'ಡೆವಿಲ್'ಗೆ ಕೌಂಟರ್ ಕೊಟ್ರಾ ಪ್ರೇಮ್?; "ಶುಕ್ರವಾರ ಬಾ, ನೀನಾ ನಾನಾ ನೋಡೋಣ" ದರ್ಶನ್ ಡೈಲಾಗ್ ವೈರಲ್
ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸಿನಿಮಾ ಸುಗ್ಗಿ ಶುರುವಾಗುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳ ಬಿಡುಗಡೆಗೆ ಸಜ್ಜಾಗಿವೆ. ಈಗಾಗಲೇ ಕೆಲ ಸಿನಿಮಾಗಳ ರಿಲೀಸ್ ಡೇಟ್ ಘೋಷಣೆ ಆಗಿದೆ. ಡಿಸೆಂಬರ್‌ನಲ್ಲಿ ಎರಡ್ಮೂರು ಸ್ಟಾರ್‌ಗಳ ಸಿನಿಮಾಗಳು ತೆರೆಗಪ್ಪಳಿಸುವುದು ಪಕ್ಕಾ ಆಗುತ್ತಿದೆ. ಅದರಲ್ಲೂ 'ಡೆವಿಲ್' ವರ್ಸಸ್ 'ಕೆಡಿ' ಎನ್ನುವಂತಹ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗುತ್ತಿದೆ.
ಇತ್ತೀಚೆಗೆ ನಟ ದರ್ಶನ್ ನಟನೆಯ 'ಡೆವಿಲ್' ಚಿತ್ರವನ್ನು ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಡಿಸೆಂಬರ್‌ನಲ್ಲೇ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ರಿಲೀಸ್ ಎಂದು ಖಚಿತಪಡಿಸಿದರು. ಧ್ರುವ ಸರ್ಜಾ ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕೆಡಿ' ಅಬ್ಬರಿಸಲು ಸಜ್ಜಾಗಿದ್ದಾನೆ. ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರುತ್ತಿರುವುದು ಬಾಕ್ಸಾಫೀಸ್‌ನಲ್ಲಿ ಕದನ ಕುತೂಹಲ ಮೂಡಿಸಿದೆ.

'ಕಾಟೇರ' ಬಳಿಕ ದರ್ಶನ್ ಬಣ್ಣ ಹಚ್ಚಿರುವ ಸಿನಿಮಾ 'ಡೆವಿಲ್'. ಈ ಹಿಂದೆ ದರ್ಶನ್ ಜೊತೆ 'ತಾರಕ್' ಸಿನಿಮಾ ಮಾಡಿದ್ದ ಪ್ರಕಾಶ್ ವೀರ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ದರ್ಶನ್ ಕೈಗೆ ಪೆಟ್ಟಾಗಿ ಕೆಲ ದಿನ ಚಿತ್ರೀಕರಣ ತಡವಾಗುತ್ತಿರುವುದರಿಂದ ಡಿಸೆಂಬರ್‌ಗೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿದೆ. ಮತ್ತೊಂದು ಕಡೆ ಬಹಳ ಹಿಂದೆಯೇ ಸೆಟ್ಟೇರಿದ್ದ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಕೂಡ ತೆರೆಗೆ ಬರುವುದು ತಡವಾಗುತ್ತಿದೆ. ಶತಾಯ ಗತಾಯ ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಘೋಷಿಸಿದೆ.
'ಕೆಡಿ' ಚಿತ್ರದ ಸುದ್ದಿಗೋಷ್ಠಿ ಬಳಿಕ ನಿರ್ದೇಶಕ ಪ್ರೇಮ್ ಮಾಧ್ಯಮಗಳ ಜೊತೆ ಮಾತನಾಡಿದ್ದ ವೀಡಿಯೋವೊಂದು ವೈರಲ್ ಆಗುತ್ತಿದೆ. ಪ್ರೇಮ್ ಹೇಳಿಕೆಯನ್ನು ಎಡಿಟ್ ಮಾಡಿ, 'ಡೆವಿಲ್' ಚಿತ್ರಕ್ಕೆ ಕೌಂಟರ್ ಕೊಟ್ಟಂತೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಪ್ರೇಮ್ ಮಾತನಾಡುತ್ತಾ 'ಡೆವಿಲ್' ನಮ್ಮ ಸಿನ್ಮಾ, ನಮ್ಮ ಕನ್ನಡ ಸಿನ್ಮಾ, ನಮ್ಮವರ ಜೊತೆ ಯಾಕೆ ಫೈಟ್ ಎಂದಿದ್ದಾರೆ.

