"ಉದಯ್ ಅಗಲಿದಾಗ ದುನಿಯಾ ವಿಜಯ್ ಯಾಕೆ ಬಂದಿಲ್ಲ ಅಂತ ಇಂದಿಗೂ ಕಾಡುತ್ತಿದೆ"; ರಾಜ್ ಉದಯ್
ಕನ್ನಡ ಚಿತ್ರರಂಗ 'ಮಾಸ್ತಿಗುಡಿ' ದುರಂತವನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈ ಸಿನಿಮಾದಲ್ಲಿ ನಟಿಸುತ್ತಿದ್ದ ಇಬ್ಬರು ನಟರು ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಕನ್ನಡ ಚಿತ್ರರಂಗದಲ್ಲಿ ಆಗತಾನೇ ಖಳನಾಯಕರಾಗಿ ಅನಿಲ್ ಹಾಗೂ ಉದಯ್ ಹೆಸರು ಮಾಡಿದ್ದರು. ಇನ್ನೂ ಬೆಳೆಯಬೇಕಿದ್ದ ಈ ನಟರು ದುರಂತ ಅಂತ್ಯ ಕಂಡಿದ್ದರು.
ಉದಯ್ ಹಾಗೂ ಅನಿಲ್ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಖಳನಾಯಕರಾಗಿ ಗುರುತಿಸಿಕೊಳ್ಳುವುದಕ್ಕೆ ದುನಿಯಾ ವಿಜಯ್ ಕಾರಣ. ಇವರಿಬ್ಬರನ್ನು ತಮ್ಮ ಬಳಿಯೇ ಇರಿಸಿಕೊಂಡು ಬೆಳೆಸಿದ್ದರು. ಆದರೆ, ವಿಧಿ ಬೇರೆಯದ್ದೇ ಬರೆದಿತ್ತು. ಅವರದ್ದೇ ಸಿನಿಮಾದಲ್ಲಿ ಖಳನಾಯಕರಂತೆ ನಟಿಸುತ್ತಿದ್ದ ಉದಯ್ ಹಾಗೂ ಅನಿಲ್ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಈ ದುರಂತದ ಬಳಿಕ ಕೆಲವರು ದುನಿಯಾ ವಿಜಯ್, ಸಾಹಸ ನಿರ್ದೇಶಕ ರವಿವರ್ಮಾ ಹಾಗೂ ನಿರ್ದೇಶಕ ನಾಗಶೇಖರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಷ್ಟಕ್ಕೂ ಈಗ್ಯಾಕೆ ಈ ಮಾತು ಅಂದರೆ, ಉದಯ್ ಅವರ ಭಾವ ರಾಜ್ ಉದಯ್ ಕಲಾ ಜಗತ್ತು ಅನ್ನುವ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಉದಯ್ ದುರಂತ ಸಾವು ಕಂಡಾಗ ದುನಿಯಾ ವಿಜಯ್ ಮುಖ ನೋಡುವುದಕ್ಕೆ ಯಾಕೆ ಬರಲಿಲ್ಲ ಅನ್ನೋದು ಕಾಡುತ್ತಿದೆ ಎಂದಿದ್ದಾರೆ. ಆ ಸಂದರ್ಶನದ ಸಾರಾಂಶ ಹೀಗಿದೆ.
ಉದಯ್ ಬೆಳವಣಿಗೆಯಲ್ಲಿ ದುನಿಯಾ ವಿಜಯ್ ಅವರ ಪಾತ್ರ ಬಗ್ಗೆನೂ ಮಾತಾಡಿದ್ದಾರೆ. ವಿಜಯ್ ಖಳನಟ ಉದಯ್‌ಗೆ ಗುರುವಾಗಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ. "ಗುರಿ ಎಲ್ಲಾರಿಗೂ ಇರುತ್ತೆ. ಆ ಗುರಿಯನ್ನು ಅರ್ಥ ಮಾಡಿಕೊಂಡು ಮುನ್ನೆಡೆಸುವ ಗುರು ಇರಬೇಕು. ಹಾಗಾಗಿ ನಾನು ದುನಿಯಾ ವಿಜಯ್ ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಯಾಕಂದ್ರೆ, ಎಂಟರಿಂದ ಹತ್ತು ವರ್ಷ ನಮ್ಮ ಉದಯ್ ಅನ್ನು ಜೊತೆಯಲ್ಲಿಇಟ್ಟುಕೊಂಡು ಪ್ರಾಕ್ಟೀಸ್ ಮಾಡಿಸಿ, ಅವರದ್ದೇ ಬ್ಯಾನರ್‌ನಲ್ಲಿ ಒಬ್ಬ ಸ್ಟಾರ್ ಅನ್ನು ವಿಲನ್ ಮಾಡಬೇಕು ಅಂತ ಓಡಾಡಿ ಬಿಟ್ಟು ನಮ್ಮ ಹುಡುಗನೇ ವಿಲನ್ ಆಗಲಿ ಅಂತ ದುನಿಯಾ ವಿಜಯ್ ಅವತ್ತು ಅವಕಾಶ ಕೊಟ್ಟಿದ್ದಕ್ಕೆ, ಉದಯ್ ಅನ್ನುವ ಸ್ಟಾರ್ ಆಚೆ ಬಂದ." ಎಂದಿದ್ದಾರೆ.

ಉದಯ್ ದುರಂತ ಅಂತ್ಯ ಕಂಡಾಗ ದುನಿಯಾ ವಿಜಯ್ ಮೇಲೆ ಆರೋಪ ಬಂದಿತ್ತು ಎಂದು ಕಲಾ ಜಗತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಆ ಸನ್ನಿವೇಶವನ್ನು ವಿವರಿಸಿದ್ದಾರೆ. "ಎಲ್ಲೋ ಒಂದು ಕಡೆ ಆ ಘಟನೆ ನಡೆದ ಮೇಲೆ ಒಂದಷ್ಟು ರೂಮರ್‌ಗಳು ನಮಗೂ ಬಂತ್ತು. ಆ ಘಟನೆ ನಡೆಯುವುದಕ್ಕೆ ಅವರೇ ಕಾರಣ ಅಂತ ಒಂದಿಷ್ಟು ಜನ ಹೇಳಿದರು. ಇಲ್ಲ ಬೇಕು ಅಂತಾನೇ ಮಾಡಿದ್ದಾರೆ ಅಂತ ಒಂದಷ್ಟು ಜನ ಹೇಳಿದರು. ಆವತ್ತಿನ ಪರಿಸ್ಥಿತಿಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಿದ್ದಾರೆ. ಫ್ಯಾನ್ಸ್ ಅಂದು ನಮ್ಮ ಮನೆಯನ್ನು ಹುಡುಕಿಕೊಂಡು ಬಂದು ಅವರೇ ಮಾಡಿದ್ದಾರೆ ಅಂತ ಹೇಳಿದ್ದರು." ಎಂದು ರಾಜ್ ಉದಯ್ ಹೇಳಿದ್ದಾರೆ.
ಅಷ್ಟೆಲ್ಲ ದುನಿಯಾ ವಿಜಯ್ ಅವರೇ ನಿಂತು ಒಬ್ಬ ಬಡತನದ ಹುಡುಗನನ್ನು ಫೈಟರ್ ಮಾಡಿ, ಫೈಟರ್‌ನಿಂದ ಆರ್ಟಿಸ್ಟ್ ಮಾಡಿ, ಆರ್ಟಿಸ್ಟ್‌ನಿಂದ ವಿಲನ್ ಮಾಡಿದ್ದರು. ಆದರೆ, ಉದಯ್ ಸಾವು ಆದಾಗ ದುನಿಯಾ ವಿಜಯ್ ಬರಲಿಲ್ಲ ಅನ್ನೋ ಬೇಜಾರು ಇಡೀ ಕುಟುಂಬದಲ್ಲಿ ಇತ್ತು. ಬಾರದೇ ಇರುವುದಕ್ಕೆ ಕಾರಣ ಇವತ್ತು ಏನು ಬೇಕಾದರೂ ಹೇಳಬಹುದು. ಯಾಕೆ ಬರಲಿಲ್ಲ ಅನ್ನೋದು ಇಂದಿಗೂ ಅವರ ಕುಟುಂಬವನ್ನು ಕಾಡುತ್ತಿದೆ.
ಉದಯ್ ಸಾವನ್ನಪ್ಪಿದಾಗ ಇಡೀ ಚಿತ್ರರಂಗ ಬಂದಿದ್ದರು. ದರ್ಶನ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ದಿಗ್ಗಜರೆಲ್ಲರೂ ಬಂದಿದ್ದರು. ಆದರೆ, ಗುರುವಿನಂತೆ ಪೂಜಿಸುತ್ತಿದ್ದ ದುನಿಯಾ ವಿಜಯ್ ಬರಲಿಲ್ಲ. ಅಷ್ಟು ಒಡನಾಟ ಇಟ್ಟುಕೊಂಡಿದ್ದ ಉದಯ್ ಮುಖವನ್ನು ನೋಡಬೇಕಿತ್ತು ಅನ್ನೋ ಆಸೆ ಉದಯ್ ಅವರ ಫ್ಯಾಮಿಲಿಗೆ ಅಂದು ಕಾಡಿತ್ತು.
"ನನಗೆ ಇವತ್ತಿಗೂ ಅವರು ಯಾಕೆ ಬರಲಿಲ್ಲ ಅಂತ ಕಾಡುತ್ತಿದೆ. ಬಾರದೆ ಇದ್ದಿದ್ದಕ್ಕೆ ಕಾರಣ ಇರಬಹುದು. ಏನಾದರೂ ಹೇಳಬಹುದು, ನೋವಿರಬಹುದು, ತಾನು ಬೆಳೆಸಿದ ಹುಡುಗನನ್ನು ಅವತ್ತು ಆ ರೀತಿ ನೋಡುವುದಕ್ಕೆ ಕಷ್ಟ ಆಗಿರಬಹುದು. ಆದರೆ, ಅವರು ಬರಬೇಕಿತ್ತು. ಅದು ನನಗೆ ಇಂದಿಗೂ ಕಾಡುತ್ತೆ" ಎಂದು ರಾಜ್ ಉದಯ್ ಹೇಳಿದ್ದಾರೆ.


Click it and Unblock the Notifications











