'ಅಲೆಯಾಗಿ ಬಾ' ಮೂಲಕ ಭವಿಷ್ಯದ ಕನಸು ಹೊತ್ತು ಬಂದ ರಥ ಕಿರಣ್
'ಅಲೆಯಾಗಿ ಬಾ' ಎಂಬ ಸುಮಧುರ ಹಾಡೊಂದು ಸಖತ್ ವೈರಲ್ ಆಗುತ್ತಿದೆ. ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಆಡಿಯೋಸ್ ವತಿಯಿಂದ ಬಿಡುಗಡೆಗೊಂಡಿರುವ ಈ ಹಾಡನ್ನು ಮೂರೇ ದಿನಕ್ಕೆ ಎರಡು ಲಕ್ಷ ಜನ ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದಾರೆ.
ಕುಂದಾಪುರದ ಸುಂದರ ನಿಸರ್ಗದ ಮಧ್ಯೆ ಅಷ್ಟೇ ಚಿತ್ರೀಕರಣಗೊಂಡಿರುವ ಈ ಹಾಡು, ಪ್ರೇಮ ಅರಸಿ ಹೋಗುವ ಹುಡುಗನ ಖುಷಿಯನ್ನು ಕಟ್ಟಿಕೊಡುತ್ತಿದೆ. ಹಾಡಿನ ಅಂತ್ಯದಲ್ಲಿ ಸಿಹಿ ನೋವನ್ನೂ ಸವರುತ್ತಿದೆ.
ಈ ಸಿಂಗಲ್ ಆಲ್ಬಂ ನ ನಾಯಕ ರಥ ಕಿರಣ್. ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಯುವಕ ಸಿನಿಮಾ ನಟನಾಗುವ ಮಹತ್ ಆಸೆಯಿಂದ ಬೆಂಗಳೂರಿಗೆ ಬಂದಿದ್ದಾರೆ. ಮೊದಲ ಪ್ರಯತ್ನವಾಗಿ 'ಅಲೆಯಾಗಿ ಬಾ' ಹಾಡು ಮಾಡಿದ್ದು, ಮೊದಲ ಪ್ರಯತ್ನದಲ್ಲಿ ಹಲವರ ಗಮನ ಸೆಳೆದಿದ್ದಾರೆ.

ನಟನಾಗುವ ಇರಾದೆಯಿಂದ ಗಾಂಧಿನಗರಕ್ಕೆ ಬಂದ ವೈದ್ಯ
ಫಿಲ್ಮೀಬೀಟ್ ಕನ್ನಡದೊಂದಿಗೆ ಮಾತನಾಡಿದ ರಥ ಕಿರಣ್, ನಿರ್ದೇಶಕ ಸಿಂಪಲ್ ಸುನಿ ಅವರ ಒತ್ತಾಸೆಯೊಂದಿಗೆ ಹಾಡಿನ ಚಿತ್ರೀಕರಣಕ್ಕೆ ತೊಡಗಿದ್ದಾಗಿ ಹೇಳಿದರು. ನೀನಾಸಂ ನಲ್ಲಿ ನಟನಾ ತರಬೇತಿ ನೀಡುವ ಧನಂಜಯ್ ಅವರಿಂದ ಖಾಸಗಿಯಾಗಿ ಅಭಿನಯದ ಪಟ್ಟುಗಳನ್ನು ಕಲಿತಿರುವ ರಥ ಕಿರಣ್, ನಟನಾಗಿ ಇಲ್ಲಿಯೇ ನೆಲೆ ನಿಲ್ಲುವ ಅಚಲ ವಿಶ್ವಾಸದಲ್ಲಿದ್ದಾರೆ. ಈ ಹಿಂದೆ ಕಿರುಚಿತ್ರದಲ್ಲಿ ನಟಿಸಿರುವ ಅನುಭವ ಇದೆ ಅವರಿಗೆ.

