'ಹೆಡ್-ಬುಷ್' ಸಿನಿಮಾ ವಿರುದ್ಧ ಹೋರಾಟಕ್ಕೆ ಕಾರಣ ತಿಳಿಸಿದ ಅಜಿತ್ ಜಯರಾಜ್
ಡಾಲಿ ಧನಂಜಯ್ ನಟನೆಯ 'ಹೆಡ್-ಬುಷ್' ಸಿನಿಮಾ ಚಿತ್ರೀಕರಣ ಮುಗಿಸಿ ಇನ್ನೇನು ಬಿಡುಗಡೆಗೆ ತಯಾರಾಗಿರುವ ಹೊತ್ತಿನಲ್ಲಿ ವಿವಾದವೊಂದು ಸಿನಿಮಾವನ್ನು ಸುತ್ತಿಕೊಂಡಿದೆ.
ಆರಂಭದಲ್ಲಿಯೇ ಚಿತ್ರತಂಡ ಹೇಳಿರುವಂತೆ 'ಹೆಡ್-ಬುಷ್' ಸಿನಿಮಾ ಭೂಗತ ಪಾತಕಿ ಜಯರಾಜ್ ಜೀವನ ಕುರಿತಾದದ್ದಾಗಿದೆ. ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ-ಚಿತ್ರಕತೆ ಒದಗಿಸಿದ್ದಾರೆ. ಆದರೆ ಇದೀಗ ಸಿನಿಮಾ ಬಿಡುಗಡೆ ಸನಿಹಕ್ಕೆ ಬಂದರುವಾಗ ಜಯರಾಜ್ ಪುತ್ರ ಅಜಿತ್ ಜಯರಾಜ್ ಸಿನಿಮಾದ ವಿರುದ್ಧ ದೂರು ನೀಡಿದ್ದಾರೆ.
ಆರಂಭದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಬದಲಾವಣೆ ಆಗಿದ್ದಕ್ಕೆ ತುಸು ಸುದ್ದಿಯಾಗಿದ್ದ ಸಿನಿಮಾ ಇದೀಗ ಸಿನಿಮಾದ ವಿರುದ್ಧ ಅಜಿತ್ ಜಯರಾಜ್ ದೂರು ನೀಡಿರುವುದು ಬಹುವಾಗಿ ಸುದ್ದಿ ಆಗುತ್ತಿದೆ.

ಆರಂಭದಲ್ಲಿ ಸಿನಿಮಾಕ್ಕೆ ಶುಭ ಹಾರೈಸಿದ್ದ ಅಜಿತ್ ಜಯರಾಜ್ ಈಗ ಏಕಾ-ಏಕಿ ಸಿನಿಮಾದ ವಿರುದ್ಧ ಮಾತನಾಡುತ್ತಿರುವುದು ಅವರ ಉದ್ದೇಶದ ಬಗ್ಗೆ ಹಲವರಿಗೆ ಅನುಮಾನ ಮೂಡಿಸಿದೆ. ತಾವೇಕೆ ಸಿನಿಮಾದ ವಿರುದ್ಧ ಹೋರಾಟ ಮಾಡುತ್ತಿರುವುದಾಗ ಅಜಿತ್ ಇದೀಗ ಹೇಳಿದ್ದಾರೆ.
''ಈ ಹೋರಾಟವನ್ನು ನಾನು ನನ್ನ ತಾಯಿಗಾಗಿ ಮಾಡುತ್ತಿದ್ದೇನೆ'' ಎಂದಿದ್ದಾರೆ ಅಜಿತ್ ಜಯರಾಜ್. ನಾನು ಯಾವುದೇ ಕಾಣದ ಕೈಗಳ ಮಾತು ಕೇಳುತ್ತಿಲ್ಲ ಬದಲಿಗೆ ನಾನು ನನ್ನ ತಾಯಿಯ ಮಾತು ಕೇಳುತ್ತಿದ್ದೇನೆ. ನನ್ನ ಹೋರಾಟ ತಾಯಿಗಾಗಿ'' ಎಂದಿದ್ದಾರೆ ಅಜಿತ್.
