'ಕಾಂತಾರ' ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಅಪಹರಣ; ಇದು ಆ ಚಿತ್ರತಂಡದ್ದೇ ಕೆಲಸ!
ಪ್ರಚಾರ, ಚಿತ್ರವೊಂದು ಬಾಕ್ಸ್ಆಫೀಸ್‌ನಲ್ಲಿ ಗೆಲ್ಲಬೇಕೆಂದರೆ ಕಂಟೆಂಟ್ ಜತೆ ಸರಿಯಾದ ಪ್ರಚಾರದ ಅಗತ್ಯವಿದೆ. ಚಿತ್ರಗಳನ್ನು ಎಷ್ಟೇ ಚೆನ್ನಾಗಿ ತಯಾರಿಸಿದ್ರೂ ಸಹ ಸರಿಯಾದ ಪ್ರಚಾರಗಳಿಲ್ಲದೇ ಚಿತ್ರಗಳು ನೆಲಕಚ್ಚಿದ ಸಾಕಷ್ಟು ಉದಾಹರಣೆಗಳಿವೆ. ಇನ್ನು ಕೇವಲ ಪ್ರಚಾರದಿಂದ ಮೊದಲ ದಿನ ಕೋಟಿ ಕೋಟಿ ಬಾಚಿ ನಂತರ ಕಂಟೆಂಟ್ ಇಲ್ಲದೇ ಮಕಾಡೆ ಮಲಗಿದ ಚಿತ್ರಗಳೂ ಇವೆ. ಅದೇ ರೀತಿ ದೊಡ್ಡ ಪ್ರಚಾರವಿಲ್ಲದೇ ಬಂದು ನಂತರ ತನ್ನ ಉತ್ತಮ ಕಂಟೆಂಟ್ ಮೂಲಕ ಜನರ ಬಾಯಿಂದ ಪ್ರಚಾರ ಪಡೆದುಕೊಂಡಂತಹ ಚಿತ್ರಗಳೂ ಸಹ ಇವೆ.
ಹೀಗಾಗಿಯೇ ಇತ್ತೀಚಿಗೆ ಚಿತ್ರ ತಂಡಗಳು ಚಿತ್ರದ ಪ್ರಚಾರಕ್ಕಾಗಿಯೂ ಕೋಟಿ ಕೋಟಿ ರೂಪಾಯಿಗಳನ್ನು ಸುರಿಯುವುದನ್ನು ರೂಢಿಸಿಕೊಂಡಿವೆ. ಇನ್ನು ಬಿಗ್ ಬಜೆಟ್ ಚಿತ್ರಗಳೇನೋ ಸಿನಿ ರಸಿಕರ ಗಮನ ಸೆಳೆಯಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪ್ರಚಾರ ಪಡೆದುಕೊಳ್ಳತ್ತವೆ. ಆದರೆ ಸಣ್ಣ ಬಜೆಟ್‌ನ ಚಿತ್ರಗಳು ಹೆಚ್ಚು ಹಣ ಸುರಿಯದಿದ್ದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವಲ್ಲಿ ಯಶಸ್ವಿಯಾಗಿವೆ.
ಅಂತಹ ಸಣ್ಣ ಬಜೆಟ್‌ನ ಚಿತ್ರಗಳ ಪೈಕಿ ಕನ್ನಡ ಚಿತ್ರರಂಗದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ ಕೂಡ ಒಂದು. ಚಿತ್ರಮಂದಿರ ಪ್ರವೇಶಿಸಲು ಸಜ್ಜಾಗಿರುವ ಈ ಚಿತ್ರತಂಡ ಈಗಾಗಲೇ ಸಾಕಷ್ಟು ವಿಭಿನ್ನ ಪ್ರಚಾರದ ಪ್ರಯತ್ನವನ್ನು ಮಾಡಿದ್ದು ಇದೀಗ ಸದ್ಯ ಕಾಂತಾರ ರೀತಿಯ ದೊಡ್ಡ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿ ಮಿಂಚುತ್ತಿರುವ ಅಜನೀಶ್ ಲೋಕನಾಥ್ ಅವರನ್ನು ಬಳಸಿಕೊಂಡು ಮತ್ತೊಂದು ಪ್ರಚಾರದ ಸ್ಟಂಟ್‌ಗೆ ಕೈ ಹಾಕಿದೆ.

ಅಜನೀಶ್ ಲೋಕನಾಥ್ ಕಿಡ್ನಾಪ್
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅಪಹರಣಗೊಂಡಿದ್ದಾರೆ ಎಂಬ ಪೋಸ್ಟರ್ ಒಂದನ್ನು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ ಬಿಡುಗಡೆಗೊಳಿಸಿದ್ದು, ಇದರಲ್ಲಿ ಅಜನೀಶ್ ಲೋಕನಾಥ್ ಅವರನ್ನು ಅವರ ಸ್ಟುಡಿಯೋದಿಂದಲೇ ಅಪಹರಣಕಾರರ ಗುಂಪೊಂದು ಅಪರಹರಿಸಿದ್ದು ಇದರ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ ಎಂದು ಬರೆದುಕೊಂಡಿದೆ. ಅಷ್ಟೇ ಅಲ್ಲದೇ ಈ ದೃಶ್ಯವನ್ನು ತನಿಖಾಧಿಕಾರಿಗಳು ಪರಿಶೀಲಿಸಿದ ನಂತರ ಇದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ರೌಡಿಗಳೇ ಮಾಡಿದ್ದಾರೆ ಎಂದು ಅನುಮಾನಿಸಿದ್ದಾರೆ ಎಂದೂ ಸಹ ಬರೆದುಕೊಳ್ಳಲಾಗಿದೆ.

ತಂಡದ ಪ್ರಯತ್ನಕ್ಕೆ ಮಿಶ್ರ ಪ್ರತಿಕ್ರಿಯೆ
ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಈ ರೀತಿ ಅಜನೀಶ್ ಕುರಿತು ಮಾಡಿದ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಯನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಕೆಲವರು ಚಿತ್ರತಂಡ ಪ್ರಚಾರಕ್ಕಾಗಿ ಈ ರೀತಿ ಮಾಡುವುದನ್ನು ಕಂಡು ಹಲವರು ಇದು ನಿಜ ಎಂದು ನಂಬುವವರಿದ್ದಾರೆ, ಇಂತಹ ಪಬ್ಲಿಸಿಟಿ ಸ್ಟಂಟ್‌ಗೆ ತಲೆ ಉಪಯೋಗಿಸುವ ಬದಲು ಚಿತ್ರಕತೆಗೆ ಅದೇ ಬುದ್ಧಿಯನ್ನು ಬಳಸಿಕೊಂಡರೆ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಚಿತ್ರತಂಡದ ಕ್ರಿಯೇಟಿವ್ ಪ್ರಚಾರದ ಹಾದಿಯನ್ನು ಮೆಚ್ಚಿಕೊಂಡಿದ್ದಾರೆ.

ಅಪ್ಪು ಕೂಡ ಹಾಸ್ಟೆಲ್ ಹುಡುಗರ ಜೊತೆ ಸೇರಿದ್ರು
ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಮೊದಲ ಪೋಸ್ಟರ್ ಅನ್ನು ಪುನೀತ್ ರಾಜ್‌ಕುಮಾರ್ ಹಿಮಾಲಯ ಪರ್ವತದ ಮೇಲೆ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ ಪುನೀತ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಆದರೆ ಇಲ್ಲಿ ಗ್ರೀನ್ ಮ್ಯಾಟ್ ಬಳಸಿ ಚಳಿ ಎಂಬಂತೆ ಅಪ್ಪು ಬಳಿ ಕೂಡ ಚಿತ್ರತಂಡ ಪ್ರಚಾರ ಮಾಡಿಸಿತ್ತು. ಇನ್ನು ಇದೇ ವಿಡಿಯೊದಲ್ಲಿ ಚಿತ್ರತಂಡದ ಉಪಾಯವನ್ನು ಅಪ್ಪು ತೆಗಳುವ ಹಾಗೇ ಕೂಡ ಚಿತ್ರೀಕರಿಸಲಾಗಿತ್ತು.

ರಮ್ಯಾ ಕಮ್‌ಬ್ಯಾಕ್ ಎಂಬ ವಿಷಯ ಕೂಡ ಬಳಕೆ
ಇನ್ನು ನಟಿ ರಮ್ಯಾ ಚಂದನವನಕ್ಕೆ ಮರಳಲಿದ್ದಾರೆ ಎಂಬ ಹಾಟ್ ಸುದ್ದಿಯನ್ನು ಬಳಸಿಕೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ನಟಿ ರಮ್ಯಾ ನಮ್ಮ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ಪೋಸ್ಟರ್ ಹಂಚಿಕೊಂಡಿತ್ತು. ಅದರಂತೆ ರಮ್ಯಾ ಚಿತ್ರೀಕರಣದಲ್ಲಿ ಭಾಗವಹಿಸಿದ ಕೆಲ ನಿಮಿಷಗಳಲ್ಲೇ ಚಿತ್ರತಂಡವನ್ನು ಬೈದು ಚಿತ್ರೀಕರಣದಿಂದ ಹೊರ ಹೋಗುವ ದೃಶ್ಯವನ್ನೂ ಸಹ ಚಿತ್ರತಂಡ ಹಂಚಿಕೊಂಡಿತ್ತು. ಹೀಗೆ ಕೆಲವೊಂದು ಗಿಮಿಕ್ ಉಪಾಯಗಳನ್ನು ಬಳಸಿ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರು ಈ ಬಾರಿ ಅಜನೀಶ್ ವಿಚಾರದಲ್ಲಿ ಯಾವ ರೀತಿ ಪ್ರಚಾರ ಮಾಡುತ್ತೋ ನೋಡಬೇಕಿದೆ..


Click it and Unblock the Notifications











