ದುರ್ಯೋಧನನ ಜೊತೆ ಅವರೊಬ್ಬರದೇ ಕಟೌಟ್: ಅದಕ್ಕೊಂದು ಕಾರಣನೂ ಇದೆ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಕುರುಕ್ಷೇತ್ರ ಆಗಸ್ಟ್ 9 ರಂದು ತೆಲುಗು ಮತ್ತು ಕನ್ನಡದಲ್ಲಿ ಅದ್ಧೂರಿಯಾಗಿ ತೆರೆಕಾಣುತ್ತಿದೆ. ಈಗಾಗಲೇ ಕುರುಕ್ಷೇತ್ರ ಬಿಡುಗಡೆಯಾಗುವ ಚಿತ್ರಮಂದಿರಗಳ ಬಳಿ ದುರ್ಯೋಧನನ ಜಾತ್ರೆ ನಡೆಯುತ್ತಿದೆ.
ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಸೋನು ಸೂದ್, ನಿಖಿಲ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಕುರುಕ್ಷೇತ್ರದಲ್ಲಿ ದರ್ಶನ್ ಚಿತ್ರ ಮಾತ್ರವಲ್ಲ, ಎಲ್ಲ ಪಾತ್ರಗಳು ಹೀರೋಗಳೇ ಎಂದು ಚಿತ್ರತಂಡ ಹೇಳಿದೆ. ಇಷ್ಟು ದೊಡ್ಡ ತಾರಬಳಗ ಹೊಂದಿರುವ ಕಾರಣ ಬಹುಶಃ ಚಿತ್ರಮಂದಿರದ ಎದುರು ಬಹುತೇಕ ಎಲ್ಲರ ಕಟೌಟ್ ನಿಲ್ಲಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ದುರ್ಯೋಧನನ ಮಾತ್ರ ನಿರ್ಮಾಪಕರ ಆಯ್ಕೆಯಾಗಿದ್ದಾರೆ.
ವಿಶೇಷ ಅಂದ್ರೆ ಡಿ ಬಾಸ್ ಜೊತೆಯಲ್ಲಿ ಮತ್ತೊಬ್ಬರ ಕಟೌಟ್ ರಾರಾಜಿಸುತ್ತಿದ್ದೆ. ಸರ್ಪ್ರೈಸ್ ಎಂಬಂತೆ ಅವರೊಬ್ಬರ ಕಟೌಟ್ ಯಾಕೆ ಎಂದು ಕೇಳಿದ್ರೆ ಅದಕ್ಕೊಂದು ಕಾರಣ ಇದೆ. ಏನದು? ಮುಂದೆ ಓದಿ....

ಚಿತ್ರರಂಗದ ಭೀಷ್ಮನಿಗೆ ಕಟೌಟ್ ಗೌರವ
'ಕುರುಕ್ಷೇತ್ರ ರಿಲೀಸ್ ವೇಳೆ ಚಿತ್ರಮಂದಿರ ಬಳಿ ನಮ್ಮ ಕಟೌಟ್ ಗಳು ಬೇಡ, ಅಂಬರೀಶ್ ಅವರೊಬ್ಬರದ್ದು ಇದ್ದರೆ ಸಾಕು' ಎಂದು ಡಿ ಬಾಸ್ ದರ್ಶನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅವರೊಬ್ಬರಿದ್ದರೇ ಎಲ್ಲರೂ ಇದ್ದಂತೆ ಎಂದು ನಿರ್ಮಾಪಕರಿಗೆ ತಿಳಿಸಿದರು. ಹಾಗಾಗಿಯೇ ಬಹುತೇಕ ಎಲ್ಲ ಚಿತ್ರಮಂದಿರಗಳ ಬಳಿಯೂ ಭೀಷ್ಮನ ಕಟೌಟ್ ರಾರಾಜಿಸುತ್ತಿದೆ.

ದುರ್ಯೋಧನನ ಹಿಂದೆ ಅಂಬಿ
ಅಂಬರೀಶ್ ಅವರನ್ನ ಪ್ರೀತಿಯಿಂದ ಅಪ್ಪಾಜಿ ಎಂದು ಕರೆಯುವ ದರ್ಶನ್, ತೂಗುದೀಪ್ ಶ್ರೀನಿವಾಸ್ ನಂತರ ಆ ಸ್ಥಾನದಲ್ಲಿ ಅಂಬಿ ಅವರನ್ನ ಕಾಣುತ್ತಾರೆ. ಹೀಗಾಗಿ, ಕುರುಕ್ಷೇತ್ರದ ಚಿತ್ರಮಂದಿರಗಳ ಬಳಿ ಅಂಬರೀಶ್ ಅವರನ್ನ ಮುಂದೆ ನಿಲ್ಲಿಸಿ ಅವರ ಹಿಂದೆ ದರ್ಶನ್ ಕಟೌಟ್ ಹಾಕಲಾಗಿದೆ. ಇದು ಬೆಂಗಳೂರಿನ ಮುಖ್ಯ ಚಿತ್ರಮಂದಿರ ನರ್ತಕಿ ಬಳಿ ಕಂಡ ದೃಶ್ಯ.

ಜೂನಿಯರ್-ಸೀನಿಯರ್
ದುರ್ಯೋಧನ ಬಿಟ್ಟರೇ, ಕರ್ಣ, ಕೃಷ್ಣ, ಅರ್ಜುನ, ಅಭಿಮನ್ಯು, ಭೀಮ ಅಂತಹ ಪಾತ್ರಗಳಲ್ಲಿ ಸ್ಟಾರ್ ನಟರು ಅಭಿನಯಿಸಿದ್ದಾರೆ. ಇವರೆಲ್ಲರ ಕಟೌಟ್ ಹಾಕುವ ಬದಲು ಹಿರಿಯ ಕಲಾವಿದ, ಎಲ್ಲರ ಪ್ರೀತಿಯ ಅಂಬಿ ಅವರದ್ದು ಹಾಕಿ, ವಿಶೇಷ ಗೌರವ ನೀಡಲಾಗಿದೆ. ಕೆಲವು ಕಡೆ ಅಂಬರೀಶ್ ನಿಂತಿರುವ ಕಟೌಟ್ ಹಾಕಿದ್ರೆ, ಇನ್ನು ಕೆಲವು ಕಡೆ ಕೂತಿರುವ ಕಟೌಟ್ ಹಾಕಲಾಗಿದೆ.

ಒತ್ತಾಯದಿಂದ ಪಾತ್ರ ಮಾಡಿಸಿದ್ದರು
ಅಂದ್ಹಾಗೆ, ಕುರುಕ್ಷೇತ್ರ ಚಿತ್ರದಲ್ಲಿ ನಟಿಸಲು ಅಂಬರೀಶ್ ಸಿದ್ಧವಿರಲಿಲ್ಲ. ಆರೋಗ್ಯದ ಕಾರಣದಿಂದ ಭೀಷ್ಮನ ಪಾತ್ರ ನಿರ್ವಹಿಸಲು ಅಂಬಿ ಹಿಂದೇಟು ಹಾಕಿದ್ದರು. ಆದ್ರೆ, ಮುನಿರತ್ನ ಹಾಗೂ ದರ್ಶನ್ ಅವರ ಒತ್ತಾಯದಿಂದ ಈ ಪಾತ್ರ ಮಾಡಿದರು. ಆದರೆ, ಈ ಸಿನಿಮಾ ನೋಡದೆ ಅಂಬಿ ಇಹಲೋಕ ತ್ಯಜಿಸುವಂತಾಯಿತು.


Click it and Unblock the Notifications











