»   » ಅಮೆರಿಕಾದಲ್ಲಿ ಕನ್ನಡ ! ಕನ್ನಡ !

ಅಮೆರಿಕಾದಲ್ಲಿ ಕನ್ನಡ ! ಕನ್ನಡ !

Posted By: Staff
Subscribe to Filmibeat Kannada

ವರ್ಷದ ಹಿಂದಷ್ಟೇ ಬಾಯಿ ತೆರೆದರೆ 'ಬಿಕೆಟಿ, ಎ ಸೆಂಟರ್‌, ಬಿ ಸೆಂಟರ್‌" ಎಂದು ಪದ ಹಾಡುತ್ತಿದ್ದ ಕನ್ನಡ ನಿರ್ಮಾಪಕರ ಧಾಟಿ ಈಗ ಬದಲಾಗಿದ್ದು, ಅವರುಗಳೀಗ ಅಮೆರಿಕಾದಲ್ಲಿ ಕನ್ನಡ ಚಿತ್ರಗಳಿಗಿರುವ ಮಾರುಕಟ್ಟೆ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಂದ ಮೇಲೆ ಕನ್ನಡ ನಿರ್ಮಾಪಕರು ವಿದ್ಯಾವಂತರೂ ಬುದ್ಧಿವಂತರೂ ಆಗಿದ್ದಾರೆ ಎಂದು ತೀರ್ಮಾನಕ್ಕೆ ಬರಬಹುದು.

ಕನ್ನಡ ಚಿತ್ರಗಳ ಚಿತ್ರೀಕರಣ ಕೂಡ ಈಗ ಸಾಗರಾಚೆ ನಡೆಯುತ್ತಿದೆ, ನಾಗತಿಹಳ್ಳಿ ಚಂದ್ರಶೇಖರ್‌ ನನ್ನ ಪ್ರೀತಿಯ ಹುಡುಗಿ- ಚಿತ್ರಕ್ಕಾಗಿ ಅಮೆರಿಕಾ ಸುತ್ತಿ ಬಂದಿದ್ದಾರೆ. ಗಲಾಟೆ ಅಳಿಯಂದ್ರು ಚಿತ್ರಕ್ಕೆ ಕುಮಾರಸ್ವಾಮಿ ಮಾರಿಷಸ್‌ ಅಲೆದಾಡಿ ಬಂದಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ದಿಗ್ಗಜರು ಶೂಟಿಂಗ್‌ಗೆ ಚೀನಾಕ್ಕೆ ಹೊರಡುವ ಸಿದ್ಧತೆಯಲ್ಲಿದ್ದಾರೆ., ಅಮೆರಿಕಾ, ದುಬೈ, ಸುತ್ತಿ ಬಂದಿರುವ ರಮೇಶ್‌ ಅಲ್ಲಿ ಕನ್ನಡ ಚಿತ್ರಗಳಿಗಿರುವ ಡಿಮ್ಯಾಂಡ್‌ ಬಗ್ಗೆ ಲೆಕ್ಚರ್‌ ಕೊಡುತ್ತಿದ್ದಾರೆ. ಅಷ್ಟೇಕೆ, ಇತ್ತೀಚೆಗೆ ಹಿರಿಯ ನಟ ಲೋಕನಾಥ್‌ ತಮ್ಮ ಟೀವಿ ಸೀರಿಯಲ್‌ನ್ನು ಅಮೆರಿಕಾದಲ್ಲಿಯೇ ಶೂಟಿಂಗ್‌ ಮುಗಿಸಿದ್ದಾರೆ.

ಹಾಗಿದ್ದರೂ ಕನ್ನಡ ಚಿತ್ರಗಳನ್ನು ಅಮೆರಿಕಾಗೆ ಕೊಂಡೊಯ್ಯುವ ವಿಧಾನದ ಬಗ್ಗೆ, ಅಲ್ಲಿ ಮಾರುಕಟ್ಟೆ ಕುದುರಿಸುವ ತಂತ್ರದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ವಿಜಯಲಕ್ಷ್ಮಿ ಸಿಂಗ್‌ರಂಥ ವಿದ್ಯಾವಂತೆ ನಿರ್ಮಾಪಕಿಯ ಮಾತು ಕೇಳಿದರೆ, ಇದು ಇನ್ನಷ್ಟು ಸ್ಪಷ್ಟ. ಅಮೆರಿಕಾದಲ್ಲಿ ಮುಂಗಾರಿನ ಮಿಂಚು, ನಾನೇನೂ ಮಾಡ್ಲಿಲ್ಲ , ಯಾರಿಗೆ ಸಾಲುತ್ತೆ ಸಂಬಳ ಚಿತ್ರಗಳು ಕ್ಲಿಕ್‌ ಆಗಿವೆ ಅಂದರೂ, ಅಲ್ಲಿ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ ಎಂಬ ವಿರುದ್ಧದ ವಾದವನ್ನು ಅವರು ಮಂಡಿಸುತ್ತಾರೆ. ಹೀಗಾಗಿ ಒಂದು ಸಿನಿಮಾದ ಪ್ರಿಂಟ್‌ ಖರ್ಚು ಹುಟ್ಟುವುದು ಹೇಗೆ ಅನ್ನುವ ಪ್ರಶ್ನೆ ಅವರದು.

ಈ ಸಲುವಾಗಿಯೇ ಒಂದು ವೆಬ್‌ ಸೈಟ್‌ ಹುಟ್ಟುಹಾಕುವ ಯೋಜನೆಯೂ ಅವರಿಗಿದೆ. ಆದರೆ, ಈಗಾಗಲೇ ಚಾಲ್ತಿಯಲ್ಲಿರುವ ಸೈಟುಗಳ ಮೂಲಕವೂ ಮಾರ್ಕೆಟಿಂಗ್‌ ಮಾಡುವ ಸಾಧ್ಯತೆ ಅವರು ಯೋಚಿಸುತ್ತಿಲ್ಲ. ವೀಡಿಯೋ ಕ್ಯಾಸೆಟ್‌ ಮೂಲಕವೂ ಕನ್ನಡ ಚಿತ್ರಗಳನ್ನು ಪರದೇಶಗಳಲ್ಲಿ ಪ್ರದರ್ಶಿಸಬಹುದು ಅನ್ನುವ ವಿಚಾರವೂ ಅವರಿಗೆ ಹೊಳೆದಂತಿಲ್ಲ. ಸದ್ಯಕ್ಕೆ ಕುರಿಗಳು ಸಾರ್‌ ಕುರಿಗಳು ಚಿತ್ರದ ಮೇಲುಸ್ತುವಾರಿ ವಿಜಯಲಕ್ಷ್ಮಿ ಸಿಂಗ್‌ ಅವರದೇ. ಯಾಕೆಂದರೆ ಪತಿ ಜೈಜಗದೀಶ್‌ ಈಗ ಟೀವಿ ನಟನಾಗಿ ಬಿಜಿ.

English summary
Market situation for kannada films in america

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada