"ಧರ್ಮದ ಆಧಾರದ ಮೇಲೆ ದೇಶದ ಜನಗಳನ್ನು ಒಡೆಯುವವರು 10 ವರ್ಷದಿಂದ ಅಧಿಕಾರ ಹಿಡಿದಿದ್ದಾರೆ": ಕಿಶೋರ್
ಲೋಕಸಭೆ ಚುನಾವಣೆ ಮತ ಎಣಕೆ ಭರದಿಂದ ಸಾಗಿದೆ. ಈ ಬಾರಿ ಯಾರಿಗೆ ಅಧಿಕಾರ ಸಿಗುತ್ತದೆ ಎನ್ನುವ ಚರ್ಚೆ ನಡೀತಿದೆ. ಎನ್‌ಡಿಎ ಅಥವಾ ಇಂಡಿಯಾ ಒಕ್ಕೂಟ ಇಬ್ಬರಲ್ಲಿ ಯಾರು ಗದ್ದುಗೆ ಏರುತ್ತಾರೆ? ಎನ್ನುವ ಕುತೂಹಲ ಮೂಡಿದೆ.
ಕನ್ನಡ ನಟ ಕಿಶೋರ್ ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಬರುತ್ತಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಹೇಳಿಕೆಗಳ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಸದ್ಯ ಲೋಕಸಭೆ ಚುಣಾವಣೆ ಫಲಿತಾಂಶದ ಹೊಸ್ತಿಲ್ಲಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ.

"ನಮಗ್ಯಾಕೆ ಬೇಡದ ರಾಜಕೀಯ? ಇದು ಸಾಮಾನ್ಯವಾಗಿ ಎಲ್ಲೆಡೆ ಕೇಳುವ ಮಾತು.. ಚುನಾವಣೆ ಮುಗಿದಿದೆ, ನಾವು ಜವಾಬ್ದಾರಿಯುತ ಪ್ರಜೆಯಂತೆ ಓಟು ಹಾಕಿ ಮುಗಿಸಿದ್ದೇವೆ, ಸೋಷಿಯಲ್ ಮೀಡಿಯಾದಲ್ಲಿ ಬೆರಳ ಇಂಕಿನ ಫೋಟೋ ಹಾಕಿ ಹೆಮ್ಮೆ ಪಟ್ಟಿದ್ದೇವೆ..ಭಾರತೀಯರಾದ ಸಾರ್ಥಕ ಭಾವಕ್ಕೆ ಹರ್ಷ ಪಟ್ಟು ನಿತ್ಯ ಜೀವನದಲ್ಲಿ ತೊಡಗುತ್ತೇವೆ.ಆದರೆ ಮತವನ್ನ ದಾನ ಮಾಡಿ ಕುಳಿತರೆ ದೇಶ ಉದ್ಧಾರವಾಗುವುದಿಲ್ಲ. ಇಷ್ಟು ದಿನ ಹಾಗೆ ಕುಳಿತರೂ ಅದರ ಶಕ್ತಿಗೆ ತಕ್ಕಂತಲ್ಲದಿದ್ದರೂ ಅಲ್ಲಲ್ಲಿ ಯಾರೋ ಪ್ರಾಮಾಣಿಕರ ಪ್ರಯತ್ನದಿಂದ ಕುಂಟುತ್ತಾ ಸಾಗುತ್ತಿತ್ತು"
"ನಮ್ಮ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಧರ್ಮದ ಆಧಾರದ ಮೇಲೆ ದೇಶದ ಜನಗಳನ್ನು ಒಡೆಯುವ ಜನ 10 ವರ್ಷದಿಂದ ಅಧಿಕಾರ ಹಿಡಿದಿದ್ದಾರೆ. ದೇಶವನ್ನು ಎಲ್ಲಾ ನಿಟ್ಟಿನಲ್ಲೂ ಹಾಳು ಮಾಡಿ ದ್ವೇಷ, ಮೌಢ್ಯದ ಕೂಪಕ್ಕಿಳಿಸಿಬಿಟ್ಟಿದ್ದಾರೆ. ಮತ್ತೆ ದೇಶವನ್ನು