ಬಂಪರ್ ಆಫರ್ ಪಡೆದ ಅನುಷ್ಕಾ ಶೆಟ್ಟಿ: ಐಶ್ವರ್ಯ ರೈ ಜೊತೆ ನಟನೆ.!
Recommended Video
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. 'ಬಾಗಮತಿ' ಚಿತ್ರದ ನಂತರ ಅನುಷ್ಕಾ ಎಲ್ಲಿ ಹೋದ್ರು ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದ್ರೀಗ ಅನುಷ್ಕಾ ಮತ್ತೊಂದು ದೊಡ್ಡ ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಅನುಷ್ಕಾ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಜೊತೆ ಸಿನಿಮಾ ಮಾಡುತ್ತಾರಂತೆ.
ಹೌದು, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಜೊತೆ ಅಭಿನಯಿಸುವ ಅವಕಾಶ ಅನುಷ್ಕಾ ಪಾಲಿಗೆ ಒಲಿದು ಬಂದಿದೆ. ಇಬ್ಬರು ಕರ್ನಾಟಕದ ಕರಾವಳಿ ಭಾಗದವರು ಆದ್ರೆ ಇದುವರೆಗೂ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲ್ಲ. ಆದ್ರೀಗ ಸಿನಿಮಾ ಮೂಲಕ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಐಶ್ವರ್ಯ ಅವರ ಬಾಲಿವುಡ್ ಸಿನಿಮಾಗಳು ತೀರಾ ಅಪರೂಪ ಆಗುತ್ತಿವೆ. ತಾಯಿ ಆದ ನಂತರ ಐಶ್ ಎರಡು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಇಬ್ಬರು ಸ್ಟಾರ್ ನಟಿಮಣಿಯರಿಗೆ ಖ್ಯಾತ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಾದ್ರೆ ಯಾರು ಆ ನಿರ್ದೇಶಕ? ಯಾವ ಸಿನಿಮಾ? ಮುಂದೆ ಓದಿ..

ಮಣಿರತ್ನಂ ಸಿನಿಮಾದಲ್ಲಿ ಐಶ್-ಅನುಷ್ಕಾ
ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವಾನ್' ಚಿತ್ರದಲ್ಲಿ ಐಶ್ವರ್ಯ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದ ಬಾಹುಬಲಿ ಚಿತ್ರದ ನಂತರ ಅನುಷ್ಕಾ, ಪಾತ್ರಗಳನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಐಶ್ವರ್ಯ ಕೂಡ ಒಂದೊಳ್ಳೆ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಈಗ ಇವರಿಬ್ಬರಿಗೂ ಉತ್ತಮ ಅವಕಾಶ ನೀಡಿದ್ದಾರೆ ನಿರ್ದೇಶಕ ಮಣಿರತ್ನಂ. ವಿಶೇಷ ಅಂದ್ರೆ ಮಾಜಿ ವಿಶ್ವ ಸುಂದರಿಯನ್ನು ಚಿತ್ರರಂಗಕ್ಕೆ ಕರೆತಂದಿದ್ದೆ ಮಣಿರತ್ನಂ.

ಚಿತ್ರದಲ್ಲಿ ಐಶ್ ವಿಲನ್
ಮಣಿರತ್ನಂ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಪೊನ್ನಿಯನ್ ಸೆಲ್ವಾನ್' ಐಶ್ವರ್ಯ ರೈ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಐಶ್ ಖಳ ನಟಿಯಾಗಿ ಕಾಣಿಸಿಕೊಂಡಿದ್ದೇ ಆಗಿದಲ್ಲಿ ಮೊದಲ ಬಾರಿಗೆ ಐಶ್ವರ್ಯ ನೆಗೆಟಿವ್ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಐಶ್, ಅನುಷ್ಕಾ ಶೆಟ್ಟಿಗೆ ವಿಲನ್ ಆಗಲಿದ್ದಾರೆ.

ನಯನತಾರಾ ಜಾಗಕ್ಕೆ ಅನುಷ್ಕಾ
ಅನುಷ್ಕಾ ಶೆಟ್ಟಿ ಅಭಿನಯಿಸಬೇಕಾಗಿದ್ದ ಪಾತ್ರಕ್ಕೆ ಈ ಮೊದಲ ತಮಿಳಿನ ಖ್ಯಾತ ನಟಿ ನಯನತಾರಾ ಆಯ್ಕೆಯಾಗಿದ್ದರು. ಆದ್ರೆ ಕಾರಣಾಂತರಗಳಿಂದ ಮಣಿರತ್ನಂ ಚಿತ್ರದಿಂದ ನಯನತಾರಾ ಹೊರ ಹೋಗಿದ್ದಾರೆ. ಆ ಜಾಗಕ್ಕೆ ಅನುಷ್ಕಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಅನುಷ್ಕಾ ಸದ್ಯ 'ಸೈಲೆನ್ಸ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿದ ಬಳಿಕ 'ಪೊನ್ನಿಯನ್ ಸೆಲ್ವಾನ್' ಚಿತ್ರತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ನಯನತಾರಾ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ದೊಡ್ಡ ತಾರಾಬಳಗ ಚಿತ್ರದಲ್ಲಿದೆ
'ಪೊನ್ನಿಯನ್ ಸೆಲ್ವಾನ್' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಸ್ಟಾರ್ ಕಲಾವಿದರೇ ತುಂಬಿ ಕೊಂಡಿರುವ 'ಪೊನ್ನಿಯನ್ ಸೆಲ್ವಾನ್' ಕಾಲಿವುಡ್ ಚಿತ್ರ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.
ಟೈಟಲ್ ರೋಲ್ ನಲ್ಲಿ ಜಯಂ ರವಿ ಮಿಂಚುತ್ತಿದ್ದಾರೆ. ಇನ್ನು ಚಿಯಾನ್ ವಿಕ್ರಮ್, ಕಾರ್ತಿಕ್, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಅನುಷ್ಕಾ ಮತ್ತು ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











