ನಟ ಅಲ್ಲು ಅರ್ಜುನ್ ರೀತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅರೆಸ್ಟ್?
ಚೆನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಘಟನೆಗೆ ಕಾರಣ ಏನು ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ದಿಢೀರ್ ಕಾರ್ಯಕ್ರಮ ಆಯೋಜಿಸಿದ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. ವಿರಾಟ್ ಕೊಹ್ಲಿ ವಿರುದ್ಧ ದೂರು ಸಹ ದಾಖಲಾಗಿದೆ. ಇದೆಲ್ಲದರ ನಡುವೆ ಹೈದರಾಬಾದ್ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಘಟನೆ ನೆನಪಾಗುತ್ತಿದೆ.
ಸಾಕಷ್ಟು ಜನ ಎರಡೂ ದುರಂತಗಳನ್ನು ಹೋಲಿಸಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 'ಪುಷ್ಪ'-2 ಬಿಡುಗಡೆ ಸಮಯದಲ್ಲಿ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ವೇಳೆ ಒಬ್ಬ ಮಹಿಳೆ ಮೃತಪಟ್ಟಿದ್ದರು. ಆಕೆಯ ಮಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿತ್ತು. ಘಟನೆ ಸಂಬಂಧ ನಟ ಅಲ್ಲು ಅರ್ಜುನ್ ಬಂಧನವಾಗಿತ್ತು. ವಿಚಾರಣಾಧೀನ ಕೈದಿಯಾಗಿ ಒಂದು ರಾತ್ರಿ ಕಾರಾಗೃಹದಲ್ಲಿ ಕಳೆದಿದ್ದರು.

ಜೂನ್ 3ರಂದು ಅಹಮದಾಬಾದ್ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ಎದುರು ಜಯಭೇರಿ ಬಾರಿಸಿತ್ತು. 18 ವರ್ಷಗಳ ಐಪಿಲ್ ಕಪ್ ಕನಸು ನನಸು ಮಾಡಿಕೊಂಡಿತ್ತು. ಇದು ಸಹಜವಾಗಿಯೇ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು. ಅಂದು ರಾತ್ರಿ ಪಂದ್ಯ ಗೆಲ್ಲುತ್ತಿದ್ದಂತೆ ದೇಶದ ಹಲವು ಭಾಗಗಳಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದರು. ಬೆಂಗಳೂರಿನಲ್ಲಿ ಕೂಡ ವಿಜಯೋತ್ಸವ ರಂಗೇರಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಲು ಮುಂದಾಗಿತ್ತು. ಮತ್ತೊಂದು ಕಡೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂಡ ಸಂಭ್ರಮಾಚರಣೆಗೆ ದಿಢೀರ್ ತಯಾರಿ ನಡೆದಿತ್ತು.
ಸರಿಯಾದ ವ್ಯವಸ್ಥೆ ಇಲ್ಲದೇ ಯಾವ ಸಂಖ್ಯೆಯಲ್ಲಿ ಅಭಿಮಾನಿಗಳು ಬರಬಹುದು ಎನ್ನುವ ಅಂದಾಜು ಇಲ್ಲದೇ ಎಲ್ಲಾ ಗೊಂದಲಮಯವಾಗಿತ್ತು. ಅತ್ತ ವಿಧಾನಸೌಧದ ಮುಂಭಾಗದಲ್ಲಿ ಸನ್ಮಾನ ಸಮಾರಂಭ ನಡೆಯುವ ಮುನ್ನ ಇತ್ತ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆಗೆ ಆಗಮಿಸಿದ್ದರು. ಅದಾಗಲೇ ಒಂದಷ್ಟು ಜನ ಕ್ರೀಡಾಂಗಣದ ಒಳಗಿದ್ದರು. ಮತ್ತಷ್ಟು ಜನ ಹೊರಗಡೆ ಕಾಯುತ್ತಿದ್ದರು. ಒಮ್ಮೆಲೆ ಕ್ರೀಡಾಂಗಣದ 3 ಗೇಟ್ ತೆಗೆಯುತ್ತಿದ್ದಂತೆ ಅಭಿಮಾನಿಗಳು ಒಳಗೆ ನುಗ್ಗಲು ಯತ್ನಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.
