twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಮತ್ತೊಂದು ದೂರು

    |

    ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಾ ಸಾಗುತ್ತಿದೆ. ನಾದಬ್ರಹ್ಮ ಆಡಿದ ಮಾತುಗಳಿಗೆ ಪೇಜಾವರ ಶ್ರೀಗಳ ಭಕ್ತಗಣ ಆಕ್ರೋಶಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಹಂಸಲೇಖ ಹೇಳಿಕೆಯ ವಿಚಾರವಾಗಿ ಪರ-ವಿರೋಧ ಮಾತುಗಳು ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಂಸಲೇಖ ದಿವಂಗತ ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದಾರೆ. ಆದರೆ ಅಲ್ಲಿ ಕೋಳಿ, ಕುರಿ ಮಾಂಸವನ್ನು ತಿಂದಿದ್ದಾರಾ ಎಂದು ಪ್ರಶ್ನೆ ಮಾಡಿದ್ದರು. ಹಾಗೇ ಬಿಳಿಗರಿ ರಂಗಯ್ಯ ಸೋಲಿಗರ ಹೆಣ್ಣನ್ನು ಮದುವೆ ಆಗುವುದರಲ್ಲಿ ದೊಡ್ಡ ತನವೇನಿದೆ? ಆ ಹೆಣ್ಣನ್ನು ತನ್ನ ದೇವಸ್ಥಾನದೊಳಗೆ ಇಟ್ಟುಕೊಳ್ಳಬೇಕಿತ್ತು ಎಂಬರ್ಥದಲ್ಲಿ ಮಾತಾಡಿದ್ದರು.

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಂಸಲೇಖ ಆಡಿದ ಈ ಮಾತುಗಳೇ ಈಗ ವಿವಾದಕ್ಕೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಹಂಸಲೇಖ ವಿರೋಧಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದರ ಮೇಲೊಂದರಂತೆ ದೂರುಗಳು ದಾಖಲಾಗುತ್ತಿವೆ. ನಿನ್ನೆ ರಾತ್ರಿ (ನವೆಂಬರ್ 17) ರಂದು ಹಂಸಲೇಖ ಹೇಳಿಕೆಯನ್ನು ಖಂಡಿಸಿ ಮತ್ತೊಂದು ದೂರು ದಾಖಲಿಸಲಾಗಿದೆ.

    ಮಾಧ್ವ ಮಹಾಸಭಾದಿಂದ ದೂರು

    ಮಾಧ್ವ ಮಹಾಸಭಾದಿಂದ ದೂರು

    ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆಯನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ದಿವಂಗತ ಪೇಜಾವರ ಶ್ರೀಗಳ ವಿರುದ್ಧ ನೀಡಿದ ಹೇಳಿಕೆಗಳು ಹಂಸಲೇಖಗೆ ಕಗ್ಗಂಟಾಗಿ ಪರಿಣಮಿಸಿದೆ. ಶ್ರೀಗಳ ಭಕ್ತಗಣ ನಾದಬ್ರಹ್ಮ ಆಡಿದ ಮಾತುಗಳನ್ನು ತೀವ್ರವಾಗಿ ಖಂಡಿಸುತ್ತಲೇ ಬಂದಿದೆ. ಹಲವೆಡೆ ಸಂಗೀತ ನಿರ್ದೇಶಕ ಅವರ ಹೇಳಿಕೆಗಳನ್ನು ಖಂಡಿಸಿ ದೂರು ದಾಖಲಾಗುತ್ತಲೇ ಇದೆ. ಕಳೆದ ಎರಡು ದಿನಗಳಿಂದ ಈ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ನಿನ್ನೆ (ನವೆಂಬರ್ 17) ರಾತ್ರಿ 8 ಗಂಟೆ ಸುಮಾರಿಗೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಅಧ್ಯಕ್ಷ ಡಾ. ಮುರಳಿಧರ್ ಎಂಬುವವರು ಹಂಸಲೇಖ ವಿರುದ್ಧವಾಗಿ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಮಾಡಿದ ಆರೋಪವೇನು?

    ದೂರಿನಲ್ಲಿ ಮಾಡಿದ ಆರೋಪವೇನು?

    ಹಂಸಲೇಖ ವಿರುದ್ಧ ದಾಖಲಿಸಿದ ದೂರಿನಲ್ಲಿ ಸಮಾಜದಲ್ಲಿರುವ ವರ್ಗ ವರ್ಗಗಳ ಮಧ್ಯೆ ದುರುದ್ದೇಶ ಹಾಗೂ ದ್ವೇಷವನ್ನು ಉಂಟು ಮಾಡಿರುತ್ತಾರೆ. ಮತೀಯ-ಮತೀಯರ ಮಧ್ಯೆ ದ್ವೇಷ ಭಾವನೆಯನ್ನು ಉಂಟು ಮಾಡಿ ಗುರುಗಳಿಗೆ ಅಪಮಾನ ಮಾಡಿರುತ್ತಾರೆ. ಸ್ವಚ್ಚ ಸಮಾಜದಲ್ಲಿ ಉದ್ದೇಶಪೂರ್ವಕ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಶಾಂತಿ ಭಂಗ ಮಾಡಿದ್ದಾರೆ. ಅನ್ಯ ಮನಸ್ಕನಾಗಿ ವಿಕೃತಿ ಮೆರೆದಿದ್ದಾರೆ ಎಂದು ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ದೂರಿನಲ್ಲಿ ದಾಖಲಿಸಿದೆ.

    ಶ್ರೀಗಳಿಗೆ ಕೇಡು ಬಯಸಲು ಈ ಹೇಳಿಕೆ

    ಶ್ರೀಗಳಿಗೆ ಕೇಡು ಬಯಸಲು ಈ ಹೇಳಿಕೆ

    ಹಂಸಲೇಖ ಆಡಿದ ಮಾತುಗಳು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯನ್ನುಂಟು ಮಾಡಿವೆ. ದಿವಂಗತ ಪೇಜಾವರ ಶ್ರೀಗಳಿಗೆ ಕೇಡು ಬಯಸುವ ಸಲುವಾಗಿಯೇ ಇಂತಹ ಹೇಳಿಕೆಗಳನ್ನು ಹಂಸಲೇಖ ನೀಡಿದ್ದಾರೆ. ಇದು ಸಮಾಜದಲ್ಲಿ ವರ್ಗಗಳ ಮಧ್ಯೆ ದ್ವೇಷವನ್ನು ಸಾರುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

    ಗಲಾಟೆ ನಡೆದರೆ ಹಂಸಲೇಖ ಕಾರಣ

    ಗಲಾಟೆ ನಡೆದರೆ ಹಂಸಲೇಖ ಕಾರಣ

    ಹಂಸಲೇಖ ನೀಡಿದ ಹೇಳಿಕೆಯಿಂದ ಸಮಾಜದಲ್ಲಿ ಏನಾದರೂ ಗಲಾಟೆಗಳು ಸಂಭವಿಸಿದರೆ, ಅದಕ್ಕೆ ಕಾರಣ ಇವರೇ ಕಾರಣೀಕರ್ತರಾಗಿರುತ್ತಾರೆ. ಅಲ್ಲದೆ ಹಂಸಲೇಖ ಪತ್ನಿಯೇ ಖಂಡಿಸಿದ್ದಾಗಿ ಅವರು ಹೇಳಿಕೊಂಡಿರುವುದರಿಂದ ಇವರ ನಡುವಳಿಕೆ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದೆ. ಹೀಗಾಗಿ ಇವರನ್ನು ಸಮಾಜಕ್ಕೆ ಘಾತುಕ ಉಂಟು ಮಾಡುವ ವ್ಯಕ್ತಿಯೆಂದು ಪರಿಗಣಿಸಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.

    ಹಂಸಲೇಖ ಪ್ರಚಾರಕ್ಕಾಗಿ ಶಾಂತಿ ಕದಡುತ್ತಿದ್ದಾರೆ. ಹೀಗಾಗಿ ಕಾನೂನು ಪ್ರಕಾರ ಸೂಕ್ತಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಅಧ್ಯಕ್ಷ ಡಾ. ಮುರಳಿಧರ್ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಅನ್ವಯ ಕಾಲಂ 295(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    English summary
    One More complaint lodged against music director Hamsalekha. Akhila Karnataka Madhwa Mahaabha says Hamsalekha is against society's peace.
    Thursday, November 18, 2021, 12:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X