ಸಿನಿಮಾ ಆಗಲಿದೆಯೇ 'ಅಲೆಯಾಗಿ ಬಾ'?
ಹಾಡು ಹಿಟ್ ಆಗಿರುವ ಬಗ್ಗೆ ತುಂಬು ಖುಷಿಯಲ್ಲಿರುವ ರಥ ಕಿರಣ್, 'ಹಾಡಿಗೆ ಅದ್ಭುತವಾದ ಜನಪ್ರತಿಕ್ರಿಯೆ ಬಂದಿದೆ. ಮೂರೇ ದಿನಕ್ಕೆ ಎರಡು ಲಕ್ಷ ಜನ ವೀಕ್ಷಿಸಿ, ಮೆಚ್ಚಿಕೊಂಡಿದ್ದಾರೆ. ಇದೇ ಥೀಮ್ ಅನ್ನು ಮುಂದುವರೆಸಿ ಸಿನಿಮಾ ಮಾಡುವ ಸಲಹೆ ನೀಡಿದ್ದಾರೆ. ಈ ಬಗ್ಗೆ ಇನ್ನೂ ಆಲೋಚಿಸಬೇಕಿದೆ' ಎಂದರು.

ಕುಂದಾಪುರದಲ್ಲಿ ಐದು ದಿನ ಚಿತ್ರೀಕರಣ
ಐದು ದಿನಗಳ ಕಾಲ ಕುಂದಾಪುರದ ಸುಂದರ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ಮಾಡಿದೆ ತಂಡ. ಮನುಶಂಕರ್ ಕ್ಯಾಮೆರಾದಲ್ಲಿ ಕಡಲು ಪ್ರೀತಿಯುಕ್ಕಿಸಿದರೆ, ಹಸಿರು ತಂಪೆರಚುತ್ತಿದೆ. ಹಾಡಿನ ಸಾಹಿತ್ಯ ನಿರ್ದೇಶಕ ಸಿಂಪಲ್ ಸುನಿಯವರದ್ದು, ಗಾಯಕರು ರಾಜೇಶ್ ಕೃಷ್ಣನ್ ಮತ್ತು ಆಶಾ ಭಟ್. ಸಿಂಪಲ್ ಆಗ್ ಒಂದು ಲೌವ್ ಸ್ಟೋರಿ ಸಿನಿಮಾದ ಸಂಗೀತ ನಿರ್ದೇಶಕ ಭರತ್ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಕತೆಯ ಶ್ರೇಯ ಸಹನಾ ಸುಧಾಕರ್ ಅವರದ್ದು
ಹಾಡಿನಲ್ಲಿನ ಸುಂದರ, ಸರಳ ಕತೆಯ ಶ್ರೇಯ ಸಲ್ಲಬೇಕಿರುವುದು ಡಾ.ಸಹನಾ ಸುಧಾಕರ್ ಅವರಿಗೆ. ಚಿತ್ರಗಾರ ಭರತ್ ಎಂಬುವರು ಹಾಡಿಗೆ ಸುಂದರವಾದ ಚಿತ್ರಗಳನ್ನು ಬರೆದು ಕೊಟ್ಟಿದ್ದಾರೆ. ತಮ್ಮ ಹಾಡನ್ನು ತಮ್ಮ ಆಡಿಯೋ ಸಂಸ್ಥೆಯಿಂದ ಬಿಡುಗಡೆ ಮಾಡಿದ ಪುನೀತ್ ಅವರಿಗೆ ತುಂಬು ಹೃದಯದಿಂದ ನೆನಪಿಸಿಕೊಂಡರು ರಥ ಕಿರಣ್. ಅಂದಹಾಗೆ, ಪಿಆರ್‌ಕೆ ಇಂದ ಬಿಡುಗಡೆ ಆಗಿರುವ ಮೊದಲ ಸಿಂಗಲ್ ಆಲ್ಬಂ ಇದು.


Click it and Unblock the Notifications











