ಪುನೀತ್ ಜೊತೆಗಿನ ಕೊನೆಯ ಸಂಭಾಷಣೆ ನೆನಪಿಸಿಕೊಂಡ ಅಲ್ಲು ಅರ್ಜುನ್
ಪುನೀತ್ ರಾಜ್‌ಕುಮಾರ್ ನಿಧನರಾಗಿ ಮೂರು ತಿಂಗಳ ಮೇಲಾಯ್ತು. ಅವರ ಸಮಾಧಿಗೆ ಭೇಟಿ ನೀಡಿ ಕೈಮುಗಿಯುವವರ ಸಂಖ್ಯೆ ಇನ್ನೂ ಕಡಿಮೆ ಆಗಿಲ್ಲ. ಸೆಲೆಬ್ರಿಟಿಗಳು ಸಹ ಒಬ್ಬರಾದ ಮೇಲೆ ಒಬ್ಬರು ಅಪ್ಪು ನಿವಾಸಕ್ಕೆ, ಸಮಾಧಿಗೆ ಭೇಟಿ ನೀಡುತ್ತಲೇ ಇದ್ದಾರೆ. ಇಂದು ನಟ ಅಲ್ಲು ಅರ್ಜುನ್ ಆಗಮಿಸಿದ್ದರು.
ಪುನೀತ್ ಕಾಲವಾದಾಗ ಅಲ್ಲು ಅರ್ಜುನ್ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಆ ನಂತರ ಸಾಂತ್ವಾನ ಹೇಳಲು ಸಹ ಬಂದಿರಲಿಲ್ಲ. ಆದರೆ ಅಪ್ಪು ಅಗಲಿಕೆಯ ಕೆಲ ದಿನಗಳ ಬಳಿಕ ತಮ್ಮ 'ಪುಷ್ಪ' ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು. ಆಗ ಮಾತನಾಡಿದ್ದ ಅಲ್ಲು ಅರ್ಜುನ್, ''ಇಂದು ನಾನು ಅಪ್ಪು ನಿವಾಸಕ್ಕೆ ಹೋಗುವುದಿಲ್ಲ. ಈಗ ನಾನು ಹೋದರೆ ಪ್ರಚಾರಕ್ಕಾಗಿ ಹೋದೆ ಎಂದಾಗುತ್ತದೆ. ಸಿನಿಮಾ ಬಿಡುಗಡೆ ಬಳಿಕ ಬರುತ್ತೇನೆ'' ಎಂದಿದ್ದರು. ಮಾತು ತಪ್ಪದೆ ಇಂದು ಕೇವಲ ಅಪ್ಪುಗಾಗಿ ಮಾತ್ರವೇ ಬೆಂಗಳೂರಿಗೆ ಆಗಮಿಸಿದರು.
Recommended Video
ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ಅಲ್ಲು ಅರ್ಜುನ್ ಮೊದಲಿಗೆ ಶಿವರಾಜ್ ಕುಮಾರ್ ನಿವಾಸಕ್ಕೆ ತೆರಳಿ ಅವರೊಟ್ಟಿಗೆ ಮಾತುಕತೆ ನಡೆಸಿದರು. ಶಕ್ತಿಧಾಮದ ಮಕ್ಕಳೊಟ್ಟಿಗೆ ನಂದಿಗೆ ಹೋಗಿದ್ದ ಶಿವಣ್ಣ ಹಾಗೂ ಗೀತಕ್ಕ ಅಲ್ಲು ಅರ್ಜುನ್ ಬಂದ ವಿಷಯ ತಿಳಿದು ಬೆಂಗಳೂರಿಗೆ ಬೇಗನೆ ಮರಳಿದರು.

ಅಪ್ಪು ಚಿತ್ರಕ್ಕೆ ನಮಿಸಿದ ಅಲ್ಲು ಅರ್ಜುನ್
ಶಿವಣ್ಣನ ಮನೆಯಿಂದ ನೇರವಾಗಿ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ನಟ ಅಲ್ಲು ಅರ್ಜುನ್ ತೆರಳಿದರು. ಅಲ್ಲಿ ಪುನೀತ್ ರಾಜ್‌ಕುಮಾರ್ ಅವರ ಚಿತ್ರದ ಮುಂದೆ ಹೂಗುಚ್ಛವನ್ನು ಇರಿಸಿ ಕೈಮುಗಿದರು. ಪುನೀತ್ ರಾಜ್‌ಕುಮಾರ್ ಚಿತ್ರವನ್ನೊಮ್ಮೆ ಸೌಮ್ಯವಾಗಿ ತಡವಿ ಭಾವುಕರಾದರು. ಬಳಿಕ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಮಾತನಾಡಿ ಸಾಂತ್ವನ ಹೇಳಿದರು.

