"ದರ್ಶನ್ ಕಲಾವಿದ ಮಾತ್ರ ಅಲ್ಲ. ಕಲ್ಚರಲ್ ಫೇಸ್ ಅದು"; ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ಕಿತ್ತಾಟ ಕಳೆದೆರಡು ದಿನಗಳಿಂದ ಸದ್ದು ಮಾಡಿತ್ತು. ದರ್ಶನ್ 'ಕಾಟೇರ' 50 ದಿನಗಳನ್ನು ಪೂರೈಸಿದ ಸಂಭ್ರಮದ ವೇಳೆ ನಿರ್ಮಾಪಕ ಉಮಾಪತಿಗೆ 'ತಗುಡು' ಎಂಬ ಪದವನ್ನು ಬಳಸಿದ್ದರು. ಅದು ವೈರಲ್ ಆಗುತ್ತಿದ್ದಂತೆ ಉಮಾಪತಿ ಸಿಡಿದೆದ್ದಿರು. ತಮ್ಮದೇ ಶೈಲಿಯಲ್ಲಿ ಕೂಲ್ ಆಗಿ ಉತ್ತರ ಕೊಟ್ಟಿದ್ದರು.
ಇವರ ಜಗಳವನ್ನು ಸೂಕ್ಷ್ಮವಾಗಿ ಗಮನಿಸಿರೋ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಇಬ್ಬರಿಗೂ ಬುದ್ಧಿವಾದ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ದರ್ಶನ್ ಹಾಗೂ ಉಮಾಪತಿ ಬಗ್ಗೆ ಸುಧೀರ್ಘವಾಗಿ ಮಾತಾಡಿದ್ದಾರೆ. ಹಾಗೇ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಇಬ್ಬರಿಗೂ ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ.

"ತಗಡು.. ಯಾರು ಹೇಳಿದ್ದು ದರ್ಶನ್. ಯಾರಿಗೇ ಉಮಾಪತಿಗೆ. ಆದರೆ, ಉಮಾಪತಿ ಆ ಹುಡುಗ ಸ್ಪಲ್ಪ ಕಂಟ್ರೋಲ್ಡ್ ಆಗಿಯೇ ಪ್ರತಿಕ್ರಿಯೆ ಕೊಟ್ಟಿದ್ದಾನೆ. ದರ್ಶನ್ ಮಾತನಾಡುವ ಭರದಲ್ಲಿ ಬರೀ ತಗಡೇ ಅಂತ ಹೇಳಲ್ಲ. ಕಾಟೇರ ಅಂತ ಹೆಸರು ಇಟ್ಟಿದ್ದು ನಾನು. ಇವನಿಗೆ ಏನು ಗೊತ್ತು. ಗುಮ್ಮುತ್ತೀವಿ ನಾವು. ನಮ್ಮ ಕೈಯಲ್ಲಿ ಯಾಕೆ ಗುಮ್ಮಿಸಿಕೊಳ್ತೀಯಾ ಅಂತಾನೆ. ಅದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಅದು ಕರ್ನಾಟಕದಲ್ಲಿ ಪ್ರಮುಖ ಸಮಸ್ಯೆ ಅನ್ನುವ ರೀತಿನಲ್ಲಿ ಚರ್ಚೆಯಾಗುತ್ತಿದೆ." ಎಂದು ಅಗ್ನಿ ಶ್ರೀಧರ್ ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟಕ್ಕೂ ಹಿರಿಯ ಪತ್ರಕರ್ತ ಅಗ್ನಿಶ್ರೀಧರ್ ಏನು ಹೇಳಿದ್ದಾರೆ ಅನ್ನೋ ಝಲಕ್ ಇಲ್ಲಿದೆ.
"ದರ್ಶನ್ ಕಲಾವಿದ ಮಾತ್ರ ಅಲ್ಲ"
"ದರ್ಶನ್ ಕಲಾವಿದ ಮಾತ್ರ ಅಲ್ಲ. ಕಲ್ಚರಲ್ ಫೇಸ್ ಅದು. ಅದು ನಮ್ಮ ಸಂಸ್ಕೃತಿಯ ಮುಖ. ಸ್ಪಷ್ಟವಾಗಿ ಕನ್ನಡ ಮಾತಾಡೋ.. ಕನ್ನಡಿಗರನ್ನು ಸೆಳೆದಿರೋ ಮುಖ. ನನಗೆ ತುಂಬಾ ಪರಿಚಯ ಇಲ್ಲ. ಆದರೆ ಪರಿಚಯ. ಒಂದೇ ಸಾರಿ ನಾವು ಭೇಟಿಯಾಗಿದ್ದೇವೆ. ನನಗೆ ಆತನನ್ನು ಕಂಡರೆ ತುಂಬಾ ಇಷ್ಟ. ಯಾಕಿಷ್ಟ ಅಂದರೆ, ಆತನ ತಂದೆ ತೂಗುದೀಪ ಶ್ರೀನಿವಾಸ್ ನಮಗಿಂತ ಹಿರಿಯರು. ಅವರು ಮತ್ತು ಶಕ್ತಿ ಪ್ರಸಾದ್ ನನ್ನನ್ನು ತುಂಬಾ ಇಷ್ಟ ಪಡುತ್ತಿದ್ದರು." ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.
"ದರ್ಶನ್ ತಪ್ಪು ಮಾಡಬೇಡ"
"ನೀನು ನನ್ನ ದೊಡ್ಡ ಅಣ್ಣನ ಮಗನಿದ್ದಂತೆ ತಪ್ಪು ಮಾತು ಬೇಡ. ಜನಪ್ರಿಯತೆ ಬೇರೆ. ಕೀರ್ತಿ ಬೇರೆ. ನೀನು ಕೀರ್ತಿಗೆ ಹೋಗು ಮಗನೆ ಅಂತ ತುಂಬಾ ಹೇಳಿದ್ದೀನಿ. ಇಷ್ಟಾಗಿ ನನಗಷ್ಟೇ ಅಲ್ಲ ಬಹಳ ಜನರಿಗೆ ಗೊತ್ತು ತುಂಬಾ ವಿನಯವಂತ. ಅವನಿಗೆ ಹೇಳಿದ್ದೆ ಡ್ರಿಂಕ್ಸ್ ಕಡಿಮೆ ಮಾಡು. ನೀನು ಆಡುವ ಮಾತುಗಳು ರೆಕಾರ್ಡ್ ಆಗುತ್ತವೆ. ನೂರಾರು ವರ್ಷ ಇರುತ್ತವೆ ಅಂದಿದ್ದೆ. ಇವತ್ತು ಹೇಗಾಗುತ್ತೆ ಅಂದರೆ, ಗುಂಪುಗಳು ಸೇರಿದಾಗ, ಕ್ಯಾಮರಾ ಬಂದಾಗ ಅಹಂ ಬಂದು ಬಿಡುತ್ತೆ. ಅದು ಬಂದಾಗ ಏನೇನು ವಿಷಯಗಳು ಬಂದು ಬಿಡುತ್ತೆ. ಆ ಮಾತಿನ ಭರದಲ್ಲಿ ದರ್ಶನ್ ಹೇಳುವುದು ತಗಡೇ ಅಂತ. " ಎಂದು ಸಂದರ್ಭವನ್ನು ವಿವರಿಸಿದ್ದಾರೆ.

"ದರ್ಶನ್ ಸ್ವಂತ ಅಣ್ಣನಂತೆ ಮಾತಾಡಿದ್ರು"
"ಉಮಾಪತಿ ಕೂಡ ನನಗೆ ಗೊತ್ತು. ಉಮಾಪತಿ ನನ್ನ ಬಳಿ ಬಂದಿದ್ದಾಗ ರಾಬರ್ಟ್ ಇನ್ನೂ ರಿಲೀಸ್ ಆಗಿರಲಿಲ್ಲ. ಆಗ ದರ್ಶನ್ ಬಗ್ಗೆ ಸ್ವಂತ ಅಣ್ಣ ಅನ್ನುವ ಹಾಗೆ ಮಾತಾಡಿದ್ದರು. ಇವರಿಬ್ಬರ ಹೊಡೆದಾಟ ನೋಡಿ ತುಂಬಾನೇ ಬೇಸರ ಆಯ್ತು. ಇವರಿಬ್ಬರು ಒಂದು ಅರ್ಥ ಮಾಡಿಕೊಳ್ಳಬೇಕು. ಯಾರೋ ದರ್ಶನ್‌ಗೆ ಆಗುವವರು ಗುಡ್ ಗ್ರೇಟ್ ಅನ್ನಬಹುದು. ಯಾರೂ ಉಮಾಪತಿಗೆ ಆಗುವವರು ಗ್ರೇಟ್ ಫೈಟ್ ಮಾಡು ಅನ್ನಬಹುದು. ಆದರೆ, ಇಬ್ಬರಿಗೂ ಆಗುವವರಿಗೆ ಸಂಕಟ ಆಗುತ್ತೆ. ಇಬ್ಬರನ್ನು ಕಂಡರೆ ಆಗದಿರುವವರು ಖುಷಿ ಪಡುತ್ತಾರೆ. ಸಂಕಟ ಪಡುತ್ತಾರೆ." ಎಂದು ಸಲಹೆ ನೀಡಿದ್ದಾರೆ.
