ಕೊಟ್ಟ ಮಾತಿನಂತೆ ಪುನೀತ್‌ಗಾಗಿ ಬೆಂಗಳೂರಿಗೆ ಬಂದ ಅಲ್ಲು ಅರ್ಜುನ್
'ಪುಷ್ಪ' ಸಿನಿಮಾ ಮೂಲಕ ಹೊಸ ಪ್ಯಾನ್ ಇಂಡಿಯಾ ಸೆನ್ಸೇಷನ್ ಆಗಿರುವ ನಟ ಅಲ್ಲು ಅರ್ಜುನ್ ತಮ್ಮ ಅಗಲಿದ ಮಿತ್ರ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಲೆಂದು ಆಗಮಿಸಿದ್ದಾರೆ. ಅಲ್ಲು ಅರ್ಜುನ್ ಆಗಮಿಸುವ ಸುದ್ದಿ ತಿಳಿದು ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಮನೆಯ ಮುಂದೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ.
ಮೊದಲಿಗೆ ಶಿವರಾಜ್ ಕುಮಾರ್ ನಿವಾಸಕ್ಕೆ ತೆರಳಿರುವ ಅಲ್ಲು ಅರ್ಜುನ್ ಅಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲಿಯೇ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರನ್ನೂ ಸಹ ಅಲ್ಲು ಅರ್ಜುನ್ ಭೇಟಿ ಮಾಡಿದ್ದಾರೆ.
ಅಲ್ಲಿಂದ ಪುನೀತ್ ರಾಜ್‌ಕುಮಾರ್ ಸಮಾಧಿ ಸ್ಥಳಕ್ಕೆ ಶಿವರಾಜ್ ಕುಮಾರ್ ಅವರೊಟ್ಟಿಗೆ ತೆರಳಲಿರುವ ನಟ ಅಲ್ಲು ಅರ್ಜುನ್ ಬಳಿಕ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸಾಂತ್ವನ ಹೇಳಲಿದ್ದಾರೆ.

ಪುನೀತ್‌ಗಾಗಿ ಬೆಂಗಳೂರಿಗೆ ಬಂದ 'ಪುಷ್ಪ'
ಪುನೀತ್ ಅಗಲಿಕೆ ಬಳಿಕ 'ಪುಷ್ಪ' ಸಿನಿಮಾದ ಪ್ರಚಾರಕ್ಕಾಗಿ ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದಿದ್ದರು. ಆದರೆ ಅಂದು ಅವರು ಪುನೀತ್ ನಿವಾಸಕ್ಕೆ ಭೇಟಿ ನೀಡಲಿಲ್ಲ. ಸಿನಿಮಾ ಪ್ರಚಾರಕ್ಕೆ ಬಂದು ಅಪ್ಪು ಮನೆಗೆ ಭೇಟಿ ನೀಡಿದನೆಂದೋ, ಅಥವಾ ಪ್ರಚಾರದ ಕಾರಣಕ್ಕೆ ಅಪ್ಪು ಮನೆಗೆ ಹೋದನೆಂಬ ಕೆಟ್ಟ ಹೆಸರು ನನಗೆ ಬೇಡ, ಸಿನಿಮಾ ಬಿಡುಗಡೆ ಆದ ಬಳಿಕ ನಾನು ಪುನೀತ್ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದರು ಅಲ್ಲು ಅರ್ಜುನ್, ಅಂತೆಯೇ ಈಗ ಪುನೀತ್‌ಗಾಗಿ ಮಾತ್ರವೇ ಬೆಂಗಳೂರಿಗೆ ಬಂದಿದ್ದಾರೆ ಅಲ್ಲು ಅರ್ಜುನ್.

ಹೈದರಾಬಾದ್‌ನಲ್ಲಿ ಅಪ್ಪು ಬಗ್ಗೆ ಮಾತನಾಡಿದ್ದ ಅಲ್ಲು ಅರ್ಜುನ್
ಪುನೀತ್ ನಿಧನದ ಬಳಿಕ ನಟ ವಿಜಯ್ ದೇವರಕೊಂಡ ಸಹೋದರನ ತೆಲುಗು ಸಿನಿಮಾ 'ಪುಷ್ಪಕ ವಿಮಾನಂ' ಪ್ರೀ ರೀಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಲ್ಲು ಅರ್ಜುನ್, ಪುನೀತ್ ರಾಜ್‌ಕುಮಾರ್ ಅವರು ನನಗೆ ಬಹಳ ವರ್ಷಗಳಿಂದಲೂ ಪರಿಚಿತರು. ನಮ್ಮ ಮನೆಗೆ ಹಲವು ಬಾರಿ ಬಂದಿದ್ದಾರೆ. ಇಬ್ಬರೂ ಒಟ್ಟಿಗೆ ಊಟ ಮಾಡಿದ್ದೇವೆ. ನಾನು ಸಹ ಬೆಂಗಳೂರಿಗೆ ಹೋದಾಗೆಲ್ಲ ಅವರನ್ನು ಭೇಟಿ ಮಾಡುತ್ತಿದ್ದೆ. ಇಬ್ಬರ ನಡುವೆ ಒಂದು ಪರಸ್ಪರ ಗೌರವ-ಆದರ ಇತ್ತು. ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಪರಸ್ಪರ ಭೇಟಿಯಾಗಿದ್ದೆವು. ಡ್ಯಾನ್ಸ್ ಕಾರ್ಯಕ್ರಮವೊಂದಕ್ಕೆ ಒಟ್ಟಿಗೆ ಜಡ್ಜ್ ಆಗಿ ಭಾಗವಹಿಸಿದ್ದೆವು ಯಾವಾಗ ಸಿಕ್ಕರೂ ಪ್ರೀತಿಯಿಂದ ಮಾತನಾಡುತ್ತಿದ್ದರು'' ಎಂದಿದ್ದರು.

ಸುದ್ದಿ ಕೇಳಿದಾಗ ಆಘಾತವಾಗಿತ್ತು: ಅಲ್ಲು ಅರ್ಜುನ್
ಮುಂದುವರೆದು, ''ಬಹಳ ಆತ್ಮೀಯರಾಗಿದ್ದ ಪುನೀತ್ ಯಾವಾಗಲೇ ಸಿಕ್ಕಾಗಲು ಮನೆಗೆ ಆಹ್ವಾನಿಸುತ್ತಿದ್ದರು. ಹೀಗೆ ಪ್ರೀತಿಯಿಂದ ಇರಬೇಕಾದರೆ ಹಠಾತ್ತನೆ ಇಂದು ಅವರಿಲ್ಲ. ಸುದ್ದಿ ಮೊದಲ ಬಾರಿಗೆ ಕೇಳಿದಾಗ ನನಗೆ ಆಘಾತ ಎನಿಸಿತು. ಸುದ್ದಿ ಕೇಳಿದಾಗ ಉಂಟಾಗಿದ್ದ ಆಘಾತ ಸಮಯ ಕಳೆಯುತ್ತಾ ಕಳೆಯುತ್ತಾ ಹೆಚ್ಚಾಗುತ್ತಾ ಸಾಗಿತು. ಜೀವನ ಎಷ್ಟು ಅನಿರೀಕ್ಷಿತ ಎನ್ನಿಸಲು ಆರಂಭವಾಯ್ತು. ಒಂದು ಚಿಟಿಕೆ ಹೊಡೆಯುವಷ್ಟರಲ್ಲಿ ಜೀವನಗಳು ಪಲ್ಲಟವಾಗಿ ಹೋಗುತ್ತವೆ'' ಎಂದಿದ್ದರು.

ಚಿರಂಜೀವಿ ಕುಟುಂಬದೊಂದಿಗೆ ಆತ್ಮೀಯತೆ
ಚಿರಂಜೀವಿ ಕುಟುಂಬ ಹಾಗೂ ರಾಜ್‌ಕುಮಾರ್ ಕುಟುಂಬದ ಮಧ್ಯೆ ಬಹಳ ಆತ್ಮೀಯತೆ ಇತ್ತು. ಎರಡೂ ಕುಟುಂಬದ ಯಾವುದೇ ಕಾರ್ಯಕ್ರಮವಾದರೂ ಎರಡೂ ಕುಟುಂಬಗಳು ಪಾಲ್ಗೊಳ್ಳುವುದು ಸಾಮಾನ್ಯ. ಅಲ್ಲು ಅರ್ಜುನ್ ವಿವಾಹದಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರು. ಅಲ್ಲು ಅರ್ಜುನ್ ಖುದ್ದಾಗಿ ಬೆಂಗಳೂರಿಗೆ ಆಗಮಿಸಿ ಇಬ್ಬರೂ ನಟರನ್ನು ಆಗ ಮದುವೆಗೆ ಕರೆದಿದ್ದರು.


Click it and Unblock the Notifications











