For Quick Alerts
  ALLOW NOTIFICATIONS  
  For Daily Alerts

  ಮನೆ ನಿರ್ಮಿಸೋಕೆ ಆ ಇಬ್ಬರು ನಟರು ಸಹಾಯ ಮಾಡಿದ್ರು, ಅವರನ್ನು ಎಂದೂ ಮರೆಯೊಲ್ಲ: ದೊಡ್ಡಣ್ಣ

  |

  ದೊಡ್ಡಣ್ಣ ಸುಮಾರು 800ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ನಟ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿದಿರುವ ದೊಡ್ಡಣ್ಣ ಈ ಹಿಂದೆ ಬಹುಬೇಡಿಕೆಯ ನಟರಾಗಿದ್ದವರು. ರಾಜ್‌ಕುಮಾರ್, ಅಂಬರೀಷ್, ಶಂಕರ್‌ನಾಗ್, ವಿಷ್ಣುವರ್ಧನ್ ರೀತಿಯ ಮೇರುನಟರ ಚಿತ್ರಗಳಲ್ಲಿ ನಟಿಸಿದ್ದ ದೊಡ್ಡಣ್ಣ ಶಿವ ರಾಜ್‌ಕುಮಾರ್, ರವಿಚಂದ್ರನ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ ಹಾಗೂ ಈಗಿನ ತಲೆಮಾರಿನ ನಟರ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

  ಹೀಗೆ ಮೂರು ತಲೆಮಾರಿನ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ದೊಡ್ಡಣ್ಣ ಅವರಿಗೆ ಇಂದು ( ನವೆಂಬರ್ 11 ) 74ನೇ ಹುಟ್ಟುಹಬ್ಬದ ಸಂಭ್ರಮ. ಸದ್ಯ ಚಂದನವನದ ಇತಿಹಾಸದ ಪುಸ್ತಕದಲ್ಲಿ ಹಲವು ಹಾಳೆಗಳಾಗಿರುವ ದೊಡ್ಡಣ್ಣ ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಚಿತ್ರರಂಗಕ್ಕೆ ಬಂದವರು.

  ಹಾಸನ ಜಿಲ್ಲೆಯ ಅರಸಿಕೆರೆ ಮೂಲದ ದೊಡ್ಡಣ್ಣ ಭದ್ರಾವತಿಯ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಅದೇ ಊರಿನ ವಿಘ್ನೇಶ್ವರ ಕಲಾಸಂಘದಲ್ಲಿ ನಾಟಕಗಳಲ್ಲಿ ನಟಿಸಲು ಆರಂಭಿಸಿದರು. ಸ್ನೇಹಿತರ ಜತೆಗೂಡಿ 'ಗಂಧರ್ವ ರಂಗ' ಎಂಬ ನಾಟಕದಲ್ಲಿ ಅಭಿನಯಿಸಿ ಜನರ ಮನಗೆದ್ದಿದ್ದ ದೊಡ್ಡಣ್ಣ ನಂತರ ಕನ್ನಡ, ತೆಲುಗು ಹಾಗೂ ತಮಿಳು ಚಲನಚಿತ್ರರಂಗಗಳಲ್ಲಿ ನಟಿಸಿದರು. ಹೆಚ್ಚಾಗಿ ರಾಜಕಾರಣಿ ಹಾಗೂ ಪೊಲೀಸ್ ಪಾತ್ರಗಳಲ್ಲಿ ನಟಿಸಿರುವ ದೊಡ್ಡಣ್ಣ ದೊಡ್ಡ ನಟರ ಚಿತ್ರಗಳಲ್ಲಿ ಪ್ರೇಕ್ಷಕರ ಕೋಪ ಕೆರಳಿಸುತ್ತಿದ್ದ ಖಳನಾಯಕನಾಗಿಯೂ ನಟಿಸಿದ್ದಾರೆ ಹಾಗೂ ನಕ್ಕು ನಗಿಸುತ್ತಿದ್ದ ಹಾಸ್ಯನಟನೂ ಹೌದು. ಹೀಗೆ ಅಪಾರ ಚಿತ್ರಗಳಲ್ಲಿ ಅಭಿನಯಿಸಿರುವ ದೊಡ್ಡಣ್ಣ ಚಿತ್ರರಂಗದ ಹಲವಾರು ದೊಡ್ಡ ನಟರ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದವರು. ಸಂದರ್ಶನವೊಂದರಲ್ಲಿ ತಮ್ಮ ಹಾಗೂ ಇತರೆ ನಟರ ಸ್ನೇಹದ ಬಗ್ಗೆ ಮಾತನಾಡಿದ್ದ ದೊಡ್ಡಣ್ಣ ನಟರೊಟ್ಟಿಗಿನ ತಮ್ಮ ಒಡನಾಟದ ಬಗ್ಗೆ ಹೇಳುವ ವೇಳೆ ತಮ್ಮ ಮನೆ ನಿರ್ಮಾಣಕ್ಕೆ ಸಹಾಯ ಮಾಡಿದ್ದ ಇಬ್ಬರು ನಟರ ಬಗ್ಗೆ ಕೂಡ ಚರ್ಚಿಸಿದ್ದರು.

