7 ಟನ್ ಮಟನ್, 7 ಟನ್ ಚಿಕನ್.. ಬಾಡೂಟದ ಮೆನು ಏನು? ಬೀಗರೂಟಕ್ಕೆ ಬರುವವರಲ್ಲಿ ಅಭಿ ಸಣ್ಣ ಮನವಿ!
ಅಂಬರೀಷ್ ಪುತ್ರ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಜೋಡಿಯ ಕಲ್ಯಾಣ ಅದ್ಧೂರಿಯಾಗಿ ನೆರವೇರಿದೆ. ಮಾಂಗಲ್ಯಧಾರಣೆ, ಆರತಕ್ಷತೆ, ಸಂಗೀತ್ ಪಾರ್ಟಿ ಅಂತೆಲ್ಲಾ ಸಂಭ್ರಮ ಮುಗಿಲು ಮುಟ್ಟಿದೆ. ಇದೀಗ ಕೊನೆಯದಾಗಿ ಮಂಡ್ಯದಲ್ಲಿ ಅಭಿಮಾನಿಗಳಿಗೆ ಬೀಗರ ಔತಣಕೂಟ ಏರ್ಪಾಡುಗುತ್ತಿದೆ. ಆ ಮೂಲಕ ಅಭಿ- ಅವಿವಾ ಮದುವೆ ಭಾಗವಾಗಿ ಮತ್ತೊಂದು ಅದ್ಧೂರಿ ಕಾರ್ಯಕ್ರಮಕ್ಕೆ ರೆಬಲ್ ಸ್ಟಾರ್ ಕುಟುಂಬ ಸಜ್ಜಾಗ್ತಿದೆ.
ಮದುವೆ ಆರತಕ್ಷತೆ ಕಾರ್ಯಕ್ರಮ ಎಷ್ಟು ಅದ್ಧೂರಿಯಾಗಿ ನಡೀತು ಅನ್ನೋದನ್ನು ನೋಡಿದಮೇಲೆ ಬೀಗರೂಟ ಹೇಗಿರುತ್ತೆ ಅನ್ನೋದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್, ಚಿರಂಜೀವಿ, ಮೋಹನ್ ಬಾಬು, ರಮ್ಯಾಕೃಷ್ಣ, ಸುಹಾಸಿನಿ ಸೇರಿದಂತೆ ಅಕ್ಕಪಕ್ಕದ ಇಂಡಸ್ಟ್ರಿ ತಾರೆಯರು ಅಭಿ- ಅವಿವಾ ಜೋಡಿಗೆ ಶುಭ ಹಾರೈಸಿದ್ದರು. ಇನ್ನು ಸ್ಯಾಂಡಲ್‌ವುಡ್‌ನ ಬಹುತೇಕ ತಾರೆಯರು ಅಂಬಿ ಮನೆ ಸಂಭ್ರಮದಲ್ಲಿ ಭಾಗಿ ಆಗಿ ಸಂಭ್ರಮಿಸಿದ್ದರು.

ಬೀಗರೂಟದ ವಿಚಾರಕ್ಕೆ ಬಂದರೆ ಮಂಡ್ಯ ಅಂದ್ರೆ ಬಾಡೂಟ ಫೇಮಸ್. ಅಂಬಿಗೂ ನಾನ್‌ವೆಜ್ ಅಂದ್ರೆ ಬಹಳ ಪ್ರಿಯವಾಗಿತ್ತು. ರೆಬಲ್ ಸ್ಟಾರ್ ಪುತ್ರನ ಮದುವೆಯನ್ನು ಮಂಡ್ಯದಲ್ಲೇ ಮಾಡಬೇಕು ಎಂದುಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಬೆಂಗಳೂರಿನಲ್ಲಿ ಅಭಿ- ಅವಿವಾ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ ಮಂಡ್ಯದಲ್ಲಿ ಅಭಿಮಾನಿಗಳಿಗಾಗಿ ಬೀಗರೂಟ ಆಯೋಜಿಸಲಾಗುತ್ತಿದೆ. ಸುಮಲತಾ ಅಂಬರೀಶ್ ಮಂಡ್ಯ ಸಂಸದೆ ಕೂಡ ಆಗಿರುವುದರಿಂದ ಕಾರ್ಯಕ್ರಮ ಮತ್ತೊಂದು ಜೋರಾಗಿ ನಡೆಯಲಿದೆ.

