ಆರ್.ಚಂದ್ರು ಕೈ ಹಿಡಿದ ಕಿಚ್ಚ-ಉಪ್ಪಿ-ಶಿವಣ್ಣ ; ಹಳಸಿದ ಸಂಬಂಧಕ್ಕೆ ಮುಲಾಮು ಹಚ್ಚಿದ್ಹೇಗೆ .?
'ಕಬ್ಜ'ದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಯಿತು. ಅಂದುಕೊಂಡಂತೆ ಗಲ್ಲಾಪೆಟ್ಟಿಗೆಯಲ್ಲಿ ಕಬ್ಜ ಕಂಪಿಸಲಿಲ್ಲ. ಬದಲಿಗೆ ಕೆ.ಜಿ.ಎಫ್ ಚಿತ್ರದ ಮೂಲಕ ಭಾರತದೆಲ್ಲೆಡೆ ಸಿಕ್ಕ ಜನಪ್ರಿಯತೆಯಿಂದ ಎದೆ ಉಬ್ಬಿಸಿದ್ದ ಕನ್ನಡ ಚಿತ್ರರಂಗದ ಅನೇಕರಿಗೆ ಭೂಕಂಪನವಾದ ಅನುಭವ ಆಯಿತು. ಇನ್ನೂ.. ಆಳಿಗೊಂದು ಕಲ್ಲು ಎಂಬಂತೆ ಆರ್.ಚಂದ್ರು ಅವರನ್ನ ಕಿಚಾಯಿಸಿ, ಕಾಲೆಳೆಯಲು ನಾ ಮುಂದು ತಾ ಮುಂದು ಎಂದು ಎಲ್ಲರೂ ಮುಗಿ ಬಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆರ್.ಚಂದ್ರು ಅವರನ್ನ ಟ್ರೋಲ್ ಮಾಡಿದರು.
ಆದರೂ ಆರ್.ಚಂದ್ರು ಕಂಗೆಡಲಿಲ್ಲ. ಇಟ್ಸ್ ಓಕೆ, ಸೋಲು..ಗೆಲುವು..ಏಳು ಬೀಳು ಇದ್ದಿದ್ದೇ ಎಂದು ಕಬ್ಜ ಚಿತ್ರದ ಮುಂದುವರೆದ ಭಾಗದ ಕಥೆಗೆ ಓಂಕಾರ ಬರೆಯುವ ಪ್ರಯತ್ನ ಪಟ್ಟರು. ಆದರೆ ಆಗ ಆರ್.ಚಂದ್ರು ಅಕ್ಕ ಪಕ್ಕದಲ್ಲಿ ಶಿವಣ್ಣ ಕೂಡ ಕಾಣಲಿಲ್ಲ. ಉಪೇಂದ್ರ ಕೂಡ ಕಾಣಲಿಲ್ಲ. ಸುದೀಪ್ ಕೂಡ ಇರಲಿಲ್ಲ. ಏಕಾಂಗಿಯಾಗಿ ಕಳೆದ ವರ್ಷ ಏಪ್ರಿಲ್ ನಲ್ಲಿ ಕಬ್ಜ 02 ಚಿತ್ರವನ್ನ ಘೋಷಿಸಿದ್ದರು. ಸಣ್ಣ ಪುಟ್ಟ ತಪ್ಪುಗಳನ್ನ ತಿದ್ದಿಕೊಂಡು ಕಬ್ಜ 2 ಮಾಡುತ್ತಿದ್ದೇನೆ ಎಂದು ಹೇಳಿದ್ದರು ಆರ್.ಚಂದ್ರು.

ಸುದೀಪ್ .. ಉಪೇಂದ್ರ .. ಶಿವಣ್ಣ ಈ ಮೂವರ ಅನುಪಸ್ಥಿತಿ ಅವತ್ತು ಅನೇಕ ಪ್ರಶ್ನೆಗಳನ್ನ ಹುಟ್ಟಿ ಹಾಕಿತ್ತು. ಶಿವಣ್ಣ, ಸುದೀಪ್ ಹಾಗೂ ಉಪೇಂದ್ರ ಜೊತೆ ಆರ್.ಚಂದ್ರುಗೆ ಇದ್ದ ಆತ್ಮೀಯ ಸಂಬಂಧದಲ್ಲಿಒಡಕು/ಬಿರುಕು ಕಾಣಿಸಿಕೊಂಡಿದೆ ಎಂಬ ಮಾತು ಕೇಳಿ ಬಂದಿತ್ತು. ಇದೆಲ್ಲದಕ್ಕೂ ಪುಷ್ಠಿ ನೀಡುವಂತೆ ಘೋಸ್ಟ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಶಿವಣ್ಣ ಕಬ್ಜ ಚಿತ್ರದ ವಿಚಾರದಲ್ಲಿ ತಮಗೆ ಇದ್ದ ಅಸಮಾಧಾನವನ್ನ ಬಹಿರಂಗವಾಗಿಯೇ ಹೊರ ಹಾಕಿದ್ದರು.
