ಅಪ್ಪು ಮೇಲಿನ ಅಭಿಮಾನಕ್ಕೆ ಕಂಠ ಕುಣಿಸಿದ ವಿದೇಶಿ ಮಹಿಳೆ, ನೀನೆ ರಾಜಕುಮಾರ ಎಂದ ಫಾರಿನ್ ಲೇಡಿ..!
ಪುನೀತ್ ವ್ಯಕ್ತಿತ್ವವನ್ನ ಕೇವಲ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಯಾಕಂದರೆ .. ಪುನೀತ್ ಅವ್ರದ್ದು ನಿಲುಕದ ವ್ಯಕ್ತಿತ್ವ. ಬದುಕಿದ್ದಷ್ಟು ದಿನ ಪ್ರೀತಿಯನ್ನೇ ಹಂಚಿ.. ಅಭಿಮಾನದ ಹೂಗಳನ್ನೆಲ್ಲ ತನ್ನ ಹೃದಯದಲ್ಲಿ ತುಂಬಿಸಿಕೊಂಡು ಬಾರದ ಲೋಕಕ್ಕೆ ಹೋದ ಪರಮಾತ್ಮ ಪುನೀತ್ ರಾಜ್‌ಕುಮಾರ್ ಅಂದರೆ ಕೇವಲ ಕನ್ನಡಿಗರಿಗೆ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದವರಿಗೆ ಕೂಡ ಅಚ್ಚು ಮೆಚ್ಚು.
ಇನ್ನೂ ಸಪ್ತಸಾಗರದಾಚೆ ಕೂಡ ಪುನೀತ್ ರಾಜ್ ಕುಮಾರ್ ಅವರಿಗೆ ಅವತ್ತು ಅಭಿಮಾನಿಗಳಿದ್ದರು. ಇವತ್ತು ಕೂಡ ಅಭಿಮಾನಿಗಳಿದ್ದಾರೆ. ಇದಕ್ಕೆ ವಿದೇಶಿ ಮಹಿಳೆ ಹಾಡಿದ ಹಾಡು ಮತ್ತೊಂದು ಸಾಕ್ಷಿ. ಹೌದು, ಒಂದು ಕಡೆ ಕನ್ನಡದವರಾಗಿ, ಕನ್ನಡದ ಅನ್ನವನ್ನು ತಿನ್ನುತ್ತಾ, ಕನ್ನಡದ ವಾತಾವರಣದಲ್ಲಿ ಬೆಳೆಯುವ ಅನೇಕರು ಕನ್ನಡ ಕಲಿಯಲು ಹಿಂದೇಟು ಹಾಕುತ್ತಾರೆ.

ಕನ್ನಡ ಚಿತ್ರರಂಗದಿಂದನೇ ವೃತ್ತಿಯನ್ನು ಶುರು ಮಾಡಿ ಖ್ಯಾತಿಯ ಉತ್ತುಂಗಕ್ಕೇರಿದ ರಶ್ಮಿಕಾ ಮಂದಣ್ಣ ಸೇರಿ ಅನೇಕರು ಕನ್ನಡತಿಯರು ಕನ್ನಡ ಗೊತ್ತಿಲ್ಲ ಎನ್ನುತ್ತಾರೆ. ಇವರೆಲ್ಲರ ನಡುವೆ ವಿದೇಶಿ ಮಹಿಳೆಯೊಬ್ಬರು ರಾಜ್ ಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಹಾಡನ್ನು ಸುಲಲಿತವಾಗಿ ಹಾಡಿದ್ದಾರೆ. ಈ ಮೂಲಕ ತಮ್ಮ ಕನ್ನಡಾಭಿಮಾನವನ್ನು ಪ್ರದರ್ಶಿಸಿದ್ದಾರೆ. ಅಪ್ಪು ಮೇಲೆ ತಮಗೆ ಇರುವ ಅಭಿಮಾನವನ್ನು ಕೂಡ ಪ್ರದರ್ಶಿಸಿದ್ದಾರೆ.
ಬೆಂಗಳೂರಿನ ರಾಕ್ಸ್ ಪಬ್‌ನಲ್ಲಿ ಈ ಫಾರಿನ್ ಮಹಿಳೆ ಹಾಡನ್ನು ಹಾಡಿದ್ದು ಅಲ್ಲಿ ನೆರೆದ ಅನೇಕರು ಇವರ ಕಂಠಕ್ಕೆ ಮನ ಸೋತಿದ್ದಾರೆ. ಚಪ್ಪಾಳೆ ತಟ್ಟಿ ಶಿಳ್ಳೆ ಹೊಡೆಯುವ ಮೂಲಕ ಇವರನ್ನು ಹುರಿದುಂಬಿಸಿದ್ದಾರೆ. ಸದ್ಯ ಫಾರಿನ್ ಲೇಡಿ ಹಾಡಿರುವ ರಾಜಕುಮಾರ ಚಿತ್ರದ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಲ್ಲರ ಗಮನವನ್ನು ಕೂಡ ವಿಡಿಯೋ ಸೆಳೆಯುತ್ತಿದೆ. ಅನೇಕರು ನಿಮ್ಮ ಈ ಕನ್ನಡಾಭಿಮಾನಕ್ಕೆ ಮತ್ತು ಅಪ್ಪು ಮೇಲಿನ ಅಭಿಮಾನಕ್ಕೆ ಶರಣು ಶರಣಾರ್ಥಿ ಎನ್ನುತ್ತಿದ್ದಾರೆ.
ಅಂದ್ಹಾಗೇ ಕನ್ನಡ ನಿರ್ಮಾಪಕ ವರುಣ್ ಕುಮಾರ್ ಒಡೆತನದ ರಾಕ್ಸ್ ಪಬ್‌ನಲ್ಲಿ ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ ಅಪ್ಪು ಹಬ್ಬವನ್ನು ಮಾಡಲಾಗುತ್ತಿದೆ. ಈಗಾಗಲೇ ಪಬ್ ತುಂಬಾ ಪುನೀತ್ ರಾಜ್ ಕುಮಾರ್ ಅವರ ಸುಂದರವಾದ ಭಾವಚಿತ್ರಗಳನ್ನು ಹಾಕಲಾಗಿದೆ. ಅಪ್ಪು ಜೊತೆಗಿನ ಹಲವರ ನೆನಪುಗಳು ಈ ಪಬ್‌ನಲ್ಲಿ ಹ್ಯಾಂಗಿಂಗ್ಸ್ ಮೂಲಕ ಕಣ್ಮನ ಸೆಳೆಯುತ್ತಿವೆ. ಇನ್ನು ಸಂಗೀತ ಸಂಜೆಯಲ್ಲಿ ಕೂಡ ಪುನೀತ್ ರಾಜ್ ಕುಮಾರ್ ಅವರ ಹಾಡುಗಳಿಗೆ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ. ಇದರ ನಡುವೆ ಈಗ ಈ ಪಬ್‌ನಲ್ಲಿ ವಿದೇಶಿ ಮಹಿಳೆಯೊಬ್ಬರು ರಾಜಕುಮಾರ ಚಿತ್ರದ ಹಾಡನ್ನು ಹಾಡುವ ಮೂಲಕ ಅನೇಕರ ಹೃದಯವನ್ನು ಗೆದ್ದಿದ್ದಾರೆ.
ಇನ್ನುಳಿದಂತೆ ಪುನೀತ್ ರಾಜ್ ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ ಈ ಬಾರಿ 'ಅಪ್ಪು' ಸಿನಿಮಾ ರಾಜ್ಯದೆಲ್ಲೆಡೆ ಮರು ಬಿಡುಗಡೆಯಾಗಲಿದೆ. ತಮ್ಮ ನೆಚ್ಚಿನ ನಾಯಕನ ಮೊದಲ ಚಿತ್ರದ ಮರುಬಿಡುಗಡೆಯನ್ನು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದು ದೊಡ್ಡ ಮಟ್ಟದಲ್ಲಿ ಚಿತ್ರವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಇನ್ನು ಮಾರ್ಚ್ 14ರಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಅವತ್ತೇ ಕರುನಾಡಿನೆಲ್ಲೆಡೆ ಬೆಳ್ಳಿತೆರೆಯಲ್ಲಿ 'ಅಪ್ಪು' ದರ್ಬಾರ್ ಶುರುವಾಗಲಿರುವುದು ವಿಶೇಷ.
ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ಅಪ್ಪು ಆಗಿ ಪುನೀತ್ ಈ ಚಿತ್ರದಲ್ಲಿ ನಟಿಸಿದ್ದರು. ನಾಯಕಿಯಾಗಿ ರಕ್ಷಿತಾ ಅಭಿನಯಿಸಿದ್ದರು. ಇಬ್ಬರಿಗೂ ಇದು ಮೊದಲ ಸಿನಿಮಾ. ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಕೂಡ ಇದ್ದರು. ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಬಂದ ಹಾಡುಗಳು ಇಂದಿಗೂ ಕೂಡ ಜನಪ್ರಿಯ.


Click it and Unblock the Notifications