ಸಮಾಧಿಗೆ ಕೈ ಮುಗಿದ ನಟ ಅಲ್ಲು ಅರ್ಜುನ್
ಬಳಿಕ ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿದರು ನಟ ಅಲ್ಲು ಅರ್ಜುನ್. ಅಲ್ಲಿ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಹೂವು ಅರ್ಪಿಸಿ ಕೈ ಮುಗಿದು ಕೆಲ ಕಾಲ ನಿಂತರು. ಬಳಿಕ ಅಲ್ಲಿಯೇ ಪಕ್ಕದಲ್ಲಿದ್ದ ನಟ ರಾಜ್‌ಕುಮಾರ್ ಸಮಾಧಿ ಬಳಿ ತೆರಳಿ ಕೈಮುಗಿದು ಗೌರವ ಅರ್ಪಿಸಿದರು. ಬಳಿಕ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿಗೂ ಗೌರವ ಸಲ್ಲಿಸಿದರು. ಬಳಿಕ ಅಲ್ಲಿಯೇ ಇರುವ ಅಂಬರೀಶ್ ಸಮಾಧಿಗೂ ಅಲ್ಲು ಅರ್ಜುನ್ ನಮನ ಸಲ್ಲಿಸಿದರು.

'ಅಲಾ ವೈಕುಂಟಪುರಂಲೋ' ಸಿನಿಮಾ ಬಗ್ಗೆ ಕಡೆಯ ಬಾರಿ ಮಾತು
ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅಲ್ಲು ಅರ್ಜುನ್, ''ನನ್ನ ಹಾಗೂ ಪುನೀತ್ ರಾಜ್‌ಕುಮಾರ್ ನಡುವೆ ಮೊದಲಿನಿಂದಲೂ ಬಹಳ ಒಳ್ಳೆಯ ಬಾಂಧವ್ಯ ಇತ್ತು. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ಹೈದರಾಬಾದ್‌ಗೆ ಬಂದಾಗ ನನಗೆ ತಪ್ಪದೆ ಸಿಗುತ್ತಿದ್ದರು. 'ಅಲಾ ವೈಕುಂಟಪುರಂಲೋ' ಸಿನಿಮಾ ಬಿಡುಗಡೆ ಆಗಿದ್ದ ಸಂದರ್ಭದಲ್ಲಿ ನನಗೆ ಕರೆ ಮಾಡಿದ್ದರು. 'ಬುಟ್ಟ ಬೊಮ್ಮ' ಹಾಡು ಚೆನ್ನಾಗಿದೆಯೆಂದು ಹೇಳಿದ್ದರು. ನಾವು ಹತ್ತಿರದಲ್ಲೇ ಸಿಗೋಣ ಎಂದುಕೊಂಡೆವು. ಆದರೆ ಕೊರೊನಾ ಕಾರಣದಿಂದ ಭೇಟಿ ಆಗಲು ಸಾಧ್ಯವಾಗಲಿಲ್ಲ. ಅವರ ನಿಧನ ತೀವ್ರ ನೋವು ತಂದಿದೆ'' ಎಂದು ಅಲ್ಲು ಅರ್ಜುನ್ ನೆನಪು ಮಾಡಿಕೊಂಡರು.

ಪುನೀತ್ ಫೈಟ್‌ಗಳೆಂದರೆ ಅಲ್ಲು ಅರ್ಜುನ್‌ಗೆ ಇಷ್ಟ
ಅಲ್ಲು ಅರ್ಜುನ್‌ಗೆ ಪುನೀತ್ ರಾಜ್‌ಕುಮಾರ್ ಫೈಟ್ಸ್‌ಗಳೆಂದರೆ ಬಹಳ ಇಷ್ಟವಾಗುತ್ತಿತ್ತು. ತಮ್ಮ ಮದುವೆ ಕಾರ್ಡ್ ಕೊಡಲು ಅಪ್ಪು ಮನೆಗೆ ಆಗಮಿಸಿದ್ದ ವೇಳೆ ಈ ವಿಷಯವನ್ನು ಮಾಧ್ಯಮಗಳ ಬಳಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಫೈಟ್ ಮಾಸ್ಟರ್ ರವಿವರ್ಮಾ ಬಳಿಯೂ ಸಹ ಅಲ್ಲು ಅರ್ಜುನ್ ಈ ವಿಷಯವನ್ನು ಹಂಚಿಕೊಂಡಿದ್ದರಂತೆ. ಅಲ್ಲು ಅರ್ಜುನ್ ಮದುವೆಯಲ್ಲಿ ಪುನೀತ್ ರಾಜ್‌ಕುಮಾರ್ ಪಾಲ್ಗೊಂಡಿದ್ದರು.


Click it and Unblock the Notifications











