ಅಂಬರೀಶ್ ತೆಗೆದುಕೊಂಡ ಆ ನಿರ್ಧಾರವೇ ವಿಷ್ಣುವರ್ಧನ್ ಸಮಾಧಿಗೆ ಮುಳುವಾಗಿಬಿಡ್ತಾ?
ರಾತ್ರೋರಾತ್ರಿ ಅಭಿಮಾನ್ನ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ತೆರವು ಮಾಡಲಾಗಿದೆ. ಅಭಿಮಾನಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದೇ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹೈಕೋರ್ಟ್ ಸೂಚನೆ ಮೇರೆಗೆ ಸಮಾಧಿ ತರೆವುಗೊಳಿಸಲಾಗಿತ್ತು. ಅಂದು ಅಂಬರೀಶ್ ತೆಗೆದುಕೊಂಡಿದ್ದ ಆ ಗಟ್ಟಿ ನಿರ್ಧಾರವೇ ಕೊನೆಗೂ ಸಮಾಧಿ ವಿಚಾರ ವಿವಾದದಲ್ಲೇ ಮುಗಿಯುವಂತಾಯ್ತಾ?
2009ರಲ್ಲಿ ಉತ್ತರಹಳ್ಳಿ- ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅಸಂಖ್ಯಾತ ಅಭಿಮಾನಿಗಳ ಸಮ್ಮುಖದಲ್ಲಿ ಸಮ್ಮುಖದಲ್ಲಿ ವಿಷ್ಣು ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿತ್ತು. ಅದೇ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎನ್ನುವುದು ಎಲ್ಲರ ಆಸೆ ಆಗಿತ್ತು. ವೈಯಕ್ತಿಕವಾಗಿ ಅಂಬರೀಶ್ ಅವರು ಇದನ್ನೇ ಬಯಸಿದ್ದರು. ಅದು ವಿವಾದಿತ ಜಾಗ ಎನ್ನುವುದನ್ನು ಆ ಕ್ಷಣಕ್ಕೆ ಯಾರೂ ಆಲೋಚಿಸದೇ ಅಂತ್ಯಕ್ರಿಯೆ ಮಾಡಿದ್ದು ಇಷ್ಟೆಲ್ಲಾ ಹಗ್ಗಜಗ್ಗಾಟಕ್ಕೆ ಕಾರಣವಾಯಿತು.

ವಿಷ್ಣು ಅಂತ್ಯಕ್ರಿಯೆಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಡಬೇಕು ಎಂದು ನಿರ್ಧರಿಸಿದವರಲ್ಲಿ ಅಂಬರೀಶ್ ಕೂಡ ಒಬ್ಬರು. ಏನೇ ಸಮಸ್ಯೆ ಬಂದರೂ ಬಗೆಹರಿಸಿಕೊಂಡು ಅಲ್ಲೇ ಅಂತ್ಯಕ್ರಿಯೆ ನಡೆಸಿ ಸಮಾಧಿ ಮಾಡಿ ಸ್ಮಾರಕ ಮಾಡಬೇಕು ಎನ್ನುವುದು ಅಂಬರೀಶ್ ಆಸೆ ಆಗಿತ್ತು. ಕೊನೆಗೆ ವಿಷ್ಣು ಕುಟುಂಬಸ್ಥರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡೋಣ ಎಂದಾಗಲೂ ಅಂಬಿ ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದರು.
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣದ ಬಗ್ಗೆ ಮಾಧ್ಯಮದವರು ಒಮ್ಮೆ ಕೇಳಿದ ಪ್ರಶ್ನೆಗೆ "ಭಾರತಿ ವಿಷ್ಣುವರ್ಧನ್ ಅವರ ತೀರ್ಮಾಣವೇ ಅಂತಿಮ. ಆದರೆ ನನಗೆ ವೈಯಕ್ತಿಕವಾಗಿ ಅಂತ್ಯಕ್ರಿಯೆ ನಡೆದ ಜಾಗದಲ್ಲೇ ಸ್ಮಾರಕ ಕೂಡ ನಿರ್ಮಾಣವಾಗಬೇಕು" ಎಂದು ಅಂಬರೀಶ್ ಹೇಳಿದ್ದರು. ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಜಾಗದ ಸುತ್ತಾ ಟೆಂಟ್ ಮಾದರಿಯಲ್ಲಿ ಸಣ್ಣ ಗೋಪುರ ಇತ್ತು. ಆದರೆ ಈಗ ಸಮಾಧಿ ಗೋಪುರವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದ್ದಾರೆ. ಅಲ್ಲಿ ವಿಷ್ಣುವರ್ಧನ್ ಸಮಾಧಿ ಇದ್ದ ಯಾವುದೇ ಕುರುಹು ಈಗ ಉಳಿದಿಲ್ಲ.
ವಿಷ್ಣುವರ್ಧನ್ ಸಮಾಧಿ ತೆರವು ವಿಚಾರ ನನಗೆ ಶಾಕ್ ತಂದಿದೆ ಎಂದು ನಟ ಬಾಲಕೃಷ್ಣ ಪುತ್ರಿ ಗೀತಾ ಬಾಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಂದು ಬಾಲಣ್ಣನವರ ಕುಟುಂಬದವರ ಗಮನಕ್ಕೂ ತರದೇ ವಿಷ್ಣುವರ್ಧನ್ ಅಂತ್ಯಕ್ರಿಯೆಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಿಗದಿ ಮಾಡಿದ್ದರು ಎನ್ನುವ ವಾದವೂ ಇದೆ. ಈ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡ್ ಒಂದು ಇಂಟ್ರೆಸ್ಟಿಂಗ್ ಸಂಗತಿಯನ್ನು ಸುದ್ದಿಮನೆ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಂಡಿದ್ದರು.

ಅಭಿಮಾನ್ ಸ್ಟುಡಿಯೋ ಉಸ್ತುವಾರಿಯನ್ನು ನಟ ಬಾಲಣ್ಣನ ಪುತ್ರ ಗಣೇಶ್ ವಹಿಸಿಕೊಂಡಿದ್ದರು. ಅವರು ಗಣೇಶ್ ಕಾಸರಗೋಡು ಅವರಿಗೆ ಆತ್ಮೀಯರಾಗಿದ್ದರು. ವಿಷ್ಣುವರ್ಧನ್ ಅಂತ್ಯಕ್ರಿಯೆ ಸಮಯದಲ್ಲಿ ಗಣೇಶ್ ಅವರಿಗೆ ಅಂಬರೀಶ್ ಫೋನ್ ಮಾಡಿ ಮಾತನಾಡಿದ್ದರಂತೆ. ಆ ವಿಚಾರವನ್ನು ಬಾಲಣ್ಣನ ಪುತ್ರ ಗಣೇಶ್ ತಮ್ಮ ಬಳಿ ಹಂಚಿಕೊಂಡಿದ್ದಾರೆ ಗಣೇಶ್ ಕಾಸರಗೋಡು ಹೇಳಿದ್ದರು. ವಿಷ್ಣುವರ್ಧನ್ ನಿಧನವಾದ ದಿನ ಬಾಲಣ್ಣ ಪುತ್ರ ಗಣೇಶ್ ಟಿವಿ ನೋಡುತ್ತಿದ್ದರು. ನಡುವೆ ದಾದಾ ಅಂತ್ಯಕ್ರಿಯೆ ನಡೆಯುವುದು, ಅಭಿಮಾನ್ ಸ್ಟುಡಿಯೋದಲ್ಲಿ ಅಂದಾಗ ಖುದ್ದು ಗಣೇಶ್ ಅವರಿಗೆ ಶಾಕ್ ಆಗಿತ್ತಂತೆ. ನನಗೆ ಗೊತ್ತಿಲ್ಲದೇ ನನ್ನ ಉಸ್ತುವಾರಿಯ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಕ್ರಿಯೆನಾ? ಎಂದು ಗಣೇಶ್‌ಗೆ ಗೊಂದಲಕ್ಕೀಡಾಗಿದ್ರು" ಎಂದು ಗಣೇಶ್ ಕಾಸರಗೋಡು ಆ ಘಟನೆ ನೆನಪಿಸಿಕೊಂಡಿದ್ದಾರೆ.
"ದಿಢೀರನೆ ಅಂಬರೀಶ್ ಅವರು ಗಣೇಶ್ ಅವರಿಗೆ ಕರೆ ಮಾಡಿದ್ದರಂತೆ. ಅಂಬಿ ತಮ್ಮದೇ ಶೈಲಿಯಲ್ಲಿ ನೋಡಪ್ಪಾ, ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಕ್ರಿಯೆ ನಡೀತಿದೆ. ಯಾವುದೇ ಅಡ್ಡಿ ಆಗಬಾರದು. ನಾನು ಹೇಳುತ್ತಿರುವುದು ಇದು ಎಂದಿದ್ದರಂತೆ. ಇದನ್ನು ಕೇಳಿ ಗಣೇಶ್ ಸುಮ್ಮನಾಗಿದ್ದರಂತೆ. ಇದಕ್ಕೆ ಪ್ರತಿರೋಧ ತೋರಲಿಲ್ಲ. ಅಂಬಿ ಮಾತಿಗೆ ಒಪ್ಪಿ ವಿಷ್ಣು ಅಂತ್ಯಕ್ರಿಯೆ ನಡೀತು. ಮಾಲೀಕರಿಗೆ ಗೊತ್ತಿಲ್ಲದೇ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆದಿದ್ದು ವಿಪರ್ಯಾಸ. ಅಲ್ಲಿಂದ ಮುಂದೆ ಸ್ಮಾರಕದ ವಿವಾದ ಶುರುವಾಯಿತು.
ಅಂಬಿ ತಮ್ಮ ಕುಚಿಕು ಗೆಳೆಯನ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಕಟ್ಟಬೇಕು ಎಂದು ಕನಸು ಕಂಡಿದ್ದರು. ಅದಕ್ಕಾಗಿ ಯಾವುದೇ ಅಡೆತಡೆ ಆದರೂ ಎದುರು ನಿಲ್ಲಲು ಸಿದ್ಧರಿದ್ದರು. ವಿವಾದಿತ ಸ್ಥಳ ಎನ್ನುವುದರ ಬಗ್ಗೆ ಗೊತ್ತಿಲ್ಲದೇ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಕ್ರಿಯೆಗೆ ಜಾಗ ನಿಗದಿಗೊಳಿಸಿದ್ದೇ ತಪ್ಪಾಗಿ ಬಿಡ್ತಾ? ಗೊತ್ತಿಲ್ಲ. ಆದರೆ ಕಾನೂನು, ಬಾಲಣ್ಣ ಕುಟುಂಬದವರ ಆಸ್ತಿ ವಿವಾದದಲ್ಲಿ ವಿಷ್ಣುವರ್ಧನ್ ಸ್ಮಾರಕ ಕನಸು ಅಭಿಮಾನ್ ಸ್ಟುಡಿಯೋದಲ್ಲಿ ನನಸಾಗಲಿಲ್ಲ. ಆದರೆ ಅಭಿಮಾನಿಗಳು ಮಾತ್ರ ಈ ಕ್ಷಣಕ್ಕೂ ಇದನ್ನು ಒಪ್ಪಲು ಸಿದ್ಧರಿಲ್ಲ.


Click it and Unblock the Notifications