"ನಿಜ ಹೇಳಬೇಕೆಂದರೆ 'ಕಬ್ಜ' ಸಿನಿಮಾದ ಬಳಿಕ ನಮ್ಮ ಸಿನಿಮಾವನ್ನು ಹಿಂದಿಗೆ ತೆಗೆದುಕೊಂಡು ಹೋಗುವುದು ತುಸು ಕಷ್ಟವಾಗುತ್ತಿದೆ. ಚಂದ್ರು ಮೇಲೆ ದೂರು ಎಂದಲ್ಲ, ನನಗೆ ಅವರ ಬಗ್ಗೆ ಗೌರವ ಇದೆ. ಆದರೆ 'ಜೈಲರ್' ನಲ್ಲಿ ಅತಿಥಿ ಪಾತ್ರಗಳನ್ನು ಎಷ್ಟು ಬೇಕೋ ಹೇಗೆ ಬೇಕೋ ಹಾಗೆ ಬಳಸಿಕೊಂಡರು. ಬಹಳ ಜಾಣತನದಿಂದ ಅತಿಥಿ ಪಾತ್ರಗಳನ್ನು ಬಳಸಿಕೊಂಡರು. ಆದರೆ 'ಕಬ್ಜ'ನಲ್ಲಿ ಹಾಗಾಗಲಿಲ್ಲ. ಅತಿಥಿ ಪಾತ್ರಗಳನ್ನೇ ಹೈಲೆಟ್ ಮಾಡಿಬಿಟ್ಟರು. ಅದು ಸರಿಯಾದ ಕ್ರಮವಲ್ಲ" ಎಂದಿದ್ದರು ಶಿವಣ್ಣ.

ಇಷ್ಟೇ ಅಲ್ಲ "ಜನಗಳನ್ನು ಬಹಳ ಮಿಸ್ ಲೀಡ್ ಮಾಡಿದರು. ಸಿನಿಮಾವನ್ನು ಕೊಂಡು ಕೊಳ್ಳುವವರು ಸಹ ಮಿಸ್ ಲೀಡ್ ಆದರು. ಹಣ ತೆಗೆದುಕೊಳ್ಳುವಾಗಲು ಸಹ ಗೌರವಯುತವಾಗಿ ತೆಗೆದುಕೊಳ್ಳಬೇಕು. ಸ್ವಲ್ಪ ಕಡಿಮೆ ತೆಗೆದುಕೊಂಡರು ಪರವಾಗಿಲ್ಲ. ಪ್ರಾಮಾಣಿಕವಾಗಿ ತೆಗೆದುಕೊಳ್ಳಬೇಕು. ಚಂದ್ರು ಹೇಳಿದರು, ಕತೆ ಹೀಗಿದೆ, ಮುಂದಿನ ಭಾಗಕ್ಕೆ ಲೀಡ್ ಆಗುತ್ತದೆ ಎಂದು. ಉಪೇಂದ್ರ, ಸುದೀಪ್ ಸಹ ಇದ್ದಾರೆ ಚೆನ್ನಾಗಿರುತ್ತೆ ಎಂದು ನಾನು ನಟಿಸಿದೆ" ಎಂದಿದ್ದರು ಶಿವರಾಜ್ ಕುಮಾರ್
ಶಿವಣ್ಣ ಆಡಿದ್ದ ಈ ಮಾತಿಗೆ ಅನೇಕರು ನಾನಾ ಅರ್ಥಗಳನ್ನ ಕಲ್ಪಿಸಿದರು. ಮತ್ತೊಮ್ಮೆ ಆರ್.ಚಂದ್ರು ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇನ್ನೂ ಕಬ್ಜ ಬಿಡುಗಡೆಯಾದ ಮರು ದಿನದಿಂದನೇ ಉಪೇಂದ್ರ ಆ ಚಿತ್ರ ಹಾಗೂ ಪಾತ್ರದ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದ್ದರು. ಇವೆಲ್ಲ ಕಾರಣಗಳಿಂದ ಸಂಬಂಧದಲ್ಲಿ ಬಿರುಕು ಮೂಡಿರುವುದು ಖಚಿತವೆಂಬ ಅಭಿಪ್ರಾಯವನ್ನ ಅನೇಕರು ವ್ಯಕ್ತಪಡಿಸಿದ್ದರು.

