ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ, ಕನ್ನಡ ಚಿತ್ರರಂಗದ ವಿರುದ್ಧ ಮತ್ತೆ ಗುಡುಗಿದ ಡಿಕೆಶಿ..!
ಹೆಚ್ಚೇನು ಇಲ್ಲ. ಕಳೆದ ಮಾರ್ಚ್ ನಲ್ಲಿ ಕರುನಾಡಿನ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕನ್ನಡ ಚಿತ್ರರಂಗದ ವಿರುದ್ಧ ಕೆಂಡ ಕಾರಿದ್ದರು. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಬಂದು ನಟ್ಟು ಬೋಲ್ಟು ಎಂದೆಲ್ಲ ಮಾತನಾಡಿದ್ದರು. ಸಹಜವಾಗಿ ಡಿಸಿಎಂ ಅವರ ಈ ಹೇಳಿಕೆ ಕನ್ನಡ ಚಿತ್ರರಂಗದ ಅನೇಕ ತಾರೆಯರನ್ನು ಕೆರಳಿಸಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ನವರಸನಾಯಕ ಜಗ್ಗೇಶ್ ಸೇರಿ
ಅನೇಕರು ಉತ್ತರ ನೀಡಿದ್ದರು. ತಮ್ಮ ಅಸಮಾಧಾನ ಹೊರ ಹಾಕಿದ್ದರು. ಡಿಕೆಶಿ ಅವರಿಗೆ ಪರೋಕ್ಷವಾಗಿ ತಿರುಗೇಟನ್ನು ನೀಡಿದ್ದರು. ಇನ್ನು ಕೆಲವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಅವರು ಹೇಳಿರುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದ್ದರು. ಇದೀಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತೊಮ್ಮೆ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಖಡಕ್ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಹೌದು, ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಆರೋಗ್ಯ ತಪಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿರುವ ಡಿಕೆ ಶಿವಕುಮಾರ್ ಕನ್ನಡ ಚಿತ್ರರಂಗದ ಗೌರವ ಈಗೀಗ ಇನ್ನೂ ಹೆಚ್ಚಾಗಿದೆ. ಅದನ್ನು ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಅನವಶ್ಯಕ ಮತ್ತು ಅನಗತ್ಯ ಹೇಳಿಕೆಗಳನ್ನು ಕೊಡುವರ ವಿರುದ್ಧ ಕೂಡ ಕಿಡಿ ಕಾರಿರುವ ಡಿಕೆ ಶಿವಕುಮಾರ್ ಕೆಲವರು ಚಿಲ್ಲರೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಚಿತ್ರರಂಗದಲ್ಲಿ ಇಲ್ಲದವರು, ನಿವೃತ್ತಿ ಹೊಂದಿದವರೆಲ್ಲ ಈಗೀಗ ಮಾತನಾಡಲು ಶುರು ಮಾಡಿದ್ದಾರೆ. ಮಾತನಾಡುವವರೆಲ್ಲ ಮೊದಲು ಚಿತ್ರರಂಗವನ್ನು ಉಳಿಸಿ, ಚಿತ್ರಮಂದಿರಗಳನ್ನು ಕಟ್ಟಿ, ಎಂದು ಹೇಳಿದ್ದಾರೆ. ಹೊಸ ಸಿನಿಮಾ ಮಾಡಿ, ನಿರ್ದೇಶನ ಮಾಡಿ ಚಿತ್ರವನ್ನು ನಿರ್ಮಾಣ ಮಾಡಿದಾಗ ಅದರ ಬೆಲೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ಹಿಂದಿನ ಕಾಲದ ಚಿತ್ರರಂಗಕ್ಕೂ ಈಗೀನ ಕಾಲದ ಚಿತ್ರರಂಗಕ್ಕೂ ತುಂಬಾನೇ ವ್ಯತ್ಯಾಸ ಇದೆ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸರ್ಕಾರ ನಿಮಗೆ ಬೇಕಾದ ಪ್ರೋತ್ಸಾಹವನ್ನು ಕೊಡಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ಈ ಡಿಸೆಂಬರ್ ಅಥವಾ ಜನವರಿಯಲ್ಲಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನ ಮಾಡುವ ಆಲೋಚನೆ ನನಗಿದೆ ಎಂದು ಹೇಳಿರುವ ಡಿಸಿಎಂ ಡಿಕೆ ಶಿವಕುಮಾರ್, ಈ ಕುರಿತು ಈಗಾಗಲೇ ನಾನು ಚರ್ಚೆ ಪ್ರಾರಂಭ ಮಾಡಿದ್ದೇನೆ ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸ ಕಿರೀಟ ಕೊಡಬೇಕೆನ್ನುವುದು ನಮ್ಮೆಲ್ಲರ ಆಲೋಚನೆ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ಪ್ರದರ್ಶಕರ ವಲಯದಿಂದ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಎಂ ನರಸಿಂಹಲು ಅವರಿಗೆ ಕೂಡ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧು ಕೋಕಿಲಾ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
ಅಂದ್ಹಾಗೇ ಡಿಕೆ ಶಿವಕುಮಾರ್ ಅವರಿಗೆ ಚಿತ್ರರಂಗ ಹೊಸದಲ್ಲ.ಪ್ರದರ್ಶಕರಾಗಿ ಆ ಕಾಲದಲ್ಲಿಯೇ ಚಿತ್ರರಂಗದ ಆಳ-ಅಗಲವನ್ನು ಅಧ್ಯಯನ ಮಾಡಿದವರು ಇವರು.ಇಂದಿರಾ ಗಾಂಧಿ ಹೆಸರಿನಲ್ಲಿ ಚಿತ್ರಮಂದಿರ ಒಳಗೊಂಡು ನಾಲ್ಕು ಚಿತ್ರಮಂದಿರಗಳನ್ನು ಕೂಡ ಡಿಕೆ ಶಿವಕುಮಾರ್ ಒಂದು ಕಾಲದಲ್ಲಿ ನಡೆಸುತ್ತಿದ್ದರು. ಟೂರಿಂಗ್ ಟಾಕೀಸ್ ಕೂಡ ಹೊಂದಿದ್ದರು.
ಟೂರಿಂಗ್ ಟಾಕೀಸ್ ನಡೆಸುವಾಗ ಗಾಂಧಿ ನಗರಕ್ಕೆ ಹೋಗಿ ಖುದ್ದು ಕುಂತು ಸಿನಿಮಾಗಳನ್ನು ನೋಡಿಯೇ ಆ ನಂತರ ಡಬ್ಬಾ ತೆಗೆದುಕೊಂಡು ಹೋಗಿ ಊರಿನಲ್ಲಿ ಸಿನಿಮಾ ಹಾಕುತ್ತಿದ್ದರು ಡಿಕೆ ಶಿವಕುಮಾರ್. ಆದರೆ ಎಂಎಲ್‌ಎ ಆದ ನಂತರ ಎಲ್ಲವನ್ನು ಬಿಟ್ಟು ರಾಜಕೀಯದಲ್ಲಿಯೇ ಸಕ್ರಿಯರಾದ ಡಿಕೆ ಶಿವಕುಮಾರ್ ಅವರ ಒಡೆತನದ 23 ಸಿನಿಮಾ ಸ್ಕ್ರೀನ್‌ಗಳು ಸದ್ಯ ಬೆಂಗಳೂರಿನಲ್ಲಿವೆ.


Click it and Unblock the Notifications











