'ಶಿವಣ್ಣ ಕರೆದರೆ ಈಗಲೇ ಕನ್ನಡ ಸಿನಿಮಾ ಮಾಡ್ತೀನಿ' ಎಂದ ನಾಗಾರ್ಜುನ
Recommended Video

ಕನ್ನಡದಲ್ಲಿ ನಟ ಶಿವರಾಜ್ ಕುಮಾರ್ ಹೇಗೋ, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೆ. ವಯಸ್ಸು 58 ಆಗಿದ್ದರೂ ಚಿರಯುವಕನಂತೆ ಕಾಣುವ ಟಾಲಿವುಡ್ ಕಿಂಗ್ ಈಗಲೂ ಸಿನಿಮಾ ಇಂಡಸ್ಟ್ರಿಯಲ್ಲಿ ಕಿಂಗ್ ಆಗಿ ಉಳಿದುಕೊಂಡಿದ್ದಾರೆ.
ಆಲ್ ಮೋಸ್ಟ್ ಇಬ್ಬರು ಒಂದೇ ವರ್ಷ ಸಿನಿ ಕರಿಯರ್ ಆರಂಭಿಸಿದ್ದಾರೆ. ಶಿವಣ್ಣ 1986ರಲ್ಲಿ 'ಅನಂದ್' ಸಿನಿಮಾದ ಮೂಲಕ ನಾಯಕನಾಗಿ ಅಭಿನಯಿಸಿದ್ರೆ, ಅದೇ ವರ್ಷ ನಾಗಾರ್ಜುನ ತೆಲುಗಿನಲ್ಲಿ 'ವಿಕ್ರಂ' ಚಿತ್ರದಲ್ಲಿ ಎಂಟ್ರಿ ಕೊಟ್ಟರು. ಸುಮಾರು 32 ವರ್ಷಗಳ ಕಾಲ ಈ ಇಬ್ಬರು ಕಲಾವಿದರು ತಮ್ಮದೇ ನಟನೆಯಿಂದ ಪ್ರೇಕ್ಷಕರನ್ನ ರಂಜಿಸಿದ್ದಾರೆ.
ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿರುವ ನಾಗಾರ್ಜುನ ಇದುವರೆಗೂ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಆದ್ರೀಗ, ಕನ್ನಡದಲ್ಲಿ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಅದಕ್ಕೆ ನಮ್ಮ ಕನ್ನಡಿಗರು ಮುಂದಾಗಬೇಕಿದೆ ಅಷ್ಟೇ. ಅಷ್ಟಕ್ಕೂ, ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡುವ ಬಗ್ಗೆ ನಾಗಾರ್ಜುನ ಏನಂದ್ರು.? ಮುಂದೆ ಓದಿ.....

ಟಾಲಿವುಡ್ ಕಿಂಗ್-ಸ್ಯಾಂಡಲ್ ವುಡ್ ಕಿಂಗ್
ನಿನ್ನೆ ಮಾರತಹಳ್ಳಿಯಲ್ಲಿ ಆರಂಭವಾದ ಕಲ್ಯಾಣ್ ಜ್ಯುವೆಲ್ಲರ್ಸ್ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ತೆಲುಗು ನಟ ನಾಗಾರ್ಜುನ ಮತ್ತು ಕನ್ನಡ ನಟ ಶಿವರಾಜ್ ಕುಮಾರ್, ಒಟ್ಟಿಗೆ ಸಿನಿಮಾ ಮಾಡೋ ಬಗ್ಗೆ ಆಸಕ್ತಿ ಹೊಂದಿರುವುದಾಗಿ ಇಬ್ಬರು ಮನಬಿಚ್ಚಿ ಮಾತನಾಡಿದರು.