ಆದರೆ.. ಆರ್.ಚಂದ್ರು ಈಗ ದಿಗ್ಗನೆ ಎಂದು ಬಂದಿದ್ದಾರೆ. ಅಷ್ಟೇ ಅಲ್ಲ ಕಾಲ್ ಎಳಿಯುವರಿಗೆ ಉತ್ತರವನ್ನ ಕೊಟ್ಟು, ಶಿವಣ್ಣ ಉಪೇಂದ್ರ ಹಾಗೂ ಸುದೀಪ್ ಅವರ ಜೊತೆಗಿನ ನನ್ನ ಸಂಬಂಧ ಮೊದಲಿನಂತೆಯೇ ಇದೆ ಎಂಬ ಸಿಗ್ನಲ್‌ನ ದೊಡ್ಡದಾಗಿಯೇ ಕೊಟ್ಟಿದ್ದಾರೆ.
ಹೌದು. ಆರ್,ಚಂದ್ರು ಸುಮ್ಮನೆ ಕೂರುವ ಆಸಾಮಿ ಅಲ್ಲ. ಸಿನಿಮಾ ಅನ್ನೋದು ಮನರಂಜನಾ ಮಾಧ್ಯಮ ನಿಜ. ಆದರೆ ಅದರ ಜೊತೆ ಲಾಭದಾಯದ ಉದ್ಯಮವೂ ಹೌದು. ಕ್ರಿಯೇಟಿವ್ ಆಗಿ ಏನಾದರೊಂದು ಮಾಡುತ್ತಲೆ ಅದರಿಂದ ಉತ್ತಮವಾದ ವ್ಯಾಪಾರ ವಹಿವಾಟವನ್ನ ಮಾಡಬಲ್ಲ ಚಾಣಾಕ್ಷ ನಿರ್ದೇಶಕ ಆರ್.ಚಂದ್ರು. ಇಂಥಹ ಆರ್.ಚಂದ್ರು ಈಗ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮದೇ ಆರ್,ಸಿ ನಿರ್ಮಾಣ ಸಂಸ್ಥೆಯನ್ನ ಹುಟ್ಟು ಹಾಕಿ, ಒಂದಲ್ಲ.. ಎರಡಲ್ಲ.. ಐದು ದೊಡ್ಡ ಚಿತ್ರಗಳನ್ನ ಘೋಷಿಸಿದ್ದಾರೆ. ವಿಶೇಷ ಅಂದರೆ ಆರ್.ಚಂದ್ರು ಅವರ ಈ ಪ್ರಯತ್ನಕ್ಕೆ ಶುಭ ಕೋರಲು ಮುಖ್ಯ ಅತಿಥಿಯಾಗಿ ಕಬ್ಜದ ಅರಕೇಶ್ವರ ಅಲಿಯಾಸ್ ಉಪೇಂದ್ರ ಬಂದಿದ್ದರು. ಆರ್.ಚಂದ್ರು ಅವರನ್ನ ಬಾಯ್ತುಂಬ ಹೊಗಳಿದರು.
ಇನ್ನೂ.. ಶಿವಣ್ಣ ದೂರದಿಂದನೇ ಆರ್.ಚಂದ್ರು ಅವರಿಗೆ ವಿಡಿಯೋ ಮೂಲಕ ಶುಭಾಶಯವನ್ನ ಕೋರಿದ್ದಾರೆ. ಮ್ಯಾಕ್ಸ್ ಚಿತ್ರದ ಚಿತ್ರೀಕರಣದಲ್ಲಿರುವ ಸುದೀಪ್ ಕೂಡ ಆರ್.ಚಂದ್ರುಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇಷ್ಟೇ ಅಲ್ಲ ಐದು ಚಿತ್ರಗಳ ಪೈಕಿ ಒಂದು ಚಿತ್ರಕ್ಕೆ ಬಣ್ಣವನ್ನೂ ಹಚ್ತಿದ್ದಾರೆ ಸುದೀಪ್.
ಆರ್.ಚಂದ್ರು ಕೈ ಹಿಡಿದಿದ್ಹೇಗೆ ಅಭಿನಯ ಚಕ್ರವರ್ತಿ..?
