸಿ ಕೀರ್ತನಾಗೆ ಇದ್ದ ಕಾಯಿಲೆಯನ್ನು ವೈದ್ಯರು ಗುರ್ತಿಸಿದ್ದರು. SMA ಟೈಪ್ 2 ಅಷ್ಟು ಸುಲಭವಾಗಿ ಗುರ್ತಿಸಲು ಸಾಧ್ಯವಾಗುವುದಿಲ್ಲ. ನಿಲ್ಲಲು, ಕೂರಲು ಕೀರ್ತನಾ ಕಷ್ಟಪಡುತ್ತಿದ್ದಾಳೆ.
ಚಿಕಿತ್ಸೆ ಕೊಡದೇ ಇದ್ದರೆ ಮಗುವಿನ ದೇಹದ ನರಗಳು ಹಾನಿಗೊಳಗಾಗುತ್ತದೆ. ಅಷ್ಟು ಸುಲಭವಾಗಿ ಈ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿರುವುದಾಗಿ ಕೀರ್ತನಾ ಪೋಷಕರು ಹೇಳಿದ್ದಾರೆ. ನಟ ಸುದೀಪ್ ಅವರು ಕೂಡ ತಮ್ಮ ಕೈಲಾದ ಸಹಾಯವನ್ನು ನೇರವಾಗಿ ಆಸ್ಪತ್ರೆಗೆ ತಲುಪಿಸುವುದಾಗಿ ಹೇಳಿದ್ದಾರೆ. ಕೀರ್ತನಾ ರೀತಿ ಇನ್ನು ಕೆಲ ಮಕ್ಕಳು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸುದೀಪ್ ವೀಡಿಯೋ ಮಾಡಿ ಮಾತನಾಡಿದ ಬಳಿಕ ಸಾಕಷ್ಟು ಜನರಿಗೆ ಈ ಅಪರೂಪದ ಕಾಯಿಲೆ ಬಗ್ಗೆ ಗೊತ್ತಾಗಿದೆ.
ವೈದ್ಯರ ಸಲಹೆಯಂತೆ ಸ್ವಿಜರ್‌ಲ್ಯಾಂಡ್‌ನಿಂದ ಕೀರ್ತನಾಗೆ ಸಿರಫ್ ತರಿಸಿ ಕೊಡಲಾಗುತ್ತಿದೆ. ಹಿರಿಯ ನಟಿ ತಾರಾ, ನಟ ಜಿಮ್ ರವಿ ಸೇರಿದಂತೆ ಕೆಲವರು ಈಗಾಗಲೇ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಸುದೀಪ್ ಕರೆ ನೀಡಿದ ಬಳಿಕ 38 ಲಕ್ಷ ರೂಪಾಯಿ ಹಣ ಕೀರ್ತನಾ ಪೋಷಕರ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ಈ ಬಗ್ಗೆ ಆಕೆಯ ಪೋಷಕರು ಮಾಹಿತಿ ನೀಡಿದ್ದಾರೆ.
ಈಗಾಗಲೇ 4 ತಿಂಗಳಿಂದ ಕೀರ್ತನಾ ಚಿಕಿತ್ಸೆಗೆ 25 ಲಕ್ಷಕ್ಕೂ ಅಧಿಕ ಹಣವನ್ನು ಪೋಷಕರು ವ್ಯಯಿಸಿದ್ದಾರೆ. ಮುಂದೆ ಮಗುವಿನ ಚಿಕಿತ್ಸೆಗಾಗಿ ನೆರವು ನೀಡುವಂತೆ ಜನತೆಯಲ್ಲಿ ಕೋರಿದ್ದಾರೆ. ಸುದೀಪ್ ಅವರ ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಮಗಳನ್ನು ಉಳಿಸಿಕೊಳ್ಳುತ್ತೇವೆ, ಆಕೆಯ ಈ ಕಾಯಿಲೆಯನ್ನು ಗುಣ ಪಡಿಸುತ್ತೇವೆ ಎಂದು ಪೋಷಕರು ಹೇಳಿದ್ದಾರೆ.
ಸುದೀಪ್ ಅವರಿಗೂ ಮುನ್ನ ಅನಿಲ್ ಕುಂಬ್ಳೆ ವೀಡಿಯೋ ಮಾಡಿ ಕೀರ್ತನಾ ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಿದ್ದರು. ಆಗ 20 ಲಕ್ಷ ರೂಪಾಯಿ ಹಣ ಜನರಿಗೆ ತಮ್ಮ ಖಾತೆಗೆ ಬಂದಿತ್ತು ಎಂದು ಪೋಷಕರು ಮಾಹಿತಿ ನೀಡಿದ್ದಾರೆ. ಅದರಲ್ಲಿ ಕೊಂಚ ಹಣವನ್ನು ಮಗಳ ಸಿರಫ್‌ಗಾಗಿ ಬಳಸಿದ್ದೇವೆ ಎಂದಿದ್ದಾರೆ.


Click it and Unblock the Notifications