'ಹೆಡ್-ಬುಷ್' ಸಿನಿಮಾದಲ್ಲಿ ತಮ್ಮ ತಂದೆ ಜಯರಾಜ್ ಅವರ ವ್ಯಕ್ತಿತ್ವವನ್ನು ಬಿಂಬಿಸಿರುವ ರೀತಿ ಅವರಿಗೆ ಅಸಮಾಧಾನ ತಂದಿದೆಯಂತೆ. ನನ್ನ ತಂದೆ ಸ್ಮೋಕಿಂಗ್ ಮಾಡುತ್ತಿದ್ದರು ಎಂದು ಟೀಸರ್‌ನಲ್ಲಿ ತೋರಿಸಲಾಗಿದೆ ಆದರೆ ಅದು ಸುಳ್ಳು, ನನ್ನ ತಂದೆಯನ್ನು ಕೆಟ್ಟದಾಗಿ ಸಿನಿಮಾದಲ್ಲಿ ತೋರಿಸಲಾಗಿದೆ'' ಎಂದು ಅಜಿತ್ ಆರೋಪ ಮಾಡಿದ್ದಾರೆ.
'ಹೆಡ್-ಬುಷ್', ಜಯರಾಜ್ ಸಾರ್ವಜನಿಕ ಜೀವನದ ಬಗ್ಗೆ ಮಾಡಲಾಗಿರುವ ಸಿನಿಮಾ, ಅದನ್ನು ಪ್ರಶ್ನಿಸುವ ಹಕ್ಕು ಅಜಿತ್‌ಗೆ ಇಲ್ಲ ಎಂಬ ಅಗ್ನಿ ಶ್ರೀಧರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಜಿತ್, ''ಶ್ರೀಧರ್ ಅಂಕಲ್, ಕಾಪಾಳಕ್ಕೆ ಭಾರಿಸಬೇಕು ಎನ್ನುತ್ತಾರೆ. ಇದು ನನ್ನ ತಾಯಿಗೆ ಬೇಸರ ತರಿಸಿದೆ. ಸಿನಿಮಾದ ನಿರ್ದೇಶಕ ಶೂನ್ಯ ನನ್ನ ತಂದೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ನನ್ನನ್ನು ಹಾಗೂ ತಾಯಿಯನ್ನು ಕಾರ್ನರ್ ಮಾಡಲಾಗಿದೆ, ನನ್ನ ತಂದೆಯ ಬಗ್ಗೆ ಮಾಡಲಾಗಿರುವ ಸಿನಿಮಾ ಇದು, ಹಾಗಾಗಿ ನಮಗೆ ಪ್ರಶ್ನಿಸುವ ಹಕ್ಕಿದೆ'' ಎಂದಿದ್ದಾರೆ ಅಜಿತ್.
''ಅಗ್ನಿ ಶ್ರೀಧರ್, 'ದಾದಾಗಿರಿಯ ದಿನಗಳು' ಪುಸ್ತಕ ಬರೆದಾಗ, 'ಆ ದಿನಗಳು' ಸಿನಿಮಾ ಮಾಡಿದಾಗ ನಾನಿನ್ನೂ ಚಿಕ್ಕವನು, ಹಾಗಾಗಿ ಪ್ರಶ್ನೆ ಮಾಡಲಿಲ್ಲ. ಆದರೆ ಈಗ ಪ್ರಶ್ನೆ ಮಾಡುತ್ತಿದ್ದೇನೆ. ಅದು ನನ್ನ ಹಕ್ಕು'' ಎಂದಿದ್ದಾರೆ ಅಜಿತ್ ಜಯರಾಜ್.
'ಹೆಡ್-ಬುಷ್' ಸಿನಿಮಾ, ಭೂಗತ ಪಾತಕಿ ಜಯರಾಜ್ ಜೀವನ ಆಧರಿಸಿದ ಸಿನಿಮಾ ಆಗಿದ್ದು, ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಕೊತ್ವಾಲನ ಪಾತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದಾರೆ.


Click it and Unblock the Notifications