ಕಬ್ಜ ನಂತರ ಆರ್.ಚಂದ್ರು ವಿರುದ್ಧ ಬಹುತೇಕರು ತಿರುಗಿ ಬಿದ್ದ ಸಮಯದಲ್ಲಿ, ಆರ್.ಚಂದ್ರು ನೆರವಿಗೆ ಧಾವಿಸಿದ್ದು ಬೇರೆ ಯಾರು ಅಲ್ಲ ಬದಲಿಗೆ ಇದೇ ಸುದೀಪ್. ಕಬ್ಜ 02 ಚಿತ್ರಕ್ಕೆ ಅಲ್ಪ ವಿರಾಮ ಹಾಕಿ ಬಾಹುಬಲಿ..ಮಗಧೀರ..ಆರ್.ಆರ್.ಆರ್ ಚಿತ್ರದ ಕಥೆಗಾರ, ರಾಜಮೌಳಿಯ ಎಲ್ಲ ಚಿತ್ರಗಳ ಸ್ಕ್ರಿಪ್ಟ್ ರೈಟರ್ ಆದ ವಿಜಯೇಂದ್ರ ಪ್ರಸಾದ್ ಅವರ ಜೊತೆ ಆರ್.ಚಂದ್ರು ಕೈ ಜೋಡಿಸಿದಾಗ ಸುದೀಪ್ ತಮ್ಮ ಬೇರೆ ಚಿತ್ರಗಳನ್ನ ಮುಂದೂಡಿದರು. ಆರ್.ಚಂದ್ರು ಚಿತ್ರಕ್ಕೆ ಪ್ರಾಶಸ್ತ್ಯ ನೀಡಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲು ಸಮ್ಮತಿಸಿದರು. ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಚಿತ್ರವನ್ನ ಘೋಷಿಸಲು ಚಂದ್ರುಗೆ ಸಮ್ಮತಿಯನ್ನೂ ನೀಡಿದರು.
ಇನ್ನೂ.. ಆರ್.ಚಂದ್ರು ಅವರ ಹೊಸ ಕನಸಿನ ಯೋಜನೆಗೆ ಕೈ ಜೋಡಿಸಿರುವವರಲ್ಲಿ ಅಲಂಕಾರ್ ಪಾಂಡಿಯನ್ ಕೂಡ ಒಬ್ಬರು. ಈ ಅಲಂಕಾರ್ ಪಾಂಡಿಯನ್ ಬೇರೆ ಯಾರು ಅಲ್ಲ ಬದಲಿಗೆ ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಈ ಅರ್ಥದಲ್ಲಿ ಆರ್.ಚಂದ್ರು ಕನಸು ನನಸಾಗಿಸುವಲ್ಲಿ ಸುದೀಪ್ ಅವರ ಪಾತ್ರ ದೊಡ್ಡದು ಎಂದರೆ ಅದು ತಪ್ಪಾಗಲಿಕ್ಕಿಲ್ಲ
ಅಂದ್ಹಾಗೇ ಆರ್.ಚಂದ್ರು.. ವಿಜಯೇಂದ್ರ ಪ್ರಸಾದ್ ಹಾಗೂ ಸುದೀಪ್ ಮೂವರು ದಿಗ್ಗಜರು ಒಂದಾಗಿ ಮಾಡ್ತಿರುವ ಚಿತ್ರಕ್ಕೆ POK ಎಂಬ ಹೆಸರನ್ನಿಡಲಾಗಿದೆ. ಮಿಕ್ಕಂತೆ ಹೆಚ್ಚಿನ ಮಾಹಿತಿಯನ್ನ ಗೌಪ್ಯವಾಗಿ ಇಡಲಾಗಿದೆ. ಆರಂಭದಿಂದ್ಲೂ ಚಿತ್ರದ ಕುರಿತು ಹೆಚ್ಚಿನ ವಿಚಾರ ಬಿಟ್ಟು ಕೊಡದೇ ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾ ವಲಯದಲ್ಲಿಯೂ ಕುತೂಹಲ ಮೂಡಿಸುವುದು ಆರ್.ಚಂದ್ರು ಶೈಲಿ. ಇಂಥಾ ಚಂದ್ರು ಜೊತೆ ಕಿಚ್ಚ ಸುದೀಪ್ ಹಾಗೂ ವಿಜಯೇಂದ್ರ ಪ್ರಸಾದ್ ಕೂಡ ಸೇರಿದ್ದಾರೆ ಅನ್ನೋದು ಒಂದು ವಿಶೇಷವಾದರೆ, ಶಿವಣ್ಣ -ಉಪೇಂದ್ರ ಜೊತೆ ಇವತ್ತು ಕೂಡ ಆರ್.ಚಂದ್ರು ಅದೇ ಆತ್ಮೀಯವಾದ ಸಂಬಂಧವನ್ನ ಉಳಿಸಿಕೊಂಡಿದ್ದಾರೆ ಅನ್ನೋದು ಇನ್ನೊಂದು ವಿಶೇಷ. ಇದಕ್ಕೆ ನಿನ್ನೆ ನಡೆದ ಕಾರ್ಯಕ್ರಮ ಸಾಕ್ಷಿ. ಯಾರಿಗೆ ಗೊತ್ತು ಚಂದ್ರು ನಿರ್ಮಾಣದಲ್ಲಿ ಹೊರ ಬರಲಿರುವ ಕಬ್ಜ 2ದಲ್ಲಿ ಶಿವಣ್ಣ ಮತ್ತು ಉಪೇಂದ್ರ ಮತ್ತೆ ಬಣ್ಣ ಹಚ್ಚಿದರು ಹಚ್ಚಬಹುದು.


Click it and Unblock the Notifications











