ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ವಿಜಯ್ ನೇತೃತ್ವದ ಟಿವಿಕೆ ಸ್ಪರ್ಧೆ? ಶುರುವಾಯ್ತು ಆಕ್ರೋಶ
ತಮಿಳು ನಟ ವಿಜಯ್ ಸ್ವತಂ ಪಕ್ಷ ಕಟ್ಟಿ ಎರಡು ವರ್ಷದಲ್ಲಿ ಗೆದ್ದು ತಮಿಳುನಾಡು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಸದ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಕೂಡ ಟಿವಿಕೆ ಪಕ್ಷದಿಂದ ಸ್ಪರ್ಧಿಗಳು ಕಣಕ್ಕೆ ಇಳಿಯುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
ಜಿಬಿಎ ಚುನಾವಣೆ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 5 ನಗರ ಪಾಲಿಕೆಗಳಿಗೆ 2026ರ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ತಮಿಳು ಮತದಾರರು ಇರುವ ವಾರ್ಡ್‌ಗಳಲ್ಲಿ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗ್ತಿದೆ. ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಗೆದ್ದ ಕ್ರೇಜ್ ಬಳಸಿಕೊಂಡು ಇಲ್ಲಿ ಸ್ಪರ್ಧಿಗಳು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.

ತಮಿಳು ನಟನ ಪಕ್ಷ ಕರ್ನಾಟಕದಲ್ಲಿ ನೆಲೆ ಕಂಡುಕೊಂಡರೆ ಹೇಗೆ ಎನ್ನುವ ಚರ್ಚೆ ಆರಂಭವಾಗಿದೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಬೆಂಗಳೂರಿನ ಕೆಲ ವಾರ್ಡ್‌ಗಳಲ್ಲಿ ತಮಿಳು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಂತಹ ಕಡೆ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದರೆ ಮುಂದೆ ಫಲಿತಾಂಶ ಏನಾಗಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಾಬಲ್ಯವೇ ಜಾಸ್ತಿಯಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ನಿಧಾನವಾಗಿ ತನ್ನ ಖದರ್ ಕಳೆದುಕೊಳ್ಳುತ್ತಿದೆ. ಇನ್ನುಳಿದಂತೆ ಆಪ್ ಪಕ್ಷ, ಉತ್ತಮ ಪ್ರಜಾಕೀಯ ಪಕ್ಷಗಳ ಹೆಸರು ಕೆಲವರಿಗೆ ಗೊತ್ತು. ರಾಜ್ಯಕ್ಕೆ ಒಂದು ಸದೃಢ ಪ್ರಾದೇಶಿಕ ಪಕ್ಷ ಬೇಕು ಎನ್ನುವ ಕೂಗು ಎದ್ದಿದೆ. ಎರಡು ವರ್ಷದಲ್ಲಿ ವಿಜಯ್ ಸ್ವಂತ ಪಕ್ಷ ಸ್ಥಾಪಿಸಿ ಗೆದ್ದಿದ್ದಾರೆ ಅಂದಮೇಲೆ ಕರ್ನಾಟಕದಲ್ಲಿ ಅಂತಹ ಮ್ಯಾಜಿಕ್ ನಡೆಯುವುದಿಲ್ಲವೇ ಎನ್ನುವ ಚರ್ಚೆ ಶುರುವಾಗಿದೆ. ಕನ್ನಡದಲ್ಲಿ ಯಾವುದೇ ನಟ ಅಂತಹ ಸಾಹಸ ಮಾಡುವ ಲಕ್ಷಣಗಳು ಕಾಣುತ್ತಿಲ್ಲ.
ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ ಎನ್ನುತ್ತಲೇ ಇದ್ದಾರೆ. ಸಕ್ರಿಯ ರಾಜಕೀಯಕ್ಕೆ ಇಳಿಯುತ್ತಿಲ್ಲ. ಉಪ್ಪಿ ಅಖಾಡಕ್ಕೆ ಇಳಿದರೆ ಏನಾದರೂ ಬದಲಾವಣೆ ಆಗಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ ಅವರು ಮನಸ್ಸು ಮಾಡುವಂತೆ ಕಾಣ್ತಿಲ್ಲ. ಇದೆಲ್ಲದರ ನಡುವೆ ತಮಿಳುನಾಡಿನ ಟಿವಿಕೆ ಪಕ್ಷ ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎನ್ನುವುದು ಅಚ್ಚರಿ ಮೂಡಿಸಿದೆ. ದೊಡ್ಡ ಮಟ್ಟದಲ್ಲಿ ಅಲ್ಲದೇ ಇದ್ದರೂ ಆರಂಭದಲ್ಲಿ ಸಣ್ಣದಾಗಿ ಪಕ್ಷವನ್ನು ಕಟ್ಟಿ ಬೆಳೆಸುವ ಪ್ರಯತ್ನ ನಡೆಯುವಂತೆ ಕಾಣುತ್ತಿದೆ. ಈಗಾಗಲೇ ಕೆಲವರು ಸಭೆ ನಡೆಸಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ.
ವಿಜಯ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಕೆಲ ಅಭಿಮಾನಿಗಳು ಹೋಗಿದ್ದರು. ಟಿವಿಕೆ ಮಾತ್ರವಲ್ಲ ಆಂಧ್ರದ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವನ್ನು ಕರ್ನಾಟಕಕ್ಕೆ ವಿಸ್ತರಿಸುವ ಕೆಲಸ ಆರಂಭವಾಗಿದೆ. ಚಿತ್ರದುರ್ಗದಲ್ಲಿ ಕಳೆದ ತಿಂಗಳು ಜನಸೇನಾ ಪಕ್ಷದ ಕಾರ್ಯಕ್ರಮ ನಡೆದಿದ್ದರು. ಸ್ವತಃ ಪವನ್ ಸಹೋದರ ನಾಗಬಾಬು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅವರ ನೇತೃತ್ವದಲ್ಲಿ ಕೆಲ ಜನಸೇನಾ ಪಕ್ಷ ಸೇರಿದ್ದರು. ಹೀಗೆ ಒಂದ್ಕಡೆ ತಮಿಳುನಾಡಿನ ಟಿವಿಕೆ ಹಾಗೂ ಮತ್ತೊಂದು ಕಡೆ ಆಂಧ್ರದ ಜನಸೇನಾ ಪಕ್ಷಗಳು ಕರ್ನಾಟಕದಲ್ಲಿ ಅಸ್ತಿತ್ವ ಸಾಧಿಸುವ ಪ್ರಯತ್ನ ಆರಂಭಿಸಿವೆ. ಇದು ಹೀಗೆ ಮುಂದುವರೆದರೆ ರಾಜ್ಯದಲ್ಲಿ ಕನ್ನಡಿಗರು ಇದ್ದು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಚರ್ಚೆ ಶುರುವಾಗಿದೆ.


Click it and Unblock the Notifications