ಉಪ್ಪಿ 'ಎ' ಜೊತೆಗೆ ಸಾಹಸಸಿಂಹನ ಸಿಲ್ವರ್ ಜ್ಯುಬಿಲಿ ಹಿಟ್ ಸಿನಿಮಾ ಈ ವಾರ ರೀ ರಿಲೀಸ್
ಸ್ಯಾಂಡಲ್‌ವುಡ್‌ನಲ್ಲಿ ಹಳೇ ಸೂಪರ್ ಹಿಟ್ ಸಿನಿಮಾಗಳನ್ನು ಹೊರ ರೂಪದಲ್ಲಿ ರೀ-ರಿಲೀಸ್ ಮಾಡುವ ಟ್ರೆಂಡ್ ಶುರುವಾಗಿದೆ. ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಸಿನಿಮಾ ಮತ್ತೆ ತೆರೆಗೆ ಬಂದು ಹಿಟ್ ಆಗಿತ್ತು. ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇತ್ತೀಚೆಗೆ ಅಪ್ಪು ನಟನೆಯ ಮತ್ತೆರಡು ಸಿನಿಮಾಗಳು ರಿಲೀಸ್ ಆಗಿವೆ.
'ಅಂಜನಿಪುತ್ರ' ಹಾಗೂ 'ಪವರ್' ಸಿನಿಮಾಗಳು ಒಂದೇ ದಿನ ಮರುಬಿಡುಗಡೆ ಆಗಿದ್ದು ವಿಶೇಷ. ಮುಂದಿನ ವಾರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಎ' ಸಿನಿಮಾ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗಾಗಲೇ ಟ್ರೈಲರ್ ಕೂಡ ರಿಲೀಸ್ ಆಗಿದ್ದು ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಐಪಿಎಲ್ ಭರಾಟೆ ಜೋರಾಗಿ ಇರುವುದರಿಂದ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿಲ್ಲ. ಹಾಗಾಗಿ ಹಳೇ ಸಿನಿಮಾಗಳನ್ನು ಪ್ರೇಕ್ಷಕರ ಮುಂದಿಡುವ ಪ್ರಯತ್ನ ನಡೀತಿದೆ.