ಗಜ್ಜಲೆಗೆರೆಯಲ್ಲಿ ಬೀಗರೂಟ
ಮಂಡ್ಯ ಜಿಲ್ಲೆಯ ಗಜ್ಜಲ ಗೆರೆಯಲ್ಲಿ ಅಭಿ- ಅವಿವಾ ಮದುವೆ ಬೀಗರೂಟ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ದೊಡ್ಡ ಮೈದಾನದಲ್ಲಿ ನಾನ್‌ವೆಜ್ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 50 ಸಾವಿರ ಜನ ಅಂದು ಭಾಗಿ ಆಗುವ ಸಾಧ್ಯತೆಯಿದೆ. 15 ಎಕರೆ ಜಾಗದಲ್ಲಿ ಶಾಮಿಯಾನ ಹಾಕಲಾಗ್ತಿದ್ದು ಬೆಳಗ್ಗೆ 11 ಗಂಟೆಗೆಲ್ಲಾ ಊಟದ ವ್ಯವಸ್ಥೆ ಇರುತ್ತದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.
7 ಟನ್ ಮಟನ್, 7 ಟನ್ ಚಿಕನ್
ಸಾಮಾನ್ಯವಾಗಿ ಬೀಗರೂಟದಲ್ಲಿ ಮಟನ್, ಚಿಕನ್ ಪಾರುಪತ್ಯ ಜೋರು. ಬರೋಬ್ಬರಿ 7 ಟನ್ ಮಟನ್, 7 ಟನ್ ಚಿಕನ್ ಬೇಯಿಸಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಮಂಡ್ಯದ ಸ್ಥಳೀಯ ಬಾಣಸಿಗರಿಗೆ ಅಡುಗೆ ಸಿದ್ಧಪಡಿಸುವ ಜವಾಬ್ದಾರಿ ವಹಿಸಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಬಹಳ ಅದ್ಧೂರಿಯಾಗಿಯೇ ಬಾಡೂಟ ಸಿದ್ಧವಾಗಲಿದೆ.
ಬಾಡೂಟದ ಮೆನು ಏನು?
ಇನ್ನು ಅಂಬಿಗೆ ಇಷ್ಟವಾಗಿದ್ದ ನಾನ್‌ವೆಜ್ ಐಟಂಗಳನ್ನು ಬೀಗರೂಟಕ್ಕೆ ಮಾಡಿಸಲಾಗುತ್ತಿದೆ. ಮೆನು ಏನು ಎನ್ನುವುದನ್ನ ನೋಡುವುದಾದರೆ ಮಟನ್ ಕರಿ, ರಾಗಿ ಮುದ್ದೆ, ಬೋಟಿ ಗೊಜ್ಜು, ಕೈಮಾ, ಪಾಯಸ, ಚಿಕನ್ ಫ್ರೈ, ಕಬಾಬ್, ಗೀ ರೈಸ್, ಅನ್ನ ರಸಂ, ಬೀಡ, ಐಸ್‌ಕ್ರೀಂ ಇರಲಿದೆ. ಪಕ್ಕಾ ನಾಟಿ ಸ್ಟೈಲ್‌ನಲ್ಲಿ ಬೀಗರೂಟ ಸಿದ್ಧವಾಗಲಿದೆ. ಆ ದಿನ ಅಭಿ ಹಾಗೂ ಅವಿವಾ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕನ್ನಡ ಚಿತ್ರರಂಗದ ಕೆಲಸ ತಾರೆಯರು ಕೂಡ ಅಂಬಿ ಮನೆಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಅಭಿಯ ಸಣ್ಣ ಮನವಿ
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಈ ಬೀಗರೂಟ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಅಂದು ಅಭಿ- ಅವಿವಾ ಜೋಡಿಗೆ ಶುಭಕೋರಲು ಎಲ್ಲರಿಗೂ ಅವಕಾಶ ಇದೆ. ಆದರೆ ಹಾರ, ಬೊಕ್ಕೆ, ಉಡುಗೊರೆ ತರುವುದು ಬೇಡ. ಎಲ್ಲರೂ ಪ್ರೀತಿಯಿಂದ ಆರ್ಶೀವಾದ ಮಾಡಿದರೆ ಸಾಕು ಎಂದು ಅಭಿ ಮನವಿ ಮಾಡಿದ್ದಾರೆ. ಅಂಬಿ ಅಭಿಮಾನಿಗಳು, ಸುಮಲತಾ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ದೊಡ್ಡಮಟ್ಟದಲ್ಲಿ ಜಮಾಯಿಸಲಿದ್ದಾರೆ.


Click it and Unblock the Notifications











