'ಯುಐ'- 'ಮ್ಯಾಕ್ಸ್' ಬಾಕ್ಸಾಫೀಸ್ ಫೈಟ್; ಕಿಚ್ಚನಿಗೆ ಉಪ್ಪಿ ಸವಾಲ್ ಹಾಕಿದ್ರಾ? ವೀಡಿಯೋ ವೈರಲ್
ಕ್ರಿಸ್‌ಮಸ್ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಕದನ ನಡೆಯಲಿದೆ. ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ 'ಯುಐ' ರಿಲೀಸ್ ಬೆನ್ನಲ್ಲೇ ಕಿಚ್ಚ 'ಮ್ಯಾಕ್ಸ್' ಸಿನಿಮಾ ಬರ್ತಿದೆ. 'ಯುಐ' ರಿಲೀಸ್ ಡೇಟ್ ಬದಲಾಗಲ್ಲ ಎಂದು ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ. ಹಾಗಾಗಿ ಎರಡೂ ಚಿತ್ರಗಳ ನಡುವೆ ಭಾರೀ ಪೈಪೋಟಿ ಏರ್ಪಡುತ್ತಿದೆ.
ಸುದೀಪ್ ಹಾಗೂ ಉಪ್ಪಿ ನಡುವೆ ಆತ್ಮೀಯ ಒಡನಾಟವಿದೆ. ಇನ್ನು 'ಯುಐ' ಚಿತ್ರದ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಹಾಗೂ ಸುದೀಪ್ ಆತ್ಮೀಯ ಸ್ನೇಹಿತರು. ಹಾಗಾಗಿ ಇಲ್ಲಿ ಯಾವುದೇ ತಿಕ್ಕಾಟ ನಡೀತಿಲ್ಲ. ಎರಡೂ ಸಿನಿಮಾಗಳು ಚೆನ್ನಾಗಿದ್ದರೆ ಪ್ರೇಕ್ಷಕರನ್ನು ಎರಡನ್ನೂ ನೋಡುತ್ತಾರೆ ಎನ್ನುವ ಲೆಕ್ಕಾಚಾರ ನಡೀತಿದೆ. ಇದೆಲ್ಲದರ ನಡುವೆ ಕಿಚ್ಚನಿಗೆ ಉಪ್ಪಿ ಸವಾಲ್ ಹಾಕಿರುವ ವೀಡಿಯೋ ವೈರಲ್ ಆಗ್ತಿದೆ.

ಈ ವರ್ಷ ಕನ್ನಡದ ಬಹುನಿರೀಕ್ಷಿತ ಚಿತ್ರಗಳು 'ಯುಐ' ಹಾಗೂ 'ಮ್ಯಾಕ್ಸ್'. ಕಾರಣಾಂತರಗಳಿಂದ ಎರಡೂ ಸಿನಿಮಾಗಳ ರಿಲೀಸ್ ತಡವಾಗಿತ್ತು. ಇದೀಗ ಒಟ್ಟೊಟ್ಟಿಗೆ ತೆರೆಗೆ ಬರುವಂತಾಗಿದೆ. ಇಷ್ಟು ದಿನ ಸುಮ್ಮನಿದ್ದು ಈಗ 5 ದಿನಗಳ ಅಂತರದಲ್ಲಿ ಸಿನಿಮಾ ರಿಲೀಸ್ ಬೇಕಿತ್ತಾ? ಎಂದು ಕೆಲವರು ಕೇಳುತ್ತಿದ್ದಾರೆ. ಒಂದೇ ದಿನ ಎರಡು ದೊಡ್ಡ ಚಿತ್ರಗಳು ತೆರೆಕಂಡ ಉದಾಹರಣೆಗಳಿವೆ. ಹಾಗಿರುವಾಗ 5 ದಿನ ಅಂತರ ಇದೆ ಬಿಡಿ ಎನ್ನುವ ವಾದ ಕೆಲವರದ್ದು.
ಬಹಳ ದಿನಗಳ ಬಳಿಕ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸಿನಿಮಾ 'ಯುಐ'. ಈ ಬಾರಿ ಉಪ್ಪಿ ತೆರೆಮೇಲೆ ಹೊಸ ಪ್ರಪಂಚ ಕಟ್ಟಿಕೊಡುತ್ತಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ಗ್ರಾಫಿಕ್ಸ್ ಕೆಲಸ ಇತ್ತು. ಹಾಗಾಗಿ ರಿಲೀಸ್ ತಡವಾಗಿತ್ತು. ಇದೀಗ ಮತ್ತೊಂದು ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಮುಂದಿನ ವಾರದಿಂದಲೇ ಭರ್ಜರಿ ಪ್ರಮೋಷನ್ ಪ್ಲ್ಯಾನ್ ನಡೀತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎರಡೂ ಚಿತ್ರಗಳು ಬರ್ತಿವೆ.
