'ಪಿಂಕಿ ಎಲ್ಲಿ' ನಟನೆಗಾಗಿ ಅಕ್ಷತಾಗೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ
'ಪಿಂಕಿ ಎಲ್ಲಿ?' ಚಿತ್ರದ ನಟನೆಗಾಗಿ ಅಕ್ಷತಾ ಪಾಂಡವಪುರ ಅವರಿಗೆ ಇತ್ತೀಚಿಗಷ್ಟೆ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿತ್ತು. ಇದೀಗ, ಅಕ್ಷತಾ ನಟನೆಗೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿದೆ.
ಕೆನಡಾದಲ್ಲಿ ನಡೆಯುವ ಒಟ್ಟಾವಾ ಇಂಡಿಯನ್ ಫಿಲಂ ಫೆಸ್ಟಿವಲ್ ಅವಾರ್ಡ್‌ನಲ್ಲಿ ತೀರ್ಪುಗಾರರ ವಿಶೇಷ ಮನ್ನಣೆಗೆ ಅಕ್ಷತಾ ಪಾಂಡವಪುರ ಪಾತ್ರರಾಗಿದ್ದಾರೆ.
ಒಟ್ಟಾವಾ ಇಂಡಿಯನ್ ಫಿಲಂ ಫೆಸ್ಟಿವಲ್ ಅವಾರ್ಡ್‌ನಲ್ಲಿ 'ಪಿಂಕಿ ಎಲ್ಲಿ?' ಚಿತ್ರಕ್ಕೆ ಎರಡು ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಚಿತ್ರಕಥೆಗಾಗಿ ಪೃಥ್ವಿ ಕೋಣನೂರು ಹಾಗೂ ತೀರ್ಪುಗಾರರ ವಿಶೇಷ ಪ್ರಶಸ್ತಿ ಅಕ್ಷತಾ ಪಾಂಡವಪುರಗೆ ಲಭಿಸಿದೆ.

ಒಟ್ಟಾವಾ ಚಿತ್ರೋತ್ಸವದಲ್ಲಿ ಪ್ರಶಸ್ತಿ ಸಿಕ್ಕ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿರುವ ಅಕ್ಷತಾ ''ಆಹಾ ಎಂತಹ ಖುಷಿ ಮತ್ತು ಹೆಮ್ಮೆ ವಿಷಯ ಅಲ್ವಾ.. ನಮ್ಮ "ಪಿಂಕಿ ಎಲ್ಲಿ?" ಕನ್ನಡ ಚಿತ್ರಕ್ಕೆ ಕೆನಾಡದಲ್ಲಿ ನಡೆಯುವ OIFFA ಅಂತಾರಾಷ್ಟ್ರೀಯ ಮಟ್ಟದಲ್ಲಿ 2 ಪ್ರಶಸ್ತಿ ಸಿಕ್ಕಿರೋದು! ಅತ್ಯುತ್ತಮ ಚಿತ್ರಕಥೆ ಪೃಥ್ವಿ ಕೋಣನೂರು ಮತ್ತು ನಟನೆಗಾಗಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿರುವುದು. ಮನತ್ಪೂರ್ವಕವಾಗಿ ಹರಸಿದ ಎಲ್ಲರಿಗೂ ಧನ್ಯವಾದಗಳು'' ಎಂದಿದ್ದಾರೆ.
ಇದಕ್ಕೂ ಮುಂಚೆ ನ್ಯೂಯಾರ್ಕ್‌ನ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿಯೂ 'ವೇರ್ ಈಸ್ ಪಿಂಕಿ' (ಪಿಂಕಿ ಎಲ್ಲಿ) ಚಿತ್ರಕ್ಕೆ ಎರಡು ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ಅಕ್ಷತಾಗೆ ಅವಾರ್ಡ್ ಲಭಿಸಿತ್ತು.

'ವೇರ್ ಈಸ್ ಪಿಂಕಿ' ಸಿನಿಮಾ ಕುರಿತು
'ವೇರ್ ಈಸ್ ಪಿಂಕಿ' ಚಿತ್ರವನ್ನು ಪೃಥ್ವಿ ಕೋಣನೂರು ನಿರ್ದೇಶಿಸಿದ್ದು ಅಕ್ಷತಾ ಪಾಂಡವಪುರ ಮತ್ತು ದೀಪಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಹಿಂದೆ ಪೃಥ್ವಿ ಕೋಣನೂರು ರೈಲ್ವೆ ಚಿಲ್ಡ್ರನ್ ಮತ್ತು ಅಲೆಗಳು ಎಂಬ ಸಿನಿಮಾ ಮಾಡಿದ್ದರು.
ಇದು ನೈಜ ಘಟನೆಯನ್ನು ಆಧರಿಸಿ ಮಾಡಿರುವ ಚಿತ್ರವಾಗಿದ್ದು, 8 ತಿಂಗಳ ಮಗುವೊಂದು ಕಳೆದು ಹೋದಾಗ ಆ ಮಗುವಿನ ಸುತ್ತ ಬರುವ ಪಾತ್ರಗಳ ತಲ್ಲಣವನ್ನು ಸಿನಿಮಾ ಮಾಡಲಾಗಿದೆ. ಇದಕ್ಕೂ ಮುಂಚೆ 'ಪಿಂಕಿ ಎಲ್ಲಿ' ಸಿನಿಮಾ ಭಾರತದ ಕೋಲ್ಕತಾ, ಮುಂಬೈ (ಮಾಮಿ), ಕೇರಳ, ಜೈಪುರ್, ಪನೋರಮ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿತ್ತು.


Click it and Unblock the Notifications