ಕೆಳಗೆ ಬಿದ್ದವರನ್ನು ತುಳಿದಾಡಿ ಜನರ ಪ್ರಾಣ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಕೆಳಗೆ ಬಿದ್ದವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಬ್ಬರು ಉಸಿರುಗಟ್ಟಿ ಹೃದಯಾಘಾತದಿಂದ ಜೀವ ಬಿಟ್ಟಿದ್ದಾರೆ. ಆಕ್ಸಿಜನ್ ಕೊರತೆಯಿಂದ 9 ಜನ ಮೃತಪಟ್ಟಿದ್ದಾರೆ. ಈ ದುರಂತ ಬಳಿಕ ಕ್ರಿಕೆಟಿಗ ವಿರಾಟ್ ಕೊಹ್ಲಿ ಆರ್‌ಸಿಬಿ ಹೇಳಿಕೆಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಒಂದು ಸಾಲಿನಲ್ಲಿ ಸಂತಾಪ ಸೂಚಿಸಿ ಸುಮ್ಮನಾಗಿದ್ದಾರೆ. ಕೆಲವರು ಈ ಬಗ್ಗೆ ಕೂಡ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹೈದರಾಬಾದ್ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಘಟನೆಗೆ ನಟ ಅಲ್ಲು ಅರ್ಜುನ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಬಂದಿದ್ದು ಅಭಿಮಾನಿಗಳ ಕಡೆ ಕೈ ಬೀಸಿದ್ದೇ ಕಾಲ್ತುಳಿತ ದುರಂತಕ್ಕೆ ಕಾರಣ ಎಂದು ತೆಲಂಗಾಣ ಸಿಎಂ ಸಹ ಹೇಳಿದ್ದರು. ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಕೊಹ್ಲಿ ನೇರವಾಗಿ ಕಾರಣ ಅಲ್ಲ. ಆದರೂ ಅಂದು ಅಲ್ಲು ಅರ್ಜುನ್ ಅವರನ್ನು ಬಂಧಿಸಿದಂತೆ ಕೊಹ್ಲಿ ಅವರನ್ನು ಯಾಕೆ ಬಂಧಿಸಬಾರದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. #ArrestKohli ಎಂಬ ಹ್ಯಾಷ್‌ಟ್ಯಾಗ್ ವೈರಲ್ ಮಾಡುತ್ತಿದ್ದಾರೆ. ಕೊಹ್ಲಿ ಈಗಾಗಲೇ ಲಂಡನ್‌ಗೆ ತೆರಳಿದ್ದಾರೆ ಎನ್ನುವ ಸುಳ್ಳು ವದಂತಿ ಕೂಡ ಹರಿದಾಡುತ್ತಿದೆ. ವಿದೇಶಕ್ಕೆ ತೆರಳಬೇಕು ಎನ್ನುವ ಕಾರಣಕ್ಕೆ ದಿಢೀರನೆ ಈ ಸಂಭ್ರಮಾಚರಣೆ ನಡೆಸಲು ಕೊಹ್ಲಿ ಕಾರಣ ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ. ಬೇಕಂತಲೇ ಕೆಲವರು ಇಂತಹ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆರ್‌ಸಿಬಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಾಲ್ತುಳಿತ ಪ್ರಕರಣದ ಸಂಬಂಧ ಈಗಾಗಲೇ RCB, KSCA, DNA ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ. ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ಎಂಬುವವರು ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನೂಕುನುಗ್ಗಲು ಉಂಟಾಗಲು ಕೊಹ್ಲಿ ಕಾರಣ, ಅಲ್ಲದೇ ಘಟನೆ ಬಳಿಕ ಮೃತರ ಕುಟುಂಬದವರನ್ನು ಕೊಹ್ಲಿ ಭೇಟಿ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


Click it and Unblock the Notifications