ತಮಿಳಿನ ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಚಿತ್ರ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ. 'ವಿಕ್ರಾಂತ್ ರೋಣ' ಬಳಿಕ ಸುದೀಪ್ ನಟನೆಯ ಸಿನಿಮಾ ಇದು. ಕಲೈಪುಲಿ ಎಸ್ ತನು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಅಭಿಮಾನಿಗಳು ಈ ಚಿತ್ರಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ಬರುತ್ತಿರುವುದನ್ನು ಬಾಕ್ಸಾಫೀಸ್ ಕ್ಲ್ಯಾಶ್ ಎಂದೇ ಬಿಂಬಿಸಲಾಗುತ್ತಿದೆ. ಇದೆಲ್ಲದರ ನಡುವೆ 'ಕಬ್ಜ' ಚಿತ್ರದ ಸಣ್ಣ ತುಣುಕು ವೈರಲ್ ಆಗುತ್ತಿದೆ. ಆ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಅರ್ಕೇಶ್ವರ(ಉಪೇಂದ್ರ) ಪೊಲೀಸ್ ಆಫೀಸರ್ ಭಾರ್ಗವ್ ಭಕ್ಷಿ(ಸುದೀಪ್)ಗೆ ಸವಾಲು ಹಾಕುವ ಸನ್ನಿವೇಶ ಇದೆ. ಬಾಕ್ಸಾಫೀಸ್ ಫೈಟ್‌ಗೆ ಉಪ್ಪಿ ಸಿದ್ಧವಾಗಿ ನಿಂತಿದ್ದಾರೆ. ಕಿಚ್ಚನಿಗೆ ಸವಾಲು ಹಾಕಿದ್ದಾರೆ ನೋಡಿ ಎಂದು ಆ ವೀಡಿಯೋ ವೈರಲ್ ಮಾಡುತ್ತಿದ್ದಾರೆ.
ಯುದ್ಧಕ್ಕೆ ನಾನ್ ರೆಡಿ, ಆರ್‌ಯು ರೆಡಿ? ಎಂದು ಕಿಚ್ಚನಿಗೆ ಉಪೇಂದ್ರ ಸವಾಲು ಹಾಕುವ ಸೀನ್ ಅದು. ಇದೇ ವೀಡಿಯೋ ಈಗ ಸದ್ದು ಮಾಡ್ತಿದೆ. ಆರ್. ಚಂದ್ರು ಅವತ್ತೇ ಈ 'ಮ್ಯಾಕ್ಸ್ ಹಾಗೂ 'ಯುಐ' ಚಿತ್ರಗಳ ಬಾಕ್ಸಾಫೀಸ್ ಕ್ಲ್ಯಾಶ್ ಬಗ್ಗೆ ಊಹಿಸಿದ್ರಾ? ಎಂದು ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ 'ಮ್ಯಾಕ್ಸ್' ಚಿತ್ರದಲ್ಲಿ ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲೇ ನಟಿಸಿದ್ದಾರೆ.
ಇನ್ನು 'ಯುಐ' ಚಿತ್ರದ ಮುಹೂರ್ತ ಸಮಾರಂಭಕ್ಕೂ ಸುದೀಪ್ ಮುಖ್ಯ ಅತಿಥಿಯಾಗಿ ಭಾಗಿ ಆಗಿದ್ದರು. ಇತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದರು. ಹಾಗಾಗಿ ಇಲ್ಲಿ ಯಾವುದೇ ಸಂಘರ್ಷ ಇಲ್ಲ. ಎಲ್ಲಾ ಗೊತ್ತಿದ್ದು ಎರಡೂ ಚಿತ್ರಗಳನ್ನು 5 ದಿನಗಳ ಅಂತರದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ಸಿನಿರಸಿಕರು ಎರಡೂ ಚಿತ್ರಗಳನ್ನು ಮೆಚ್ಚಿ ಗೆಲ್ಲಿಸಲಿದ್ದಾರೆ.


Click it and Unblock the Notifications











