ಮಂಡ್ಯ ತಲುಪಿದ ಅಂಬಿ ಪಾರ್ಥಿವ ಶರೀರ, ಸ್ಟೇಡಿಯಂನಲ್ಲಿ ಜನಸ್ತೋಮ
ಸೇನಾ ಹೆಲಿಕಾಪ್ಟರ್ ಮೂಲಕ ನಟ ಅಂಬರೀಶ್ ಪಾರ್ಥಿವ ಶರೀರ ಮಂಡ್ಯ ತಲುಪಿದೆ. ಬೆಂಗಳೂರಿನಿಂದ ಮೂರು ಹೆಲಿಕ್ಯಾಪ್ಟರ್ ಗಳಲ್ಲಿ ಅಂಬರೀಶ್ ಕುಟುಂಬ ಸೇರಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಮಂಡ್ಯಗೆ ಆಗಮಿಸಿದ್ದಾರೆ.
ಮಂಡ್ಯದ ಜಿಲ್ಲಾಡಳಿತ ವತಿಯಿಂದ ಸರ್. ಎಂ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ.
ಸಂಜೆಯಿಂದ ಬೆಳಿಗ್ಗೆ 6 ಗಂಟೆಯ ತನಕ ಸ್ಟೇಡಿಯಂನಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಸೇರಿದಂತೆ ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಅಭಿಮಾನಿಗಳು ಮಂಡ್ಯ ಸ್ಟೇಡಿಯಂ ಕಡೆ ಬರ್ತಿದ್ದಾರೆ.

ಹೆಚ್ಚು ಜನರು ಸೇರುವ ನಿರೀಕ್ಷೆಯಲ್ಲಿ ಸ್ಟೇಡಿಯಂ ಸುತ್ತ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದು, ಜನರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ ಎಸ್ ಪುಟ್ಟರಾಜು ಈ ಅಂತಿಮ ದರ್ಶನದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ಮಂಡ್ಯದಿಂದ ಬೆಂಗಳೂರಿಗೆ ಪಾರ್ಥಿವ ಶರೀರವನ್ನ ತೆಗೆದುಕೊಂಡು ಹೋಗಲಿದ್ದು, ನಂತರ ಕಂಠೀರವ ಸ್ಟೇಡಿಯಂನಿಂದ, ಕಂಠೀರವ ಸ್ಟುಡಿಯೋವರೆಗೂ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನ ತರಲಾಗುವುದು. ನಂತರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ.


Click it and Unblock the Notifications











