ವಿಜಯಲಕ್ಷ್ಮೀ- ಪವಿತ್ರಾ ಗೌಡ ಸಂಸಾರ ಸಮರ ; ಬಾಕ್ಸಾಫೀಸ್‌ನಲ್ಲಿ ಕಡಿಮೆಯಾಗದ ಕಾಟೇರ ಅಬ್ಬರ
ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ನಡುವೆ ನಡೆದ ಸಂಘರ್ಷ ದರ್ಶನ್ ಅವರ ಅಸಂಖ್ಯಾತ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ಪರ ಹಲವರು ಬೆಂಬಲದ ಬಾವುಟವನ್ನ ನೆಟ್ಟಿದ್ದರೆ, ಪವಿತ್ರ ಗೌಡ ಅವರಿಗೆ ಕೆಲವರು ಬೆಂಬಲವನ್ನು ಸೂಚಿಸಿದ್ದಾರೆ. ಇನ್ನೂ ಈ ಸಂಸಾರ ಸಮರ ಮುಂದೆ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಕೂಡ ಅನೇಕರಲ್ಲಿದೆಯಾದರೂ, ಈ ವಾದ ವಿವಾದದ ನಡುವೆ ಕಾಟೇರ ಚಿತ್ರದ ನಾಗಾಲೋಟ ಡಿ ಕಂಪನಿಗೆ ಸಮಾಧಾನವನ್ನ ತಂದು ಕೊಟ್ಟಿದೆ. ಸಾಂಸಾರಿಕ ಕಲಹದಿಂದ ಮನೆ ಮಾಡಿರುವ ಅಸಹನೆ ಅಸಮಾಧಾನದ ನಡುವೆ ಖುಷಿಯನ್ನೂ ತಂದು ಕೊಟ್ಟಿದೆ.
ತೆರೆಗೆ ಬಂದ ದಿನದಿಂದ ಹತ್ತು ಹಲವು ದಾಖಲೆಗಳನ್ನ ಮುಡಿಗೇರಿಸಿಕೊಂಡ ಕಾಟೇರ, ಸದ್ಯಕ್ಕೆ ಐದನೇ ವಾರಕ್ಕೆ ಕಾಲಿಟ್ಟಿದೆ. ವಿಶೇಷ ಅಂದರೆ ಈ ಐದು ವಾರದಲ್ಲಿ ಪರಭಾಷೆಯ ಅನೇಕ ಸಿನಿಮಾ ತೆರೆಗೆ ಬಂದಿವೆ. ಚಿತ್ರಮಂದಿರದಿಂದ ಕಾಲ್ಕಿತ್ತಿವೆ. ಆದರೆ, ಕಾಟೇರ ನಿಂತ ನೆಲ ಮಾತ್ರ ಕುಸಿಯಲಿಲ್ಲ. ಇವತ್ತು ಕೂಡ ಕಾಟೇರ ಚಿತ್ರಕ್ಕೆ ಕರ್ನಾಟಕದಲ್ಲಿ ಬೇಡಿಕೆ ಇದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಕೇವಲ ಬೆಂಗಳೂರಿನಲ್ಲಿಯೇ ಕಾಟೇರ ಐವತ್ತಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣ್ತಿದೆ. ಇನ್ನೂ ಮೈಸೂರಿನಲ್ಲಿ 28 ಪ್ಲಸ್ ಸ್ಕ್ರೀನ್ ಗಳಲ್ಲಿ ಪ್ರದರ್ಶವಾಗ್ತಿದೆ.

ಸದ್ಯಕ್ಕೆ ಕಾಟೇರ ಚಿತ್ರದ ಈ ಅಬ್ಬರ ನೋಡ್ತಿದ್ದರೆ, ಚಿತ್ರ ಅನಾಯಾಸವಾಗಿ 50 ದಿನಗಳನ್ನ ಪೂರೈಸುವುದು ಖಚಿತ. ಇನ್ನೂ ಚಿತ್ರದ ಗಳಿಕೆಯ ವಿಚಾರಕ್ಕೆ ಬಂದರೆ ರಾಕ್ ಲೈನ್ ವೆಂಕಟೇಶ್ ಹಾಗೂ ತಂಡ ಲಾಭದ ಲೆಕ್ಕವನ್ನ ಅಧಿಕೃತವಾಗಿ ಹೇಳಿಲ್ಲವಾದರೂ, ಸಾಮಾಜಿಕ ಜಾಲತಾಣದ ಪಂಡಿತರ ಪ್ರಕಾರ ಚಿತ್ರ ಇನ್ನೂರು ಕೋಟಿಗೂ ಅಧಿಕ ಹಣವನ್ನ ಲೂಟಿ ಮಾಡಿದೆ.

ಬಾಲಿವುಡ್ ಫೈಟರ್ ಗೂ ಬಗ್ಗದ ಕಾಟೇರ
ನಿನ್ನೆ ಹೃತಿಕ್ ರೋಷನ್ ಅಭಿನಯದ ಫೈಟರ್ ಚಿತ್ರ ತೆರೆಗೆ ಬಂದಿದೆ. 550ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನವನ್ನು ಮೊದಲನೇ ದಿನ ಕಂಡಿದೆ. ಆದರೂ ಕಾಟೇರದ ಹವಾ ಕಡಿಮೆಯಾಗಿಲ್ಲ. ಫೈಟರ್ ಗೂ ಕೂಡ ಕಾಟೇರ ಜಗ್ಗಲಿಲ್ಲ. ಬಗ್ಗಲಿಲ್ಲ. ಇದೇ ಅಲ್ಲವೇ ನಿಜವಾದ ಗೆಲುವು.

ಒಟ್ಟಿನಲ್ಲಿ ಸದ್ಯಕ್ಕೆ ಕಾಟೇರ ಐದನೇ ವಾರಕ್ಕೆ ಕಾಲಿಟ್ಟಿದೆ. ಬೆಳ್ಳಿತೆರೆಯಲ್ಲಿ ಧಗಧಗಿಸುತ್ತಿದೆ. ದರ್ಶನ್ ಜೊತೆಯಲ್ಲಿ ಅವರ ಅಭಿಮಾನಿಗಳ ಸಂಭ್ರಮವನ್ನು ಕಾಟೇರ ಹೆಚ್ಚಿಸಿದೆ. 50ನೇ ದಿನದ ಸಂಭ್ರಮಾಚರಣೆಯನ್ನ ಚಿತ್ರತಂಡ ಹೇಗೆ ಆಚರಿಸಲಿದೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ


Click it and Unblock the Notifications