ನಮ್ಮ ಸಿನಿಮಾ ಮುಂದೆ ಬೇರೆ ಯಾವುದೇ ಭಾಷೆಯ ಸ್ಟಾರ್ ನಟರ ಸಿನಿಮಾ ಬಂದರೂ ವಾರ್ ಎಂದಿದ್ದಾರೆ. ಆದರೆ ಇದನ್ನು ಎಡಿಟ್ ಮಾಡಿ, 'ಡೆವಿಲ್' ಚಿತ್ರಕ್ಕೆ ಪ್ರೇಮ್ ಕೌಂಟರ್ ಕೊಟ್ಟಿದ್ದಾರೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಇದೆಲ್ಲರ ನಡುವೆ ಈ ಹಿಂದೆ ದರ್ಶನ್ ಮಾತನಾಡಿದ್ದ ಹಳೇ ವಿಡಿಯೋವನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
'ಕ್ರಾಂತಿ' ಚಿತ್ರದ ಬಿಡುಗಡೆ ವೇಳೆ ನಟ ದರ್ಶನ್ ಒಂದು ಸಂದರ್ಶನ ನೀಡಿದ್ದರು. ಅದರಲ್ಲಿ ಶುಕ್ರವಾರ ಯಾವುದೇ ನಟನ ಸಿನಿಮಾ ಬಂದರೂ ನಾನು ಸವಾಲ್ ಹಾಕ್ತೀನಿ ಎಂದಿದ್ದರು. "ಚಿತ್ರರಂಗದಲ್ಲಿ ಪೈಪೋಟಿ ಇದೆ. ಆರೋಗ್ಯಕರ ಪೈಪೋಟಿ ಅಂತ ಎಲ್ಲಾ ಮಾತನಾಡಲ್ಲ. ಶುಕ್ರವಾರ ಯಾರೇ ಎದುರು ಬಂದರೂ ನಾನು ದುಶ್ಮನ್ ಅವತ್ತು. ಯಾಕಂದ್ರೆ ನಾನು ಗೆಲ್ಲಬೇಕು. ತುಂಬಾ ಡಿಪ್ಲೋಮ್ಯಾಟಿಕ್ ಆಗಿ ಮಾತನಾಡಿ ಬೆನ್ನಿಗೆ ಚೂರಿ ಹಾಕಲ್ಲ. ಬಹಿರಂಗವಾಗಿ ಸವಾಲ್ ಹಾಕ್ತೀನಿ. ಶುಕ್ರವಾರ ನೀನಾ, ನಾನಾ? ನೋಡೇಬಿಡೋಣ. ಬೇಕಿದ್ರೆ ಶನಿವಾರ ಸಿಗು ಪಾರ್ಟಿ ಮಾಡೋಣ" ಎಂದು ಹೇಳಿದ್ದರು.
ದರ್ಶನ್ ಅಭಿಮಾನಿಗಳು ಸದ್ಯ ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. 'ಕೆಡಿ' ಹಾಗೂ 'ಡೆವಿಲ್' ಎರಡೂ ಕನ್ನಡ ಸಿನಿಮಾಗಳು. ಎರಡೂ ಗೆಲ್ಲಬೇಕು. ಸುಖಾಸುಮ್ಮನೆ ಇಂತಹ ಚರ್ಚೆ ಬೇಡ ಎನ್ನುವ ಕಾಮೆಂಟ್ಸ್ ಕೂಡ ಬರ್ತಿದೆ. ಇನ್ನು ಈ ಹಿಂದೆ ದರ್ಶನ್ ಹೀರೊ ಆಗಿ 'ಕರಿಯ' ಸಿನಿಮಾ ಕಟ್ಟಿಕೊಟ್ಟಿದ್ದ ಪ್ರೇಮ್ ಮತ್ತೊಂದು ಚಿತ್ರಕ್ಕೆ ಇದೀಗ ಸಜ್ಜಾಗಿದ್ದಾರೆ.


Click it and Unblock the Notifications











