ಥ್ಯಾಂಕ್ಯೂ...ಆದರೆ ಕ್ಷಮಿಸಿ ಎಂದ ಯುವರಾಜ್ ಕುಮಾರ್ ; ಪ್ರೀತಿ-ಆಶೀರ್ವಾದ ಹೀಗೆ ಇರಲಿ ಎಂದ ದೊಡ್ಮನೆ ಕುಡಿ..!
ಅಭಿಮಾನಕ್ಕೆ ಹಬ್ಬ-ಹರಿದಿನ ಬೇಕಿಲ್ಲ. ಬೇಕಿರುವುದು ಕೇವಲ ಒಂದು ದಿನವಷ್ಟೇ. ಆ ದಿನಕ್ಕೆ ಅಭಿಮಾನಿಗಳು ಅಭಿಮಾನದಿಂದ ಇಟ್ಟಿರುವ ಹೆಸರು ಹುಟ್ಟಿದ ಹಬ್ಬ. ಆದರೆ ಈಗೀಗ ಆ ಹುಟ್ಟಿದ ಹಬ್ಬದ ಸಂಭ್ರಮಾಚರಣೆ ಕೂಡ ಕಳೆಗುಂದುತ್ತಿದೆ. ಕಾರಣ ವ್ಯೆಯಕ್ತಿಕವಾದರೂ, ಈ ವ್ಯೆಯಕ್ತಿಕ ಕಾರಣ.. ಅಭಿಮಾನದ ಪರೀಕ್ಷೆಯನ್ನಂತೂ ಮಾಡುತ್ತಿದೆ. ಇದಕ್ಕೆ ಯುವರಾಜ್ ಕುಮಾರ್ ಅವರ ಹುಟ್ಟಿದ ಹಬ್ಬದ ಸಂಭ್ರಮ-ಸಡಗರ ಮತ್ತೊಂದು ಉದಾಹರಣೆ.
ಹೌದು, ಯುವ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನ ಪ್ರವೇಶಿಸಿದ ಯುವರಾಜ್ ಕುಮಾರ್, ಇದೇ ಏಪ್ರಿಲ್ 23ಕ್ಕೆ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇನ್ನೂ.. ಯುವ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ಗೆದ್ದಿದೆ. 25 ದಿನಗಳನ್ನೂ ಕೂಡ ಪೂರೈಸಿದೆ.

ಈ ಕಾರಣಕ್ಕೆ.. ಯುವರಾಜ್ ಕುಮಾರ್ ಅವರ ಹುಟ್ಟಿದ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಬೇಕೆಂದು ದೊಡ್ಮನೆಯ ಅಭಿಮಾನಿಗಳು ಅಂದುಕೊಂಡಿದ್ದರು.ಹುಟ್ಟುಹಬ್ಬದ ನೆಪದಲ್ಲಿ ಯುವ ಚಿತ್ರದ ಗೆಲುವನ್ನೂ ಕೂಡ ಸಂಭ್ರಮಿಸಬೇಕೆಂದುಕೊಂಡಿದ್ದರು. ಯುವರಾಜ್ ಕುಮಾರ್ ಅವರಿಗೆ ಪಟ್ಟಾಭಿಷೇಕ ಮಾಡಲು ಕಾತುರದಿಂದ ಕಾಯ್ತಿದ್ದರು ಕೂಡ.
