ಹುಟ್ಟುಹಬ್ಬದಂದು ಅಚ್ಚರಿ ಉಂಟು ಮಾಡಿದ ಅಂಬಿ ಹೇಳಿಕೆ
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು, ಆತ್ಮೀಯರು ಹೀಗೆ ಪ್ರತಿಯೊಬ್ಬರು ಒಂದೊಂದು ರೀತಿಯಲ್ಲಿ ಉಡುಗೊರೆ ನೀಡಿ ಶುಭ ಕೋರಿದ್ದಾರೆ.
ಅಂಬಿ ಹುಟ್ಟುಹಬ್ಬಕ್ಕೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೀಗೆ, ಸಂತೋಷದಲ್ಲಿದ್ದ ಅಭಿಮಾನಿಗಳಿಗೆ ಮಂಡ್ಯದ ಗಂಡು ಅಚ್ಚರಿ ನೀಡಿ ಚರ್ಚೆಗೆ ಕಾರಣವಾಗಿದ್ದಾರೆ.
ಹೌದು, ಕರ್ನಾಟಕ ವಿಧಾನಸಭೆ ಚುನಾವಣೆಯಿಂದ ದೂರ ಉಳಿದಿದ್ದು ಅಂಬರೀಶ್ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಈ ಹೇಳಿಕೆ ಗಮನಿಸಿದ್ರೆ, ಬಹುಶಃ ಅಂಬರೀಶ್ ಅವರ ರಾಜಕೀಯ ಜೀವನಕ್ಕೆ ಬಹುತೇಕ ಅಂತ್ಯವಾಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಅಷ್ಟಕ್ಕೂ, ಅಂಬರೀಶ್ ಹೇಳಿದ್ದೇನು.? ಮುಂದೆ ಓದಿ.....

ರಾಜಕಾರಣದಿಂದ ಹೊರಗಿದ್ದು ಆರಾಮಾಗಿದ್ದೇನೆ
ಅಂಬರೀಶ್ ಅವರು ಚುನಾವಣೆಯ ಯಾವುದೇ ಚಟುವಟಿಕೆಯಲ್ಲೂ ಭಾಗಿಯಾಗಿರಲಿಲ್ಲ. ಈ ನಡುವೆ, ಸಿನಿಮಾ ಶೂಟಿಂಗ್, ಸಿನಿಮಾ ಕಾರ್ಯಕ್ರಮಗಳು, ಪತ್ನಿಯ ಶೂಟಿಂಗ್ ನೋಡಲು ಹೋಗಿದ್ದು, ಈಗ ಅಂಬಿ ಮಗನ ಸಿನಿಮಾಗೆ ಚಾಲನೆ ನೀಡಿ ಆರಾಮಾಗಿದ್ದಾರೆ. ಇದನ್ನೆ ಅಂಬಿ ಇಂದು ಕೂಡ ಹೇಳಿದರು. ''ರಾಜಕಾರಣದಿಂದ ಹೊರಗಿದ್ದು ಆರಾಮಾಗಿದ್ದೇನೆ'' ಎಂದು ಪರೋಕ್ಷವಾಗಿ ರಾಜಕೀಯಕ್ಕೆ ಬ್ರೇಕ್ ಹಾಕುವ ಸೂಚನೆ ನೀಡಿದ್ದಾರೆ.

ರಾಮನಗರದಿಂದ ಸ್ಪರ್ಧೆ ಇಲ್ಲ
ಮಂಡ್ಯ ಚುನಾವಣೆ ಅಖಾಡದಿಂದ ಹಿಂದೆ ಸರಿದಿದ್ದ ಅಂಬರೀಶ್ ನಂತರ ಜೆಡಿಎಸ್ ಗೆ ಬೆಂಬಲ ನೀಡಿದ್ದರು. ಅದರ ಪರಿಣಾಮ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗ್ತಾರೆ ಎಂಬ ಮಾತುಗಳು ಕೇಳಿಬಂದ್ವು. ಇದೀಗ, ಇದೇ ಲೆಕ್ಕಾಚಾರದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರಿಂದ ತೆರೆವಾಗಿರುವ ರಾಮನಗರ ವಿಧಾನಸಭೆಯ ಬೈ ಎಲೆಕ್ಷನ್ ನಲ್ಲಿ ಅಂಬಿ ಸ್ಪರ್ಧೆ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ, ಅದನ್ನ ಅಂಬರೀಶ್ ಅವರು ತಳ್ಳಿ ಹಾಕಿದ್ದಾರೆ.

ಮಂಡ್ಯ ನಂದು, ರಾಮನಗರಕ್ಕೆ ಯಾಕೆ ಹೋಗ್ಲಿ.?
''ರಾಜಕಾರಣವನ್ನ ನಾನು ಬಿಟ್ರು, ರಾಜಕಾರಣ ನನ್ನನ್ನ ಬಿಡಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಸೋಲಲು ನಾನು ಕಾರಣನಲ್ಲ. ಮಂಡ್ಯ ನಂದು, ನಾನ್ಯಾಕೆ ರಾಮನಗರಕ್ಕೆ ಹೋಗ್ಲಿ. ರಾಮನಗರದಿಂದ ಸ್ಪರ್ಧೆ ಮಾಡಲ್ಲ'' ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಎಂಪಿ ಎಲೆಕ್ಷನ್ ನಿಂದಲೂ ಹಿಂದೆ.!
ಇನ್ನು ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಬಹುಶಃ ಎಂಪಿ ಅಭ್ಯರ್ಥಿಯಾಗಿ ಅಂಬರೀಶ್ ಸ್ಪರ್ಧೆ ಮಾಡಬಹುದು ಎಂಬ ನಿರೀಕ್ಷೆ ರಾಜಕೀಯ ವಲಯ ಹಾಗೂ ಅಭಿಮಾನಿಗಳನ್ನ ಕಾಡುತ್ತಿತ್ತು. ಆದ್ರೆ, ಈ ಬಗ್ಗೆಯೂ ಉತ್ತರಿಸಿರುವ ಅಂಬರೀಶ್, ''ಎಂಪಿ ಎಲೆಕ್ಷನ್ ನಲ್ಲೂ ಸ್ಪರ್ಧೆ ಮಾಡಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯಕ್ಕೆ ಶಾಶ್ವತವಾಗಿ ಗುಡ್ ಬೈ.!
ಈ ಎಲ್ಲ ಬೆಳವಣಿಗೆಗಳನ್ನ ಗಮನಿಸಿದ್ರೆ, ಬಹುಶಃ ಅಂಬರೀಶ್ ಅವರು ಸಂಪೂರ್ಣವಾಗಿ ರಾಜಕೀಯದಿಂದ ಹಿಂದೆ ಸರಿಯಬಹುದು ಎನ್ನಲಾಗುತ್ತಿದೆ. ಕೇಂದ್ರ ಸಚಿವ, ರಾಜ್ಯದಲ್ಲಿ ಸಚಿವರಾಗಿದ್ದ ರಾಜಕಾರಣಿ ಈಗ ಚುನಾವಣೆಗೂ ನಿಲ್ಲೋದಿಲ್ಲ, ಅಭ್ಯರ್ಥಿಗಳ ಪರವೂ ಪ್ರಚಾರ ಮಾಡಲ್ಲ ಅಂದ್ರೆ ಬಹುಶಃ ಇದು ರಾಜಕೀಯ ನಿವೃತ್ತಿಯೇ ಎನ್ನುತ್ತಿದ್ದಾರೆ.

'ಅಂಬಿ ನಿಂಗ್ ವಯಸ್ಸಾಯ್ತೋ' ಟೀಸರ್ ಬಂತು
ಇನ್ನು ಅಂಬರೀಶ್ ನಾಯಕನಾಗಿ ಅಭಿನಯಿಸುತ್ತಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪೋಷಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಅಂಬಿ, ಈ ಚಿತ್ರದಲ್ಲಿ ಸಂಪೂರ್ಣ ನಾಯಕನಾಗಿ ಮತ್ತೆ ಕಣಕ್ಕಿಳಿದಿದ್ದಾರೆ. ಈಗಾಗಲೇ ಮೇಕಿಂಗ್ ಮೂಲಕ ಕುತೂಹಲ ಮೂಡಿಸಿರುವ ಅಂಬಿ ಇದೇ ವರ್ಷ ತೆರೆಕಾಣುತ್ತಿದೆ.


Click it and Unblock the Notifications











