»   » ಅಂಬರೀಶ್‌ - ಸುಮಲತಾ ಪುನರ್‌ಮಿಲನ!

ಅಂಬರೀಶ್‌ - ಸುಮಲತಾ ಪುನರ್‌ಮಿಲನ!

Posted By: Staff
Subscribe to Filmibeat Kannada

ರೆಬೆಲ್‌ ಸ್ಟಾರ್‌ ಅಂಬಿ ಮೊನ್ನೆ ಫುಲ್‌ ಬದಲಾಗಿ ಹೋಗಿದ್ದರು. ಸಾಮಾನ್ಯವಾಗಿ ಕೈಲಿ ಸಿಗರೇಟ್‌, ಗನ್‌ ಹಿಡಿದು ಹೊಡೆದಾಟದ ಪಾತ್ರಗಳಿಗೆ ಅಣಿಯಾಗುತ್ತಿದ್ದ ಅಂಬರೀಶ್‌ ಶ್ವೇತವರ್ಣದ ಪಟ್ಟೆ ಪೀತಾಂಬರ ಸೀರೆ ಉಟ್ಟು, ಮಹಾರಾಣಿಯಂತೆ ಕಂಗೊಳಿಸುತ್ತಿದ್ದ ತಮ್ಮ ಧರ್ಮಕಾಂತೆ ಸುಮಲತಾ ಅವರೊಂದಿಗೆ ಬಿಳಿಯ ಜರಿ ಪಂಚೆಯನುಟ್ಟು, ಶಲ್ಯವ ಧರಿಸಿ, ಕೈಗಳಿಗೆ ತೋಳುಬಂಧಿಯ ನೇರಿಸಿ, ಹಣೆಯ ಮೇಲೆ ಎದ್ದು ಕಾಣುವಂತೆ ವಿಭೂತಿ ಧರಿಸಿ ಮಹಾರಾಜನಂತೆ ಕಾಣುತ್ತಿದ್ದರು.

ಈ ಕಾಸ್ಟ್ಯೂಮ್‌ನಲ್ಲಿ ಅಂಬರೀಶ್‌ ದಂಪತಿಗಳನ್ನು ಕಂಡವರು ತಮ್ಮೆದುರು ಯಾವುದೋ ರಾಜ್ಯದ ರಾಜ - ರಾಣಿ ಬಂದಿದ್ದಾರೆ ಎಂದು ಕೊಂಡರು. ಇಂತಹ ಒಂದು ಪಾತ್ರದಲ್ಲಿ ಹಿಂದೆಂದೂ ಅಂಬರೀಶ್‌ ಕಾಣಿಸಿಕೊಂಡಿದ್ದಿಲ್ಲ. ಸಾಮಾನ್ಯವಾಗಿ ಅವರ ಪರ್ಸನಾಲಿಟಿಗೆ ಸೂಟ್‌ ಆಗುವ ಹೊಡೆದಾಟದ ವೇಷಭೂಷಣ ಅಂದು ಮರೆಯಾಗಿತ್ತು.

ಅಂಬರೀಶ್‌ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಒಂದು ಪಾತ್ರ ಮಾಡುತ್ತಿರುವುದಕ್ಕೆ ಹೆಮ್ಮೆ, ಖುಷಿ ಇತ್ತು. ಅಂತೂ ಅಂಬಿ ದಂಪತಿಗಳಿಗೆ ರಾಜಯೋಗ ಪ್ರಾಪ್ತವಾದದ್ದು, ಶ್ರೀಮಂಜುನಾಥನ ಕೃಪೆಯಿಂದ. ಅದಕ್ಕೆ ತಕ್ಕಂತೆ ಎಲ್ಲವೂ ದೈವಕೃಪೆ ಎಂದರು ಅಂಬರೀಶ್‌.

ಬಹು ನಾಯಕ - ನಾಯಕಿಯರ ಶ್ರೀಮಂಜುನಾಥ ಚಿತ್ರದಲ್ಲಿ ಅಂಬರೀಶ್‌ ಮಂಜುನಾಥ ಸ್ವಾಮಿಯ ಭಕ್ತನಾದ ಮಹಾರಾಜನ ಪಾತ್ರ ವಹಿಸುತ್ತಿದ್ದಾರೆ. ನೈಜ ಜೀವನದಲ್ಲೂ ಬಾಳ ಸಂಗಾತಿಯಾಗಿರುವ ಚಿತ್ರನಟಿ ಸುಮಲತಾರೇ ಈ ಚಿತ್ರದಲ್ಲೂ ಅಂಬರೀಶ್‌ ಜೋಡಿ. ಅರ್ಥಾತ್‌ ಮಹಾರಾಣಿ. ಒಲವಿನ ಕಾಣಿಕೆ ಚಿತ್ರದ ಬಳಿಕ ಅಂಬರೀಶ್‌ - ಸುಮಲತಾ ಜೋಡಿಯಾಗಿ ಅಭಿನಯಿಸಿ ಹತ್ತಿರ ಹತ್ತಿರ 10 ವರ್ಷಗಳೇ ಕಳೆದವು. ಮಂಜುನಾಥ ಈ ಇಬ್ಬರನ್ನೂ ಮತ್ತೆ ಚಿತ್ರರಂಗದಲ್ಲಿ ಬೆಸೆದಿದ್ದಾನೆ.

ಈ ಸಂತಸದ ಸಂದರ್ಭದಲ್ಲಿ ನೆಲದ ಮೇಲೆ ಪದ್ಮಾಸನ ಹಾಕಿ ಪತ್ನಿಯಾಂದಿಗೆ ಕುಳಿತ ಅಂಬರೀಶ್‌ ಶಿವನನ್ನು ಪೂಜಿಸುವ ದೃಶ್ಯದ ಚಿತ್ರೀಕರಣವೂ ಅಂದು ನಡೆಯಿತು. ಬೆಂಗಳೂರು ಅರಮನೆಯ ಒಂದು ಭಾಗದಲ್ಲಿ ವಿಶೇಷವಾಗಿ ಸಿದ್ಧಪಡಿಸಿದ್ದ ಸೆಟ್‌ನಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್‌ ನಿರ್ದೇಶನದಂತೆ ದೃಶ್ಯದ ಚಿತ್ರೀಕರಣ ನಡೆಯಿತು.

ಈ ರಾಜದಂಪತಿಗಳ ಸುತ್ತ ಉಮೇಶ್‌, ಸ್ವಾತಿಯೇ ಮೊದಲಾದ ನೂರಾರು ಸಹ ಕಲಾವಿದರಿದ್ದರು, ಅರಮನೆ ಸುಂದರವಾದ ಶಿವಲಿಂಗ ಹಾಗೂ ಬೆಳಗುತ್ತಿದ್ದ ನೂರಾರು ನಂದಾ ದೀಪಗಳಿಂದ ಜಗಮಗಿಸುತ್ತಿತ್ತು. ಆಕಾಶವೇ ಆಕಾರ, ಭೂಮಿಯೇ ವಿಭೂತಿ, ಅಗ್ನಿಯೇ ತ್ರಿನೇತ್ರ, ವಾಯುವೇ ಚಲನ, ಜಲವೇ ಜಗವಾಳುವ ಮಂದಹಾಸ..... ಎಂಬ ಭಕ್ತಿಗೀತೆಯನ್ನು ಈ ರಾಜ ದಂಪತಿಗಳು ಹಾಡಿದರು. ಸಹ ಕಲಾವಿದರು ದನಿಗೂಡಿಸಿದರು.

ಜಯಶ್ರೀ ದೇವಿ ನಿರ್ಮಿಸುತ್ತಿರುವ ಶ್ರೀಮಂಜುನಾಥ ಚಿತ್ರದಲ್ಲಿ ಸೂಪರ್‌ ಸ್ಟಾರ್‌ಗಳ ಮೇಳವೇ ಇದೆ. ಅಂಬರೀಶ್‌, ಅರ್ಜುನ್‌ಸರ್ಜಾ, ಸೂಪರ್‌ಸ್ಟಾರ್‌ ಚಿರಂಜೀವಿ, ದ್ವಾರಕೀಶ್‌, ಸುಮಲತಾ, ಸೌಂದರ್ಯ, ರಮ್ಯಕೃಷ್ಣ, ಮೋಹಕ ಬೆಡಗಿ ಮೀನಾ, ಸಾಂಘವಿ ಮೊದಲಾದವರಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿ ಶ್ರೀಮಂಜುನಾಥನಾಗಿ ಪ್ರತ್ಯಕ್ಷವಾಗುತ್ತಿದ್ದಾರೆ. ಇಷ್ಟೊಂದು ಜನ ಸೂಪರ್‌ ಸ್ಟಾರ್‌ ಹಾಗೂ ಸ್ಟಾರಿಣಿಗಳನ್ನು ಒಂದೇ ಚಿತ್ರದಲ್ಲಿ ಕಲೆಹಾಕಿರುವ ನಿರ್ಮಾಪಕರ ಸಾಹಸ ಮೆಚ್ಚುವಂಥದ್ದೇ.

English summary
On the sets : Ambareesh starrer Srimanjunatha

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada