ಡಿವೋರ್ಸ್ ಸುದ್ದಿ ಬಗ್ಗೆ ಮೌನ ಮುರಿದ ನಟ ಅಜಯ್ ರಾವ್; ಬಹಿರಂಗ ಪತ್ರ
ಕನ್ನಡ ನಟ ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನಾ ರಾವ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಊಹಾಪೋಹ ಶುರುವಾಗಿದೆ. ಪರಸ್ಪರ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಸ್ವತಃ ಅಜಯ್ ರಾವ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪತ್ರದ ಬರೆದಿದ್ದಾರೆ.
10 ವರ್ಷಗಳ ಹಿಂದೆ ಹೊಸಪೇಟೆಯಲ್ಲಿ ಅಜಯ್ ರಾವ್ ಹಾಗೂ ಸ್ವಪ್ನಾ ರಾವ್ ಮದುವೆ ನಡೆದಿತ್ತು. ಇಬ್ಬರೂ ಪ್ರೀತಿಸಿ ಪೋಷಕರನ್ನು ಒಪ್ಪಿಸಿ ಮದುವೆ ಆಗಿದ್ದರು. ದಂಪತಿಗೆ ಒಬ್ಬಳು ಮಗಳಿದ್ದಾಳೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪತಿ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿರುವ ಪತ್ನಿ ಸ್ವಪ್ನಾ ರಾವ್ ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತೀಚೆಗೆ 'ಯುದ್ಧಕಾಂಡ'-2 ಸಿನಿಮಾ ನಿರ್ಮಿಸಿ, ನಟಿಸಿ ಅಜಯ್ ರಾವ್ ಗೆದ್ದಿದ್ದರು. ಈ ಚಿತ್ರದ ನಿರ್ಮಾಣ ಸಮಯದಲ್ಲೇ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನಲಾಗ್ತಿದೆ.

'ಯುದ್ಧಕಾಂಡ- 2' ಸಿನಿಮಾ ಮಾಡಲು ಅಜಯ್ ರಾವ್ ಸಾಲ ಮಾಡಿಕೊಂಡಿದ್ದರು. ಈ ಬಗ್ಗೆ ಅವರು ಮಾತನಾಡಿದ್ದರು. ಆದರೆ ಸಿನಿಮಾ ನಿರ್ಮಾಣ ಮಾಡುವ ವಿಚಾರ ಪತ್ನಿ ಇಷ್ಟವಿರಲಿಲ್ಲ. ಆಕೆಯ ಮಾತು ಕೇಳದೇ ಅಜಯ್ ರಾವ್ ಚಿತ್ರಕ್ಕೆ ಹಣ ಹೂಡಿದ್ದರು. ತಕ್ಕ ಮಟ್ಟಿಗೆ ಸಿನಿಮಾ ಗೆದ್ದಿತ್ತು. ಆದರೂ ನಷ್ಟವಾಗಿದೆ ಎನ್ನುವ ಊಹಾಪೋಹ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಇಬ್ಬರ ನಡುವಿ ಕಲಹ ಹೆಚ್ಚಾಗಿ ಇದೀ ಡಿವೋರ್ಸ್ ಪಡೆಯುವ ಹಂತಕ್ಕೆ ಬಂದಿದೆ ಎಂದು ಚರ್ಚೆ ಆಗುತ್ತಿದೆ.
ಸದ್ಯ ಡಿವೋರ್ಸ್ ಸುದ್ದಿ ಬಗ್ಗೆ ನಟ ಅಜಯ್ ರಾವ್ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ರ ಬರೆದಿದ್ದಾರೆ. "ಎಲ್ಲಾ ಅಭಿಮಾನಿಗಳಿಗೆ, ಮಾಧ್ಯಮಗಳಿಗೆ, ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ, ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವ್ಯಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ದೂರವಿಡುವಂತೆ ತಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ" ಎಂದು ತಿಳಿಸಿದ್ದಾರೆ.
"ಪ್ರತಿಯೊಂದು ಕುಟುಂಬವೂ ಸವಾಲುಗಳನ್ನು ಎದುರಿಸುತ್ತದೆ, ಅವುಗಳನ್ನು ಖಾಸಗಿಯಾಗಿ ಉಳಿಯುವುವಂತೆ ಸಹಕರಿಸಿ ಎಂದು ಎಲ್ಲರಲ್ಲಿ ಹೃತ್ತೂರ್ವಕ ವಿನಂತಿ. ನಿಮ್ಮ ಮನವೊಲಿಕೆ, ಬೆಂಬಲ ಮತ್ತು ವಿವೇಕ ನಮಗೆ ಅತ್ಯಂತ ಮುಖ್ಯ. ಕೃತಜ್ಞತೆಯಿಂದ ಅಜೇಯ ರಾವ್" ಎಂದು ಪತ್ರದಲ್ಲಿ ಬರೆದಿದ್ದಾರೆ.
ತಾನಾಯ್ತು ತನ್ನ ಕೆಲಸ ಆಯ್ತು ಎಂದು ಅಜಯ್ ರಾವ್ ಇದ್ದರು. ಇತ್ತೀಚಿನ ವರ್ಷಗಳಲ್ಲಿ ಅವರ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡುತ್ತಿರಲಿಲ್ಲ. ಅಂತಿಮವಾಗಿ ತಾವೇ 'ಯುದ್ಧಕಾಂಡ- 2' ಸಿನಿಮಾ ನಿರ್ಮಿಸಿ ನಟಿಸುವ ಸಾಹಸ ಮಾಡಿದ್ದರು. ಕಳೆದ ವರ್ಷ ದಂಪತಿ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಬಹಳ ಅನ್ಯೋನ್ಯವಾಗಿ ಇದ್ದ ಜೋಡಿ ದಿಢೀರನೆ ಡಿವೋರ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನುವುದು ಎಲ್ಲರಿಗೂ ಅಚ್ಚರಿ ತಂದಿದೆ.
ಇನ್ನು 'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಕೃಷ್ಣಲೀಲಾ' ಹೀಗೆ ಕೃಷ್ಣ ಹೆಸರಿನ ಸಿನಿಮಾಗಳಲ್ಲಿ ಕೃಷ್ಣ ಎನ್ನುವ ಪಾತ್ರಗಳಲ್ಲಿ ಅಜಯ್ ರಾವ್ ನಟಿಸಿದ್ದರು. ಕೃಷ್ಣ ಅಜಯ್ ರಾವ್ ಎಂದೇ ಅವರನ್ನು ಕರೆಯಲಾಗುತ್ತಿತ್ತು. ಆದರೆ ಕೃಷ್ಣ ಜನ್ಮಾಷ್ಠಮಿ ದಿನವೇ ಅವರ ಬದುಕಿನಲ್ಲಿ ಬಿರುಗಾಳಿ ಎದ್ದ ಸುದ್ದಿ ಹೊರ ಬಂದಿದೆ.


Click it and Unblock the Notifications