ಆದರೆ ಈಗ ಲೆಕ್ಕಾಚಾರದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಖುದ್ದು.. ಯುವರಾಜ್ ಕುಮಾರ್ ಈ ಬದಲಾವಣೆ ಸೂಚಿಸಿದ್ದಾರೆ. ವಿಡಿಯೋ ಮೂಲಕ ತಮ್ಮ ಸಹಸ್ರ ಅಭಿಮಾನಿಗಳಲ್ಲಿ ಮನವಿಯನ್ನೂ ಮಾಡಿಕೊಂಡಿದ್ದಾರೆ
ಯುವ ಚಿತ್ರವನ್ನ ಅಪ್ಪಿ, ಒಪ್ಪಿಕೊಂಡ.. ಸಮಸ್ತ ಕನ್ನಡಿಗರಿಗೆ ಧನ್ಯವಾದ ಹೇಳಿರುವ ಯುವರಾಜ್ ಕುಮಾರ್, ಮುಂದಿನ ವಾರ ನಾನು ಊರಿನಲ್ಲಿ ಇರೋದಿಲ್ಲ. ಆ ಕಾರಣದಿಂದ ಹುಟ್ಟುಹಬ್ಬವನ್ನು ನಿಮ್ಮ ಜತೆ ಆಚರಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿ ದಯವಿಟ್ಟು ಕ್ಷಮಿಸಿ. ನೀವು ಎಲ್ಲಿದ್ದರೂ ಹೃತ್ಫೂರ್ವಕವಾಗಿ ಹಾರೈಸಿದರೆ ಅದು ನನಗೆ ತಲುಪುತ್ತದೆ. ಆದಷ್ಟು ಬೇಗ ನಿಮ್ಮೆಲ್ಲರನ್ನು ಮತ್ತೆ ಭೇಟಿಯಾಗುತ್ತೇನೆʼʼ ಎಂದು ಹೇಳಿದ್ದಾರೆ. ಕೈ ಮುಗಿದು ಕ್ಷಮೆಯನ್ನೂ ಕೇಳಿದ್ದಾರೆ ನಿಮ್ಮ ನೆಚ್ಚಿನ ಯುವರಾಜ್ ಕುಮಾರ್
ಇನ್ನೂ ಅವತ್ತು ಅಂದರೆ ಏಪ್ರಿಲ್ 23 ಮತ್ತು 24ರ ಆಸು-ಪಾಸಿನಲ್ಲಿ ಯುವರಾಜ್ ಕುಮಾರ್ ನಡೆಯ ಮೇಲೆ ಎಲ್ಲರ ಕಣ್ಣಿದೆ. ಯುವ ಅಭಿನಯದ ಎರಡನೇ ಚಿತ್ರ ಯಾವುದು ಅನ್ನುವ ಪ್ರಶ್ನೆಗೆ ಉತ್ತರ ಸಿಗುವ ನಿರೀಕ್ಷೆ ಇದೆ. ದೊಡ್ಮನೆಯ ಅಭಿಮಾನಿಗಳು ಕೂಡ ಈ ಕುತೂಹಲಕ್ಕೆ ಉತ್ತರ ತಿಳಿಯಲು ಕಾತುರದಿಂದ ಕಾಯುತ್ತಿದ್ದಾರೆ ಕೂಡ.
ಇದೆಲ್ಲದರ ನಡುವೆ ಯುವರಾಜ್ ಕುಮಾರ್ ಅವರ ಮುಂದಿನ ಚಿತ್ರಕ್ಕೆ ಬಹುತೇಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ತಮ್ಮ ಪಿ.ಆರ್.ಕೆ ಸಂಸ್ಥೆಯಡಿ ಬಂಡವಾಳ ಹೂಡುವುದು ಪಕ್ಕಾ ಆಗಿದೆ ಎಂಬ ಸುದ್ದಿಯೂ ಬೆಂಗಳೂರಿನ ಗಾಂಧಿನಗರದಲ್ಲಿರುವ ವಜ್ರೇಶ್ವರಿ ಸಂಸ್ಥೆಯ ಆಚೀಚೆ ಕೇಳಿ ಬರುತ್ತಿದೆ. ಗೊತ್ತಿಲ್ಲ.. ಈ ಚಿತ್ರದ ಸಾರಥ್ಯವನ್ನ ಹೊಸಬರು ವಹಿಸಿಕೊಳ್ಳಬಹುದು ಅಥವಾ ಹಳೆ ಹುಲಿ ದೊಡ್ಮನೆಯ ಹೊಸ ಸಿಂಹಕ್ಕೆ ಗಾಂಧಿನಗರದಲ್ಲಿ ದಾರಿಯನ್ನ ತೋರಿಸಿದರು ತೋರಿಸಬಹುದು.

ಹೀಗೆ ಹತ್ತಾರು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಗಿರಕಿ ಹೊಡೆಯುವ ಈ ಸಮಯದಲ್ಲಿ, ನಿರೀಕ್ಷೆಗಳೆಲ್ಲ ಗರಿಗೆದರಿದ ಹೊತ್ತಿನಲ್ಲಿ, ದೊಡ್ಮನೆಯ ಕುಡಿ ಯುವರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ನಾನು ಊರಿನಲ್ಲಿ ಇರಲ್ಲ ಎನ್ನುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆಯನ್ನ ಮೂಡಿಸಿದ್ದಾರೆ. ಹೀಗಾಗಿ ಕೊನೆ ಪಕ್ಷ.. ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ತಮ್ಮ ಎರಡನೇ ಚಿತ್ರವನ್ನ ಘೋಷಣೆಯನ್ನಾದರೂ ಯುವರಾಜ್ ಕುಮಾರ್ ಮಾಡಲಿ, ಈ ಮೂಲಕ ನಮಗೆ ಉಡುಗೊರೆಯನ್ನ ನೀಡಲಿ ಎಂಬ ಮಾತು ಈಗ ಅಭಿಮಾನಿ ವಲಯದಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