ಉಪೇಂದ್ರ 'ಎ' ಜೊತೆಗೆ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ಕೃಷ್ಣಾ ನೀ ಬೇಗನೆ ಬಾರೋ' ಸಿನಿಮಾ ಬಿಡುಗಡೆ ಆಗಲಿದೆ. ಕಳೆದ 3 ವರ್ಷಗಳಿಂದ ಈ ಚಿತ್ರವನ್ನು 7.1 ಡಿಜಿಟಲ್ ಸೌಂಡ್ & ಡಿಟಿಎಸ್ ಡಿಜಿಟಲ್ ಕಲರ್‌ನಲ್ಲಿ ರೀ- ರಿಲೀಸ್ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇತ್ತು. ಈ ಬಾರಿ ಅದಕ್ಕೆ ಕಾಲ ಕೂಡಿ ಬಂದಿದೆ. ಅನುಪಮಾ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಭಾರ್ಗವ ನಿರ್ದೇಶನದ 'ಕೃಷ್ಣಾ ನೀ ಬೇಗನೆ ಬಾರೋ' ಸಿನಿಮಾ 1986ರಲ್ಲಿ ತೆರೆಗೆ ಬಂದಿತ್ತು. ಭವ್ಯ, ಕಿಮ್, ಮುಖ್ಯಮಂತ್ರಿ ಚಂದ್ರು, ರಾಜಾನಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. 'ಸೌತೆನ್' ಎನ್ನುವ ಹಿಂದಿ ಚಿತ್ರದಿಂದ ಪ್ರೇರಣೆಗೊಂಡು ಈ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ಮಾಡಲಾಗಿತ್ತು. ಬಪ್ಪಿ ಲಹರಿ ಸಂಗೀತ ಚಿತ್ರಕ್ಕೆ ಹೈಲೆಟ್ ಆಗಿತ್ತು.
'ಕೃಷ್ಣಾ ನೀ ಬೇಗನೆ ಬಾರೋ' ಸಿನಿಮಾ ರೀ ರಿಲೀಸ್ ಬಗ್ಗೆ ನಿರ್ದೇಶಕ ಭಾರ್ಗವ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ಸಿನಿಮಾ ಸಿಲ್ವರ್ ಜ್ಯುಬಿಲಿ ಹಿಟ್ ಆಗಿತ್ತು. ಈ ಸಿನಿಮಾ ಹೆಚ್ಚು ಕಮ್ಮಿ ಜೊತೆ ಜೊತೆಗೆ ನಾನು ನಿರ್ದೇಶಿಸಿದ 'ಮನೆಯೇ ಮಂತ್ರಾಲಯ' ಸಿನಿಮಾ ಕೂಡ ಸಿಲ್ವರ್ ಜ್ಯುಬಿಲಿ ಆಚರಿಸಿತ್ತು. ಎರಡೂ ಸೇರಿಸಿ ಒಂದೇ ವೇದಿಕೆಯಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಲಾಗಿತ್ತು"
"ಮೈಸೂರಿನಲ್ಲಿ ನಡೆದ ಸಿಲ್ವರ್ ಜ್ಯುಬಿಲಿ ಕಾರ್ಯಕ್ರಮದಲ್ಲಿ ರಜನಿಕಾಂತ್, ಅಣ್ಣಾವ್ರು, ಎಸ್. ಎಂ ಕೃಷ್ಣ ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿತ್ತು. ಇದೊಂದು ಮ್ಯೂಸಿಕಲ್ ಹಿಟ್ ಸಿನಿಮಾ. ಬಪ್ಪಿ ಲಹರಿ ಸಂಗೀತ ಮಾಡಿದರೂ ರಂಗರಾವ್ ಅದನ್ನು ತಿದ್ದಿ ತೀಡಿ ಹೊಸ ಸ್ಪರ್ಶ ಕೊಟ್ಟಿದ್ದರು. ತೆಲುಗಿಗೆ ಸಿನಿಮಾ ರೀಮೆಕ್ ಆಗಿದ್ದಾಗ 'ಅಲಾರೆ ಅಲಾರೆ' ಟ್ರ್ಯಾಕ್ ಅವರು ತೆಗೆದುಕೊಂಡಿದ್ದರು. ಕನ್ನಡದಲ್ಲಿ ಆಲ್ಬಮ್ ಆ ಮಟ್ಟಿಗೆ ಸದ್ದು ಮಾಡಿತ್ತು" ಎಂದು ನಿರ್ದೇಶಕರು ವಿವರಿಸಿದ್ದಾರೆ.
"ವಿಷ್ಣು, ಭವ್ಯಾ ಜೊತೆಗೆ ಮುಂಬೈ ನಟಿ ಕಿಮ್ ಚಿತ್ರದಲ್ಲಿ ನಟಿಸಿದ್ದರು. ಆಕೆಗೆ ಕನ್ನಡ ಬರುತ್ತಿರಲಿಲ್ಲ. ಹಾಗಾಗಿ ಮೂರ್ನಾಲ್ಕು ದಿನಗಳ ಬಳಿಕ ಆಕೆಯನ್ನು ಬದಲಿಸೋಣ ಎಂದು ವಿಷ್ಣು ಸೇರಿದಂತೆ ನಿರ್ಮಾಪಕರು ಹೇಳಿದರು. ಆದರೆ ನಾನು ಬೇಡ, ಆಕೆಯಿಂದಲೇ ಮಾಡಿಸೋಣ ಆಗುತ್ತದೆ ಎಂದೆ. ಕನ್ನಡ, ಹಿಂದಿ ಮಿಕ್ಸ್ ಮಾಡಿ ಡೈಲಾಗ್ಸ್ ಹೇಳಿಸಿ ಏನೇನೊ ಮಾಡಿದ್ವಿ. ಒಟ್ಟಾರೆ ಚೆನ್ನಾಗಿ ಬಂತು" ಎಂದು ನೆನಪಿಸಿಕೊಂಡಿದ್ದಾರೆ.

"ನಾನು ನನ್ನ ಕೆಲ ಸಿನಿಮಾಗಳಿಗೆ ಕೊರಿಯೋಗ್ರಫರ್ ಇಲ್ಲದೇ ನಾನೇ ಡ್ಯಾನ್ಸ್ ಕೊರಿಯೋಗ್ರಫಿ ಮಾಡುತ್ತೇನೆ. ಆ ರೀತಿ 'ಅಲಾರೆ ಅಲಾರೆ' ಸೇರಿ ಈ ಚಿತ್ರದ 3 ಹಾಡುಗಳಿಗೆ ನಾನೇ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದೆ. ಒಟ್ಟಾರೆ ಸಿನಿಮಾ ಸೂಪರ್ ಹಿಟ್ ಆಗಿತ್ತು" ಎಂದು ತಿಳಿಸಿದ್ದಾರೆ.


Click it and Unblock the Notifications