ಕರೆದರೆ ಈಗಲೇ ಮಾಡ್ತೀನಿ
''ಶಿವಣ್ಣ ಕರೆದರೆ ತಕ್ಷಣ ಬಂದು ಬಿಡ್ತೀನಿ. ಒಂದು ಅದ್ಭುತವಾದ ಕಥೆ ಬಂದಾಗ ಖಂಡಿತಾ ಮಾಡುತ್ತೇನೆ ಅದರಲ್ಲೂ ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಈಗ ಕರೆದರೆ ನಾನು ಆಕ್ಟ್ ಮಾಡ್ತೀನಿ. ಡಾ ರಾಜ್ ಕುಮಾರ್ ಅವರ ನಟನೆ ನೋಡಿದ್ದೇವೆ, ನನ್ನ ಅಭಿನಯವನ್ನ ನೋಡಿ ಫೋನ್ ಮಾಡಿ ಮೆಚ್ಚಿಕೊಂಡಿದ್ದಾರೆ. ಶಿವಣ್ಣ ನಾನು ಕೂಡ ಒಳ್ಳೆಯ ಸ್ನೇಹಿತರು'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಳ್ಳೆ ಕಥೆ ಬೇಕು ಅಲ್ವಾ
''ನಾಗಾರ್ಜುನ ಅವರ ಜೊತೆ ಸಿನಿಮಾ ಮಾಡಬೇಕು ಅಂದ್ರೆ ಒಳ್ಳೆ ಕಥೆ ಬೇಕು. ಅದು ಸಿಕ್ಕರೇ ಖಂಡಿತಾ ಒಟ್ಟಿಗೆ ಮಾಡ್ತೇವೆ. ಕನ್ನಡದಲ್ಲೂ ಹಾಗೂ ತೆಲುಗು ಎರಡರಲ್ಲೂ ಮಾಡಬಹುದು'' ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.

ನಾಗಾರ್ಜುನ ಕನ್ನಡ ಸಿನಿಮಾ ಮಾಡಿಲ್ಲ
ಸುಮಾರು 90ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ನಾಗಾರ್ಜುನ ಅವರು ಕನ್ನಡದಲ್ಲಿ ಅಭಿನಯಿಸಿಲ್ಲ. ಶಿವರಾಜ್ ಕುಮಾರ್ ಅವರು ಕಳೆದ ವರ್ಷ ಬಾಲಕೃಷ್ಣ ಅಭಿನಯಿಸಿದ್ದ 'ಗೌತಮಿಪುತ್ರ ಶಾತಕರ್ಣಿ' ಚಿತ್ರದಲ್ಲಿ ವಿಶೇಷ ಪಾತ್ರವನ್ನ ಮಾಡಿದ್ದು ಬಿಟ್ಟರೇ ಪೂರ್ತಿ ಸಿನಿಮಾ ಮಾಡಿಲ್ಲ. ಹೀಗಾಗಿ, ಇಬ್ಬರು ಒಟ್ಟಾದರೇ ಒಂದೊಳ್ಳೆ ಸಿನಿಮಾ ಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.

ನಮ್ಮ ನಿರ್ದೇಶಕರು ಪ್ರಯತ್ನ ಪಡಬಹುದು
ನಾಗಾರ್ಜುನ ಮತ್ತು ಶಿವರಾಜ್ ಕುಮಾರ್ ಅವರ ಮಾತುಗಳನ್ನ ಕೇಳಿದ ಮೇಲೆ ನಮ್ಮ ಕನ್ನಡದ ನಿರ್ದೇಶಕರು ಒಂದೊಳ್ಳೆ ಸ್ಕ್ರಿಪ್ಟ್ ಮಾಡಿ ಈ ಇಬ್ಬರು ದಿಗ್ಗಜರನ್ನ ಒಟ್ಟುಗೂಡಿಸಿ ಒಂದು ಸಿನಿಮಾ ಮಾಡಲು ಪ್ರಯತ್ನಿಸಬಹುದು. ಯೋಚನೆ ಮಾಡಿ.


Click it and Unblock the Notifications