  ಮೊದಲ ಮನೆ ನಿರ್ಮಾಣಕ್ಕೆ ಸಹಾಯ ಮಾಡಿದ್ರು ಆ ಇಬ್ಬರು

  ಮೊದಲ ಮನೆ ನಿರ್ಮಾಣಕ್ಕೆ ಸಹಾಯ ಮಾಡಿದ್ರು ಆ ಇಬ್ಬರು

  ನನ್ನ ಮೊದಲ ಮನೆ ನಿರ್ಮಾಣದ ವೇಳೆ ಟೆರೇಸ್ ಹಾಕಬೇಕಾದರೆ ಅಂಬರೀಶ್ ಹಾಗೂ ಶಂಕರ್‌ನಾಗ್ ಹಣ ನೀಡಿದ್ರು, ಅದನ್ನು ನನ್ನ ಜೀವನದಲ್ಲಿ ಮರೆಯೋಕೆ ಆಗುವುದೇ ಇಲ್ಲ ಎಂದು ದೊಡ್ಡಣ್ಣ ಕರ್ನಾಟಕ ಟಿವಿ ನಡೆಸಿದ್ದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದರು. ಅಷ್ಟೇ ಅಲ್ಲದೇ ಹಣ ನೀಡಲು ಮುಂದಾದಾಗ ಅಂಬರೀಶ್ 'ಓಹ್ ವಾಪಸ್ ಹಣ ನೀಡುವಷ್ಟು ಬೆಳೆದುಬಿಟ್ಟಾ ನೀನು' ಅಂತ ಹೇಳಿ ಹಣ ಮರಳಿ ಪಡೆಯಲು ನಿರಾಕರಿಸಿದ್ರು ಎಂದೂ ಸಹ ದೊಡ್ಡಣ್ಣ ತಿಳಿಸಿದ್ದರು. ಅದೇ ರೀತಿ ಶಂಕರ್ ನಾಗ್ ಸಹ 'ಒಬ್ಬ ಸಪೋರ್ಟಿಂಗ್ ಆರ್ಟಿಸ್ಟ್ ಆಗಿ ಮನೆ ಕಟ್ಟಿದ್ಯಲ್ಲ ಅದೇ ಖುಷಿ' ಎಂದು ಹಣ ವಾಪಸ್ ಪಡೆಯಲಿಲ್ಲ ಎಂದೂ ಸಹ ದೊಡ್ಡಣ್ಣ ಹೇಳಿಕೊಂಡಿದ್ದರು.

  ವಿಧಾನಸೌಧದ ಸುತ್ತಲಿನ ಜಾಗಕ್ಕೆ ಚಿನ್ನದಂತ ಬೆಲೆ ಬರುತ್ತೆ ಎಂದಿದ್ರು ಶಂಕರ್‌ನಾಗ್

  ವಿಧಾನಸೌಧದ ಸುತ್ತಲಿನ ಜಾಗಕ್ಕೆ ಚಿನ್ನದಂತ ಬೆಲೆ ಬರುತ್ತೆ ಎಂದಿದ್ರು ಶಂಕರ್‌ನಾಗ್

  ಇನ್ನು ವಿಧಾನ ಸೌಧ ಕಟ್ಟಡದ ಸುತ್ತಲಿನ ಐವತ್ತು ಕಿಲೋಮೀಟರ್ ಜಾಗಕ್ಕೆ ಭವಿಷ್ಯದಲ್ಲಿ ಚಿನ್ನದಂತ ಬೆಲೆ ಬರುತ್ತೆ, ಜನ ಚಿನ್ನಕ್ಕಿಂತ ಹೆಚ್ಚಾಗಿ ಆ ಜಾಗ ಖರೀದಿಸೋಕೆ ಮುಗಿ ಬೀಳ್ತಾರೆ ನೋಡು ದೊಡ್ಡ ಎಂದು ಶಂಕರ್‌ ನಾಗ್ ಆಗಲೇ ಭವಿಷ್ಯ ನುಡಿದಿದ್ರು ಎಂದು ದೊಡ್ಡಣ್ಣ ಹಳೆಯ ನೆನಪನ್ನು ಮೆಲುಕು ಹಾಕಿದ್ದರು.

