ಶಿವಣ್ಣ ಕಾಲಿಗೆರಗಿದ ಐಶ್ವರ್ಯ ರೈ ಮಗಳು, ಆರಾಧ್ಯ ಸಂಸ್ಕಾರಕ್ಕೆ ಮನ ಸೋತ ಕನ್ನಡಿಗರು..!
ಚಿತ್ರರಂಗದಲ್ಲಿ ಸಾಮಾನ್ಯವಾಗಿ ಅನೇಕರು ತಮ್ಮ ಮಕ್ಕಳನ್ನು ಬೇರೆ ಯಾವುದೋ ಲೋಕದಲ್ಲಿ ಜನ್ಮ ಪಡೆದು ಬಂದವರಂತೆ ಬೆಳೆಸುವ ಸಂಪ್ರದಾಯ ಇದೆ. ಹೈ ಫೈ ಜೀವನ, ಮೋಜು ಮಸ್ತಿಯಲ್ಲಿಯೇ ಇವರ ಮಕ್ಕಳು ಕಳೆದು ಹೋಗುತ್ತಾರೆ. ಇದರಿಂದ ಸಹಜವಾಗಿ ಬಾಲ್ಯದಿಂದ ವಂಚಿತರಾಗುತ್ತಾರೆ. ಇನ್ನೂ ಇವರು ಹೋದಲ್ಲಿ ಬಂದಲ್ಲಿ, ಕುಂತಲ್ಲಿ ನಿಂತಲ್ಲಿ ಸೇವೆ ಮಾಡಲು ಆಳುಗಳನ್ನು ನೀಡಿ, ಹಣದ ಅಮಲನ್ನೇರಿಸಿ, ಬೇಡದ ತೆವಲುಗಳನ್ನು ಇವರಿಗೆ ಮೆತ್ತಿ ಅನೇಕರು ತಮ್ಮ ಮಕ್ಕಳ ಸುಂದರ ಬದುಕನ್ನು ತಾವೇ ಹಾಳು ಮಾಡುತ್ತಾರೆ. ಆದರೆ ಐಶ್ವರ್ಯ ರೈ ಬಚ್ಚನ್ ಇದಕ್ಕೆ ತದ್ವಿರುದ್ದ.
ಮೊದಲಿಂದ ಪಾಪರಾಜಿಗಳ ಕ್ಯಾಮರಾದಿಂದ ತಮ್ಮ ಮಗಳ ರಕ್ಷಣೆಯನ್ನು ಮಾಡುತ್ತಾನೇ ಬಂದ ಐಶ್ವರ್ಯ ರೈ, ತಮ್ಮ ಮಗಳಿಗೆ ಸಂಸ್ಕಾರ-ಆಚಾರ-ವಿಚಾರ-ಸಂಪ್ರದಾಯಗಳನ್ನು ಹೇಳಿ ಕೊಟ್ಟಿದ್ದಾರೆ. ಬದುಕು ಮತ್ತು ಭ್ರಮೆಯ ನಡುವೆ ಇರುವ ವ್ಯತ್ಯಾಸಗಳನ್ನು ಕೂಡ ಹೇಳಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಐಶ್ವರ್ಯ ರೈ ಮಗಳು ಆರಾಧ್ಯ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಈ ಮೂಲಕ ಅನೇಕರ ಹೃದಯವನ್ನು ಗೆದ್ದಿದ್ದಾರೆ.

ಹೌದು, ಮೊನ್ನೆಯಷ್ಟೇ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿರುವುದು ನಿಮಗೆ ಗೊತ್ತೇ ಇರಬೇಕು. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ-ತೆಲುಗು-ತಮಿಳು ಮತ್ತು ಮಲಯಾಳಂ ಭಾಷೆಯ ಅನೇಕ ತಾರೆಯರು ಭಾಗಿಯಾಗಿದ್ದರು. ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆಯಲು ಐಶ್ವರ್ಯ ರೈ ಕೂಡ ತಮ್ಮ ಮಗಳು ಆರಾಧ್ಯ ಜೊತೆ ಬಂದಿದ್ದರು.
ಇದೇ ಸಮಯದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಐಶ್ವರ್ಯ ರೈ, ಚಿಯಾನ್ ವಿಕ್ರಮ್ ಜೊತೆ ವೇದಿಕೆಯಿಂದ ಕೆಳಗಿಳಿದು ಬರುತ್ತಿದ್ದರು. ಆ ಕಡೆಯಿಂದ ಶಿವಣ್ಣ ಬರುತ್ತಿದ್ದರು. ಆಗ ವೇದಿಕೆಯ ಮುಂಭಾಗದಲ್ಲಿ ಎದುರಾದ ವಿಕ್ರಮ್ ಅವರನ್ನು ಶಿವಣ್ಣ ಮಾತನಾಡಿಸಿದರು. ಇದನ್ನು ಅರಿಯದೇ ಐಶ್ವರ್ಯ ರೈ ಬಚ್ಚನ್ ಸ್ವಲ್ಪ ಮುಂದೆ ಹೋದರು. ಆ ನಂತರ ಹಿಂದೆ ತಿರುಗಿ ನೋಡಿದ ಐಶ್ವರ್ಯ ರೈ, ಡಾ.ಶಿವರಾಜ್ ಕುಮಾರ್ ಅವರನ್ನು ಕಂಡು ಮರಳಿ ಹಿಂದೆ ಬಂದು ಮಾತನಾಡಿಸಿದರು. ಉಭಯ ಕುಶಲೋಪರಿ ವಿಚಾರಿಸಿದರು. ತಮ್ಮ ಮಗಳು ಆರಾಧ್ಯಳನ್ನೂ ಕೂಡ ಡಾ.ಶಿವರಾಜ್ ಕುಮಾರ್ ಅವರಿಗೆ ಪರಿಚಯಿಸಿದರು. ಆಗ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳ ಸಂಸ್ಕಾರ ಮತ್ತು ಶಿವಣ್ಣ ಅವರ ವಿನಯವಂತಿಕೆಯ ಕುರಿತು ಚರ್ಚೆಯಾಗುತ್ತಿದೆ. ಅಷ್ಟು ದೊಡ್ಡ ಸ್ಟಾರ್ ಆದರೂ ಮೈ ಮರಿಯದೇ ತಮ್ಮ ಮಗಳಿಗೆ ಸಂಸ್ಕಾರ-ವಿನಯವನ್ನು ಕಲಿಸಿ ಕೊಟ್ಟಿದ್ದಕ್ಕೆ ಐಶ್ವರ್ಯ ರೈ ಅವರನ್ನು ಅನೇಕರು ಹೊಗಳುತ್ತಿದ್ದಾರೆ. ಒಬ್ಬರು ಐಶ್ವರ್ಯ ರೈ ತಮ್ಮ ಮಗಳ ಲಾಲನೆ ಪಾಲನೆಯನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದರೆ, ಮತ್ತೊಬ್ಬರು ಅತ್ತೆ ಮತ್ತು ಮಗಳ ಬಾಂಧವ್ಯ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಇನ್ನೊಬ್ಬರು ಶಿವಣ್ಣ, ವಿಕ್ರಮ್ ಮತ್ತು ಐಶ್ವರ್ಯ ರೈ ಅವರನ್ನು ಒಂದೇ ಫ್ರೇಮ್‌ನಲ್ಲಿ ನೋಡುವುದೇ ಖುಷಿ ಎಂದರೆ, ಆರಾಧ್ಯ ಹ್ಯಾಂಡ್ ಶೇಕ್ ಮಾಡುವ ಮೊದಲು ನಮಸ್ಕರಿಸಿದ್ದು ನಮ್ಮ ಸಂಸ್ಕ್ರತಿಯನ್ನು ಎತ್ತಿ ತೋರಿಸುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಐಶ್ವರ್ಯಾ ರೈ ತುಂಬಾ ವಿನಮ್ರ ಮತ್ತು ಸುಸಂಸ್ಕೃತವಾಗಿ ತಮ್ಮ ಮಗಳನ್ನು ಬೆಳೆಸಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆರಾಧ್ಯ ಅವರ ಈ ನಡೆಗೆ ಕನ್ನಡಿಗರು ಕೂಡ ಮನ ಸೋತಿದ್ದಾರೆ.


Click it and Unblock the Notifications











