»   » ಸಂಕ್ರಾಂತಿ ನಂತರ ಭಕ್ತ ಅಂಬರೀಶ ಚಿತ್ರೀಕರಣ ?

ಸಂಕ್ರಾಂತಿ ನಂತರ ಭಕ್ತ ಅಂಬರೀಶ ಚಿತ್ರೀಕರಣ ?

Posted By: Staff
Subscribe to Filmibeat Kannada

108 ದಿನಗಳ ಕಾಲ ಅಣ್ಣಾವ್ರ ಬಿಡುಗಡೆಗೆ ಕಾದ ಅಭಿಮಾನಿಗಳು ಈಗ ಕಾತುರದಿಂದ ಕಾದಿರುವುದು ರಾಜ್‌ಕುಮಾರ್‌ ಅಭಿನಯದ ಭಕ್ತ ಅಂಬರೀಶ ಚಿತ್ರದ ಬಿಡುಗಡೆಗೆ.

ಅದೇನೋ ಹೇಳ್ತಾರಲ್ಲ .... ವಿಘ್ನೕಶ್ವರನ ಮದುವೆಗೇ ನೂರೆಂಟು ವಿಘ್ನ ಅಂತ. ಹಾಗೆ ರಾಜ್‌ಕುಮಾರ್‌ ದ್ವಿಪಾತ್ರಾಭಿನಯದ ಈ ಚಿತ್ರಕ್ಕೆ ಚಿತ್ರೀಕರಣ ಆರಂಭವಾದ ದಿನದಿಂದಲೂಒಂದಲ್ಲ ಒಂದು ವಿಘ್ನ ಬರ್ತಾನೇ ಇದೆ.

ಆರಂಭದಲ್ಲೇ ಭಕ್ತ ಅಂಬರೀಶ ಚಿತ್ರದ ಚಿತ್ರೀಕರಣಕ್ಕೆ ಮೈಸೂರು ಅರಮನೆಯನ್ನು ನೀಡಲು ನಿರಾಕರಣೆ. ಮೈಸೂರು ಅರಮನೆ ಇಲ್ದೇ ಇದ್ರೆ ಏನು, ರಾಮೋಜಿ ರಾವ್‌ ಮನೆಯೇ ಸಾಕು ಎಂದು ತೀರ್ಮಾನ ಬೀಳೋ ಹೊತ್ಗೆ ಅಂತೂ ಅರಮನೆ ವಿವಾದ ಇತ್ಯರ್ಥ ಆಯ್ತು.

ಆಗಸ್ಟ್‌ ಮೊದಲ ವಾರದಲ್ಲೇ ಚಿತ್ರೀಕರಣ ಭರದಿಂದ ಸಾಗುತ್ತದೆ ಎಂಬ ಸೂಚನೆ ದೊರಕಿದ್ದ ಸಂದರ್ಭದಲ್ಲಿ ವೀರಪ್ಪನ್‌ ಎಂಬ ಕಾಡುಗಳ್ಳ ಭಕ್ತ ಅಂಬರೀಶರಾಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳಲಿದ್ದ ರಾಜ್‌ರಿಗೆ ವನವಾಸವನ್ನೇ ಮಾಡಿಸಿಬಿಟ್ಟ.

ಈಗ ಎಲ್ಲ ಸುಖಾಂತವಾಗಿದೆ. ರಾಜ್‌ ನಾಡಿಗೆ ಮರಳಿದ್ದಾರೆ. ವನವಾಸದ ಆಘಾತಗಳಿಂದ ನಿಧಾನವಾಗಿ ಹೊರಬರುತ್ತಿದ್ದಾರೆ. ಮೊನ್ನೆ ಭಾನುವಾರ ಬಸವನಗುಡಿ ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ನಡೆದ ಧನ್ಯ ಮಿಲನ ಕಾರ್ಯಕ್ರಮದಲ್ಲಿ ಹಾಡಿ ಕುಣಿದಿದ್ದಾರೆ. ಮನಬಿಚ್ಚಿ ಮಾತನಾಡಿದ್ದಾರೆ. ಅಂದಿನ ಅವರ ಲವಲವಿಕೆ ನೋಡಿದಾಗ ರಾಜ್‌ ಮತ್ತೆ ಸಹಜತೆಯತ್ತ ಬಂದಿದ್ದಾರೆ ಎಂದು ಎಲ್ಲರಿಗೂ ಅನ್ನಿಸಿತು.

ಇನ್ನೂ ಒಂದು ತಿಂಗಳ ವಿಶ್ರಾಂತಿ ಬಳಿಕ ರಾಜ್‌ ಮತ್ತೆ ಬಣ್ಣ ಹಚ್ಚಲಿದ್ದಾರೆ. ಭಕ್ತ ಅಂಬರೀಶ ತೆರೆಕಾಣುವ ದಿನ ದೂರವಿಲ್ಲ.

ಸಂಕ್ರಮಣಾ ನಂತರ : ಜನವರಿ ತಿಂಗಳ 15ರ ಬಳಿಕ ಅಂದರೆ ಮಕರ ಸಂಕ್ರಮಣ ಕಳೆದ ತರುವಾಯ ಮತ್ತೆ ಶುಭ ಮುಹೂರ್ತದಲ್ಲಿ ಭಕ್ತ ಅಂಬರೀಶ ಚಿತ್ರದ ಚಿತ್ರೀಕರಣ ಆರಂಭ ವಾಗಲಿದೆ ಎಂಬ ಸುಳಿವನ್ನು ರಾಜ್‌ಕುಮಾರ್‌ ಅವರ ಹಿರಿಯ ಪುತ್ರ ಶಿವರಾಜ್‌ ನೀಡಿದ್ದಾರೆ.

ಅಪ್ಪಾಜಿ ಅಪಹರಣ ಆಗ್ದೇ ಇದ್ದಿದ್ರೇ ಇಷ್ಟು ಹೊತ್ತಿಗೆ ಬಹುತೇಕ ಚಿತ್ರದ ಚಿತ್ರೀಕರಣ ಮುಗಿದೇ ಹೋಗಿರ್ತಿತ್ತು ಎಂದೂ ಹೇಳಿದ್ದಾರೆ. ಅಂತೂ ಮತ್ತೆ ಚಿತ್ರ ಸೆಟ್‌ ಏರಲಿದೆ ಎಂದು ಶಿವರಾಜೇ ಹೇಳಿರುವ ಹಿನ್ನೆಲೆಯಲ್ಲಿ ರಾಜ್‌ ಮರಳಿ ನಾಡಿಗೆ ಬಂದಮೇಲೆ ಚಿತ್ರದಲ್ಲಿ ಅಭಿನಯಿಸುತ್ತಾರೋ ಇಲ್ಲವೋ ಎಂಬ ಅನುಮಾನ ಪರಿಹಾರ ಆಗಿದೆ.

ಈಗ ರಾಜ್‌ ಅಭಿಮಾನಿಗಳು ತಮ್ಮ ಆರಾಧ್ಯ ದೈವ ರಾಜ್‌ಕುಮಾರ್‌ ಅವರನ್ನು ದ್ವಿಪಾತ್ರದಲ್ಲಿ ಕಾಣಲು ತವಕಿಸುತ್ತಿದ್ದಾರೆ.

English summary
rajkumars latest movie to resume shooting by jan, 15
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada