Just In
Don't Miss!
- News
Jharkhand Assembly Elections 2019 Polling LIVE : 2ನೇ ಹಂತದ ಮತದಾನ ಅಪ್ಡೇಟ್ಸ್
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Technology
ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ರಿಕವರ್ ಮಾಡುವುದು ಹೇಗೆ?
- Lifestyle
ಯಾವ ಸೆಲೆಬ್ರೆಟಿಯೂ ಈ 5 ಬ್ಯೂಟಿ ಸೀಕ್ರೆಟ್ ನಿಮಗೆ ಹೇಳುವುದೇ ಇಲ್ಲ!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ದಾವಣಗೆರೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅಂಬಿ, ಈ ಮುನ್ನ ಇಷ್ಟೊಂದು ಅದ್ಧೂರಿ ಸಮಾರಂಭದ ಕೇಂದ್ರವಾಗಿದ್ದನ್ನು ನೀವು ಕಂಡಿರಾ..
ಅಂಬರೀಷ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ, ಅದೂ ಅಭಿಮಾನಿಗಳ ಸಮ್ಮುಖದಲ್ಲಿ . ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುವುದು ಮಂಡ್ಯ.. ಉಹ್ಞೂಂ ಮೈಸೂರೂ ಅಲ್ಲ - ದೂರದ ಹತ್ತಿ ಗಿರಣಿಗಳ ತವರು ದಾವಣಗೆರೆಯಲ್ಲಿ .
ಮೇ 28 ರಂದು ಕಾರ್ಯಕ್ರಮ ನಡೆಸಲು ದಾವಣಗೆರೆ ಜಿಲ್ಲಾ ನಾಗರಿಕ ಸಮಿತಿಯಾಂದಿಗೆ ಅಂಬಿ ಅಭಿಮಾನಿಗಳು ಟೊಂಕ ಕಟ್ಟಿದ್ದಾರೆ. ಅಲ್ಲಿಗೆ, ಜಿಲ್ಲಾಕೇಂದ್ರಗಳಿಗೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ದೋಸ್ತ್ ವಿಷ್ಣುವರ್ಧನ್ ಅವರ ಶೈಲಿಯನ್ನು ಅಂಬರೀಷ್ ಅನುಸರಿಸಿದಂತಾಯಿತು. ಅಥವಾ ಅಂಬಿ ಅಭಿಮಾನಿಗಳು ವಿಷ್ಣುಸೇನೆಗೆ ತಾವೇನು ಕಮ್ಮಿ ಎಂದು ಅಂದುಕೊಂಡಿರಲೂಬಹುದು.
ಅಂಬರೀಷ್ ಈಗ ಸುದ್ದಿಯಲ್ಲಿರುವುದು ಹುಟ್ಟುಹಬ್ಬದ ಮೂಲಕವಲ್ಲ . ಅಥವಾ ಮಂಡ್ಯದ ಮತ್ತೊಬ್ಬ ಗಂಡು, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೊಂದಿಗಿನ ಮುನಿಸಿನಿಂದಲೂ ಅಲ್ಲ . ಅವರಿಗೆ ದಾವಣಗೆರೆಯಲ್ಲಿ ವಜ್ರ ಕಿರೀಟ ತೊಡಿಸಲಾಗುತ್ತಿದೆ ಹಾಗೂ ಕಲಾ ಸಾರ್ವಭೌಮ ಎನ್ನುವ ಬಿರುದನ್ನು ಪ್ರದಾನ ಮಾಡಲಾಗುತ್ತಿದೆ ಎನ್ನುವುದೇ ಸುದ್ದಿಯ ತಿರುಳು.
ಮೊನ್ನೆಯಷ್ಟೇ ಮೈಸೂರಿನಲ್ಲಿ ಉಪ್ಪಿಗೆ ವಜ್ರದ ಕಿರೀಟ ತೊಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದರು. ಕಳೆದ ವಾರವಷ್ಟೆ ಕಂಠೀರವ ಕ್ರೀಡಾಂಗಣದಲ್ಲಿ ಜರುಗಿದ ಯಜಮಾನ ಸಿನಿಮಾದ ಸಿಲ್ವರ್ ಜ್ಯುಬಿಲಿ ಸಮಾರಂಭದಲ್ಲಿ ವಿಷ್ಣು ಅವರಿಗೆ ಅಭಿಮಾನಿಗಳು ಬಂಗಾರದ ಕಿರೀಟ ತೊಡಿಸಿದ್ದರು. ಈಗ ಅಂಬಿ ಅಭಿಮಾನಿಗಳ ಸರದಿ. ಇದರೊಂದಿಗೆ ಮೂವರು ನಾಯಕರು ಒಂದೇ ತಿಂಗಳಲ್ಲಿ ಕಿರೀಟ ತೊಟ್ಟಂತಾಗುತ್ತದೆ. ಮೇ ಮಾಹೆಗೆ ಜೈ !
ಮೆಚ್ಚಿದ ನಾಯಕರಿಗೆ ಕಿರೀಟ ತೊಡಿಸುವ ಟ್ರೆಂಡ್ ಇತ್ತೀಚೆಗೆ ಹೆಚ್ಚುತ್ತಿದೆ, ಇದು ತಪ್ಪೆಂದೇನಲ್ಲ . ನಾಯಕ- ಅಭಿಮಾನಿಗಳ ಸಂಭ್ರಮವನ್ನು ತಪ್ಪೆನ್ನಲ್ಲಿಕ್ಕೆ ಸಾಧ್ಯವಿಲ್ಲ . ಆದರೆ, ಉಪ್ಪಿಗೆ ಕಿರೀಟ ತೊಡಿಸಿದ ಸಂದರ್ಭದಲ್ಲಿ , ಕಿರೀಟ ತೊಡಿಸಿದ ಹಾಯ್ ಬೆಂಗಳೂರ್‌ನ ರವಿ ಬೆಳಗೆರೆ - ಉಪ್ಪಿ ಕಿರೀಟವನ್ನು ಮಾರಿ ಗುಜರಾತ್ ಸಂತ್ರಸ್ತರಿಗೆ ಆ ಹಣವನ್ನು ಕೊಡುಗೆ ನೀಡಲು ಸೂಚಿಸಿದ್ದರು. ಅಭಿಮಾನಿಗಳ ಅಭಿಮಾನವನ್ನು ಮಾರಲು ಉಪೇಂದ್ರ ಒಪ್ಪಲಿಲ್ಲ ಅನ್ನಿ . ಅವರ ಪ್ರಕಾರ, ಸಂತ್ರಸ್ತರಿಗೆ ನೀಡುವ ಕೊಡುಗೆ ಎಂದರೆ ಗುಳುಂ ಗುಳುಂ. ಕೊಡುಗೆ ನೀಡಿದ ಲಕ್ಷಾಂತರ ಕೈಗಳನ್ನು ಉಪ್ಪಿ ಅವಮಾನಿಸಿದರೇ ? ಕಾರ್ಗಿಲ್ ಮೃತ ಯೋಧರ ಕುಟುಂಬಗಳ (ಮಕ್ಕಳು) ನೆರವಿಗಾಗಿ ಪ್ರತಿವರ್ಷ ಇಂತಿಷ್ಟೆಂದು ನೆರವು ನೀಡುವುದಾಗಿ ಈ ಮುನ್ನ ಹೇಳಿದ್ದನ್ನು ಉಪೇಂದ್ರ ಮರೆತರಾ? ಅಂದಹಾಗೆ, ಉಪ್ಪಿ ಅವರ ನೆರವು ಕಾರ್ಗಿಲ್ ಸಂತ್ರಸ್ತರಿಗೆ ಸಂದಿತಾ ?
ಉಪ್ಪಿಯಿಂದ ಮತ್ತೆ ಅಂಬರೀಷ್ ಹುಟ್ಟುಹಬ್ಬಕ್ಕೇ ಬರೋಣ. ಅವರಿಗಿದು 49 ನೆಯ ಹುಟ್ಟುಹಬ್ಬ . ಕಾರ್ಯಕ್ರಮವನ್ನು ಬರೀ ಕಿರೀಟ ತೊಡಿಸುವುದಕ್ಕೆ ಮಾತ್ರವಲ್ಲದೆ- ವಿವಿಧ ಕ್ಷೇತ್ರಗಳಲ್ಲಿ ದುಡಿದವರನ್ನು ಗೌರವಿಸುವ ಹಾಗೂ ರಕ್ತದಾನ ಶಿಬಿರ ನಡೆಸುವ ಕಾರ್ಯಕ್ರಮಗಳನ್ನೂ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಅಂಬಿಗೆ ವಜ್ರದ ಕಿರೀಟ ತೊಡಿಸಿ, ಬಿರುದನ್ನು ಪ್ರದಾನ ಮಾಡುವ ಜವಾಬ್ದಾರಿಯನ್ನು ಸಂಸದ ಶಾಮನೂರು ಶಿವಶಂಕರಪ್ಪ ಒಪ್ಪಿಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಜಿಲ್ಲಾಧಿಕಾರಿ ಪ್ಲಸ್ ಬಣ್ಣ ಬಳಿದುಕೊಂಡೂ ಅನುಭವವಿರುವ ನಟ ಕೆ. ಶಿವರಾಂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಗೆಳೆಯ ವಜ್ರದ ಕಿರೀಟ ತೊಡಿಸಿಕೊಳ್ಳುವುದನ್ನು ನೋಡಲಿಕ್ಕೆ ವಿಷ್ಣು ಇದ್ದೇ ಇರುತ್ತಾರೆ. ಜಯಪ್ರದ, ಅರ್ಚನಾ, ಶಿಲ್ಪಾ, ಪಂಚಮಿ, ಅನು ಪ್ರಭಾಕರ್, ಪ್ರಮೀಳಾ ಜೋಷಾಯ್, ಅಶೋಕ್, ಸುಂದರ್ ರಾಜ್, ಶೋಭರಾಜ್, ಟೆನ್ನಿಸ್ ಕೃಷ್ಣ , ರಾಕ್‌ಲೈನ್ ವೆಂಕಟೇಶ್ ಹಾಗೂ ಸಂದೇಶ್ ನಾಗರಾಜ್ ಅವರು ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಜಾನಪದ ಕಲಾವಿದರ ಕಲಾ ಪ್ರದರ್ಶನವೂ ಇದೆ. ಗಾಂಧಿ ಸರ್ಕಲ್ಲಿನಿಂದ ಕಾರ್ಯಕ್ರಮ ನಡೆಯುವ ನಗರಸಭಾ ಕ್ರೀಡಾಂಗಣದವರೆಗೆ ಅದ್ಧೂರಿ ಮೆರವಣಿಗೆ ಇರುವುದರಿಂದ- ಅಂದು ದಾವಣಗೆರೆ ತುಂಬಾ ಮಂಡ್ಯದ ಗಂಡಿನದೇ ದರ್ಬಾರು ಅನ್ನಲಡ್ಡಿಯಿಲ್ಲ .
ಕೊನೆಯದಾಗಿ-
ಅಂಬಿಗೆ ಇದೆಲ್ಲಾ ಪ್ರಚಾರ ಯಾಕೆ ಬೇಕಿತ್ತು ಅನ್ನುವುದು ಪ್ರಶ್ನೆ . ಯಾಕೆಂದರೆ, ಈ ಮುನ್ನ ಅಂಬಿ ಯಾವತ್ತೂ ಹುಟ್ಟುಹಬ್ಬವನ್ನು ಇಷ್ಟೊಂದು ಭರ್ಜರಿಯಾಗಿ ಆಚರಿಸಿಕೊಂಡ ನೆನಪುಗಳಿಲ್ಲ . ತಾರೆಯಾಗಿ ಉತ್ತುಂಗದಲ್ಲಿದ್ದಾಗಲೂ ಜನ ಮುಸುರುವ ಕಾರ್ಯಕ್ರಮಗಳೆಂದರೆ ಅಂಬಿಗೆ ಇರುಸು ಮುರುಸೇ. ಅಂಥಾದ್ದರಲ್ಲಿ ಐವತ್ತಕ್ಕೆ ಹತ್ತಿರವಾಗುತ್ತಿರುವಾಗ ಅವರು ಬದಲಾಗುತ್ತಿದ್ದಾರೆಯೇ ? ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ಅವರಿಗೆ ಅನ್ನಿಸುತ್ತಿದೆಯಾ ? ಈ ಸಂಭ್ರಮವೆಲ್ಲಾ ಅಭಿಮಾನಿಗಳಿಗಾ ? ಅಥವಾ ಇದೊಂದು ರಾಜಕೀಯ ರ್ಯಾಲಿಯಾ ?
ಮುಖಪುಟ / ಸ್ಯಾಂಡಲ್‌ವುಡ್