ಅಂಬರೀಶ್ ಹುಟ್ಟುಹಬ್ಬ: ಅಭಿಮಾನಿಗಳ ಮನದಲ್ಲಿ ಅಂಬಿ ಅಮರ
ಇಂದು (ಮೇ 29) ಅಂಬರೀಶ್ ಹುಟ್ಟುಹಬ್ಬ. ಅಂಬಿ ಬದುಕಿದಿದ್ದಿದ್ದರೆ ಇಂದಿಗೆ ಅವರಿಗೆ 69 ವರ್ಷವಾಗಿರುತ್ತಿತ್ತು.
ಕೊರೊನಾ ಕಾರಣದಿಂದಾಗಿ ಅಂಬರೀಶ್ ಹುಟ್ಟುಹಬ್ಬದ ಸಾರ್ವಜನಿಕ ಆಚರಣೆ ಮಾಡುವಂತಿಲ್ಲ. ಅಭಿಮಾನಿಗಳೆಲ್ಲರೂ ಅಂಬರೀಶ್ ಹುಟ್ಟುಹಬ್ಬವನ್ನು ತಮ್ಮ-ತಮ್ಮ ಮನೆಗಳಲ್ಲಿ, ಮನಗಳಲ್ಲಿ ಮಾಡಿಕೊಳ್ಳುವಂತೆ ಅಂಬಿ ಪತ್ನಿ ಸುಮಲತಾ ಮನವಿ ಮಾಡಿದ್ದಾರೆ.
ಅಂಬರೀಶ್ ಜನ್ಮದಿವನ್ನು ಹಬ್ಬದಂತೆ ಆಚರಿಸುವುದು ಅಭಿಮಾನಿಗಳಿಗೆ ಅಭ್ಯಾಸ. ಅನ್ನದಾನ, ರಕ್ತದಾನ ಶಿಬಿರಗಳು, ವಿಶೇಷ ಪೂಜೆ, ಮೆರವಣಿಗೆ, ಪುತ್ಥಳಿ ಪೂಜೆ ಹೀಗೆ ಹಲವು ಬಗೆ ಕಾರ್ಯಕ್ರಮಗಳನ್ನು ಅಂಬರೀಶ್ ಅಭಿಮಾನಿಗಳು ಆಯೋಜಿಸಿರುತ್ತಿದ್ದರು. ಆದರೆ ಕೊರೊನಾ ಅದೆಲ್ಲದಕ್ಕೂ ಬ್ರೇಕ್ ಹಾಕಿದೆ.

ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸುಮಲತಾ ಅಂಬರೀಶ್, ''ನಮ್ಮೆಲ್ಲರ ಪ್ರೀತಿಯ ಅಂಬರೀಷ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನಸ್ಸು ಮನೆಗಳಲ್ಲೇ ಆಚರಿಸೋಣ'' ಎಂದಿದ್ದಾರೆ.
ಸುಮಲತಾ ಹಾಗೂ ಪುತ್ರ ಅಭಿಷೇಕ್, ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಕೆಲವು ಅಭಿಮಾನಿಗಳೂ ಸಹ ಅಲ್ಲಿಯೇ ಪೂಜೆ ಸಲ್ಲಿಸಲಿದ್ದಾರೆ. ಇನ್ನುಳಿದಂತೆ ಸಿನಿಮಾ ನಟ-ನಟಿಯರು ಸಾಮಾಜಿಕ ಜಾಲತಾಣದ ಮೂಲಕ ಅಂಬರೀಶ್ ಅವರನ್ನು ನೆನಪಿಸಿಕೊಳ್ಳುವುದು ಸಾಮಾನ್ಯ.
1952 ಮೇ 29 ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಆಗಿ ಹುಟ್ಟಿದ ಅಂಬರೀಶ್ ಆ ನಂತರ 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿದ್ದುಕೊಂಡು ಸಿನಿರಸಿಕರ ಮನತಣಿಸಿದರು. ರಾಜಕೀಯದಲ್ಲಿಯೂ ಯಶಸ್ಸುಗಳಿಸಿ ಜನಸೇವೆ ಮಾಡಿದರು.
Recommended Video
ಅಂಬರೀಶ್ ಅವರು ನವೆಂಬರ್ 24, 2018ರಂದು ಹೃದಯಾಘಾತದಿಂದ ನಿಧನರಾದರು. ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಯಡಿಯೂರಪ್ಪ ನೇತೃತ್ವದ ಸರ್ಕಾರವು ಕಂಠೀರವ ಸ್ಟುಡಿಯೋ ಆವರಣದಲ್ಲಿ 1.34 ಎಕರೆ ಜಾಗ ಮಂಜೂರು ಮಾಡಿದೆ. ಜೊತೆಗೆ ಐದು ಕೋಟಿ ಅನುದಾನ ಸಹ ನೀಡಿದೆ. ಆದರೆ ಕೆಲಸ ಇನ್ನೂ ಆರಂಭವಾಗಿಲ್ಲ.


Click it and Unblock the Notifications











