ಸಂಪೂರ್ಣ ಆಸ್ತಿಯನ್ನು ಪುತ್ರನ ಹೆಸರಿಗೆ ಬರೆದ ರೆಬೆಲ್ ಸ್ಟಾರ್
Recommended Video

ನಟ, ಮಾಜಿ ಸಚಿವ ಅಂಬರೀಶ್ ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಪುತ್ರ ಅಭಿಷೇಕ್ ಹೆಸರಿಗೆ ಬರೆದಿದ್ದಾರೆ. ಏಳೂವರೆ ಎಕರೆ ಜಮೀನಿಗೆ ಒಡೆಯನಾಗಿದ್ದ ಅಂಬಿ ಏಕಾಏಕಿ ಪುತ್ರನ ಹೆಸರಿಗೆ ಆಸ್ತಿ ಬರೆದಿರುವುದು ಅಭಿಮಾನಿಗಳಿಗೆ ಆಶ್ಚರ್ಯ ತರಿಸಿದೆ. ಇತ್ತೀಚಿಗಷ್ಟೆ ಪುತ್ರನ ಹೆಸರಿಗೆ ವಿಲ್ ಮಾಡುವ ಮೂಲಕ ಪುತ್ರನಿಗೆ ಆಸ್ತಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದಾರೆ.
ನಟನಾಗಿ, ರಾಜಕಾರಣಿಯಾಗಿದ್ದ ಅಂಬರೀಶ್ ಒಂದಷ್ಟು ಆಸ್ತಿಯನ್ನು ಮಾಡಿಟ್ಟಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸ್ವಂತ ಮನೆಯಿದ್ದರೂ ಕೂಡ ತನ್ನ ಹುಟ್ಟೂರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆಯಲ್ಲಿ ಏಳೂವರೆ ಎಕರೆ ಜಮೀನು ಹೊಂದಿದ್ದರು. ಅದನ್ನು ಇದೀಗ ಪುತ್ರ ಅಭಿಷೇಕ್ ಗೌಡರ ಹೆಸರಿಗೆ ಮಾಡುವ ಮೂಲಕ ನಿರಾಳರಾಗಿದ್ದಾರೆ.

ವಿಲ್ ಗೆ ಸಂಬಂಧಿಸಿದಂತೆ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಗೌಡ ಇತ್ತೀಚಿಗಷ್ಟೆ ಮದ್ದೂರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ಪ್ರಕ್ರಿಯೆಗಳನ್ನು ಮುಗಿಸಿ ಸಂಜೆ ಬೆಂಗಳೂರಿಗೆ ಹಿಂತಿರುಗಿದರು. ಅಭಿಷೇಕ್ ಈಗಾಗಲೇ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು ಅದರ ಜೊತೆ ಜೊತೆಗೆ ಅಂಬರೀಶ್ ಅವರ ಉದ್ಯಮದ ಬಗ್ಗೆಯೂ ಗಮನ ಹರಿಸಿದ್ದಾರೆ.

ಮಗ ಜವಾಬ್ದಾರಿ ತೆಗೆದುಕೊಳ್ಳುವಂತಾಗಿದ್ದಾನೆ ಎಂದು ತಿಳಿದ ರೆಬೆಲ್ ಸ್ಟಾರ್ ತಡ ಮಾಡದೆ ಹುಟ್ಟೂರಿನಲ್ಲಿದ್ದ ಸಂಪೂರ್ಣ ಆಸ್ತಿಯನ್ನು ಅಭಿಷೇಕ್ ಹೆಸರಿಗೆ ಬರೆದಿದ್ದಾರೆ. ಅಂಬರೀಶ್ ಪುತ್ರನ ಜೊತೆಗೆ ಮಂಡ್ಯಗೆ ಬಂದಿರುವ ವಿಷಯ ತಿಳಿದ ಒಂದಷ್ಟು ಅಭಿಮಾನಿಗಳು ಆಗಮಿಸಿ ರೆಬೆಲ್ ಸ್ಟಾರ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದು ನಡೆಯಿತು. ಕೆಲವರು ದೂರದಿಂದಲೇ ಕುತೂಹಲದಿಂದ ನೋಡುತ್ತಾ ನಿಂತರೆ ಇನ್ನು ಕೆಲವರು ಹತ್ತಿರ ತೆರಳಿ ಮಾತನಾಡಿಸಿ ಅಂಬರೀಶ್ ಹಾಗೂ ಅಭಿಷೇಕ್ ಗೌಡ ಅವರ ಜತೆಗೆ ಕೂತು, ನಿಂತು ಫೋಟೋ ತೆಗೆಸಿಕೊಂಡು ಬೀಗಿದರು.


Click it and Unblock the Notifications