"ದರ್ಶನ್ ನೀನು ಕೂಡ ತಗಡೆ"
"ಇನ್ನೊಂದು ವಿಷಯ. ದರ್ಶನ್ ತಗಡೇ ಅಂತ ಹೇಳಿದ್ದೀಯಲ್ಲ ನೀನು ಏನು ಅಂದ್ಕೊಂಡಿದ್ದೀಯಪ್ಪ. ನೀನು ಕೂಡ ತಗಡೇ.. ಅದನ್ನು ನೀನು ಯೋಚನೆ ಮಾಡಿಲ್ಲ ಅಷ್ಟೇ. ನಮ್ಮ ಅಹಂ ನಾನು ವಜ್ರ ಅಂತ ಹೇಳಿ ಕೊಡುತ್ತೆ. ನಾನು ಚಿನ್ನ.. ನಾನು ಬೆಳ್ಳಿ ಅನ್ನುತ್ತೆ. ಆದರೆ ನಾವು ತಗಡು ಅಂತ ಬಹಳ ಜನಕ್ಕೆ ಗೊತ್ತಿಲ್ಲ. ತಗಡು ಅನ್ನೋದು ಇದೆಯಲ್ಲ ಜನ ಸಾಮಾನ್ಯರ ವಸ್ತು ಅದು. ಬಿದಿರು ಇದ್ದ ಹಾಗೆ." ಎಂದಿದ್ದಾರೆ.
"ಉಮಾಪತಿ ವ್ಯಂಗ್ಯ ಬಿಟ್ಟು ಮಾತಾಡು"
"ಇದನ್ನೇ ಉಮಾಪತಿಗೂ ಹೇಳ್ತೀನಿ. ನೀನು ಚೆನ್ನಾಗಿ ಮಾತಾಡಿದ್ದೀಯಪ್ಪ. ಹಿರಿಯರು ಅಂತ ಹೇಳಿದ್ದೀಯ. ಅದನ್ನೇ ವ್ಯಂಗ್ಯ ಬಿಟ್ಟು ಹೇಳು. ನಾನು ತಗಡು ಅಂತ ಗುರುತಿಸಿದ್ದಾರೆ ಅವರು. ಅದಕ್ಕೆ ನಾನು ಜನರ ಮಧ್ಯೆ ಇದ್ದೀನಿ. ಅದಕ್ಕೋಸ್ಕರ ಸಿನಿಮಾಗಳನ್ನು ಮಾಡಿದ್ದೀನಿ. ಉಮಾಪತಿ ಹೇಳುವುದು ಅಕ್ಷರಶ: ಸತ್ಯ. ಸಿನಿಮಾ ಮಾಡುವ ಬದಲು ಬ್ಯುಸಿನೆಸ್ ಮ್ಯಾನ್ ಆಗಿರಬಹುದಿತ್ತು." ಎಂದು ಅಗ್ನಿ ಶ್ರೀಧರ್ ಉಮಾಪತಿಗೆ ಹೇಳಿದ್ದಾರೆ.
"ದರ್ಶನ್ ನಿನ್ನ ಗಂಟು ಏನು ಹೋಗ್ತಿತ್ತು"
"ಕಾಟೇರ ಟೈಟಲ್ ಅನ್ನು ನಾನು ಕೊಟ್ಟೆ ಅಂತ ಹೇಳಿಕೊಂಡರೆ ಏನು ಗಂಟು ಹೋಗುತ್ತಪ್ಪ ದರ್ಶನ್? ಆ ಹುಡುಗನೂ ಟೈಟಲ್ ರಿಜಿಸ್ಟರ್ ಮಾಡಿಸಿದ್ದ ಯಾವ ಕಾರಣಕ್ಕಾದರೂ ಆಗಲಿ. ಓಕೆ ಅನ್ನಬಹುದಿತ್ತಲ್ಲ. ಆ ಟೈಟಲ್ ಉಮಾಪತಿ ಕೊಟ್ಟಿದ್ದ ಅಂದರೆ, ಇನ್ನೂ ದೊಡ್ಡವನಾಗುತ್ತಿದ್ದೆಯಲ್ಲಪ್ಪ. ಇಬ್ಬರೂ ಗೊತ್ತು ದಯವಿಟ್ಟು ಇದನ್ನು ಸ್ಟಾಪ್ ಮಾಡಿ. ಉಮಾಪತಿ ಕೂಲ್ ಆಗಿ ಮಾತಾಡಿದ್ದರೂ, ಸಿಟ್ಟಿತ್ತು. ಅದು ಬೇಡಪ್ಪ. ತಗಡು ತುಂಬಾ ಬಳಕೆ ಆಗುತ್ತೆ." ಎಂದು ಅಗ್ನಿ ಶ್ರೀಧರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.


Click it and Unblock the Notifications