  ವಿಷ್ಣುವರ್ಧನ್ ಶಿಸ್ತಿನ ಸಿಪಾಯಿ

  ವಿಷ್ಣುವರ್ಧನ್ ಶಿಸ್ತಿನ ಸಿಪಾಯಿ

  ಇನ್ನು ವಿಷ್ಣುವರ್ಧನ್ ಕುರಿತಾಗಿಯೂ ಮಾತನಾಡಿದ್ದ ದೊಡ್ಡಣ್ಣ ವಿಷ್ಣುವರ್ಧನ್ ಎಂದರೆ ಶಿಸ್ತಿನ ಸಿಪಾಯಿ ಎಂದಿದ್ದರು. ಒಂಬತ್ತು ಗಂಟೆಗೆ ಚಿತ್ರೀಕರಣ ಎಂದರೆ ಬೆಳಗ್ಗೆ ಏಳು ಗಂಟೆಗೆ ಸೆಟ್‌ಗೆ ಹಾಜರಿರುತ್ತಿದ್ದರು ಅಂತಹ ನಟ ಯಾರಿದ್ದಾರೆ ಎಂದು ವಿಷ್ಣುವರ್ಧನ್ ಅವರನ್ನು ಹಲವಾರು ಚಿತ್ರಗಳಲ್ಲಿ ತುಂಬಾ ಹತ್ತಿರದಿಂದ ನೋಡಿದ್ದ ದೊಡ್ಡಣ್ಣ ಹೇಳಿದರು. ಅದೇ ರೀತಿ ರಾಜ್‌ಕುಮಾರ್, ಶಂಕರ್ ನಾಗ್ ಸಹ ಶೂಟಿಂಗ್ ಆರಂಭಕ್ಕೂ ಮುನ್ನ ಆಗಮಿಸುತ್ತಿದ್ದರು ಎಂದು ತಿಳಿಸಿದರು.

  ಸರಳತೆ ಕಲಿತಿದ್ದೇ ರಾಜ್‌ಕುಮಾರ್ ಅವರಿಂದ

  ಸರಳತೆ ಕಲಿತಿದ್ದೇ ರಾಜ್‌ಕುಮಾರ್ ಅವರಿಂದ

  ನಾನು ಅತ್ಯಂತ ಸರಳತೆ ಕಲಿತಿದ್ದು ಡಾ. ರಾಜ್‌ಕುಮಾರ್ ಅವರಿಂದ, ಅವರಿಗಿಂತ ಮೇರುನಟ ಮತ್ತೊಬ್ಬರಿಲ್ಲ, ಕರ್ನಾಟಕ ಮಾತ್ರವಲ್ಲ ಭಾರತದಾದ್ಯಂತ ಅವರ ಅಭಿನಯ ನೋಡಿ ಮೂಕವಿಸ್ಮಿತರಾಗುತ್ತಿದ್ರು, ಅಂತಹ ವ್ಯಕ್ತಿಯಿಂದ ನಾವು ಸರಳತೆ ಕಲಿತೆವು, ಅಣ್ಣಾವ್ರು ಅಹಂಕಾರವನ್ನು ಇಪ್ಪತ್ತು ಅಡಿ ದೂರ ಇಟ್ಟಿದ್ರು, ಅದಕ್ಕೆ ಅವರನ್ನು ಜನ ಆರಾಧ್ಯ ದೈವ ಅಂತ ಒಪ್ಪಿಕೊಂಡಿದ್ದು, ಇಂತಹ ನಟರ ಜತೆ ನಟಿಸಿದ್ದೇ ನನ್ನ ಪುಣ್ಯ ಎಂದು ದೊಡ್ಡಣ್ಣ ಹೇಳಿದರು.

  English summary
  Ambareesh and Shankarnag helped me financially to build my house says Doddanna. Read on
  Friday, November 11, 2022, 17:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X