ಪ್ರಗತಿಯ ಹಾದಿಗೆ ತರಲು ದಶಕಗಳೇ ಬೇಕು. ಹಾಗಾಗಿ ಯಾರು ಅಧಿಕಾರಕ್ಕೆ ಬಂದರೂ ಚುನಾವಣೆಯ ನಂತರವೂ ನಾವು ಜಾಗೃತರಾಗಿದ್ದು ರಾಜಕಾರಿಣಿಗಳ ಕೊರಳಪಟ್ಟಿ ಹಿಡಿದು ಪ್ರಶ್ನಿಸುತ್ತಲೇ ಇದ್ದರಷ್ಟೇ ದೇಶವನ್ನು ಕಾಪಾಡಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ದೇಶದಲ್ಲಿ ಮಿಕ್ಕಿರುವುದನ್ನು ಲೂಟಿ ಮಾಡಿ ಮುಗಿಸಿ ಕೊನೆಗೆ ಧರ್ಮ ಜಾತಿಯ ಮಂಕು ಬೂದಿಯೆರಚಿ ಮತ್ತೆ ಓಟು ಕೇಳಲು ಮಾನ ಮರ್ಯಾದೆಯಿಲ್ಲದೇ ಬಂದು ನಿಲ್ಲುತ್ತಾರೆ"
"ಅಂಬೇಡ್ಕರರ ಮಾತು ನೆನಪಿರಲಿ ಸದಾ ತಿಳಿವುಳ್ಳವರಾಗಿರಿ ಸದಾ ಸಂಘಟಿತರಾಗಿರಿ ಸದಾ ಜಾಗೃತರಾಗಿರಿ" ಎಂದು ನಟ ಕಿಶೋರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ಬಾರಿ ಕಿಶೋರ್ ಕೇಂದ್ರ ಸರ್ಕಾರವನ್ನು, ಪ್ರಧಾನಿ ಮೋದಿ ಅವರನ್ನು ಟೀಕಿಸಿ ಪೋಸ್ಟ್ ಮಾಡಿದಾಗ ಪರ ವಿರೋಧ ಚರ್ಚೆ ನಡೆಯುತ್ತದೆ. ಕೆಲವರು ಕಿಶೋರ್ ವಾದ ಒಪ್ಪಿದರೆ ಮತ್ತೆ ಕೆಲವರು ವಿರೋಧಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಮಹಾತ್ಮ ಗಾಂಧೀಜಿ ಕುರಿತು ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಕಿಶೋರ್ ಪ್ರತಿಕ್ರಿಯಿಸಿದ್ದರು.
"ಇದೇನು ಹುಚ್ಚೋ ... ಹೊಲಸು ಕುತಂತ್ರವೋ? ..ತನ್ನ ಬೌದ್ಧಿಕ ದಿವಾಳಿತನ ಮತ್ತು ಕೆಲಸ ಮಾಡಲಾಗದ ಅಯೋಗ್ಯತೆಯನ್ನೂ... ನಿರುದ್ಯೋಗ,ಬೆಲೆಯೇರಿಕೆ, ಬಡತನ, ಮಣಿಪುರ, ಚೀನಾ, ಅಗ್ನಿವೀರ್, ರೈತ ಹೋರಾಟ, ನಗದು ಅಮಾನ್ಯೀಕರಣ, ಕೊರೋನ,ಅದಾನಿ, ಪಿಎಮ್ ಕೇರ್ಸ್, ಚುನಾವಣಾ ಬಾಂಡ್ ಹೀಗೆ ಹಲವು ನೈಜ ಸಮಸ್ಯೆ ಸೋಲುಗಳನ್ನೂ ಮುಚ್ಚಿಹಾಕಲು ಬಾಯಿಗೆ ಬಂದದ್ದು ಬೊಗಳುತ್ತಾ ಪ್ರತಿದಿನವೂ ಕಾನೂನು ಬಾಹಿರ ಪ್ರಚಾರವನ್ನೂ ಗಮನ ಬೇರೆಡೆ ತಿರುಗಿಸುವ ಈ ಕಳ್ಳ ಕೆಲಸವನ್ನೂ ಮಾಡುತ್ತಾ ಈ ವಿಕಸಿತ ಮಹಾಮಾನವ ಪರೀಕ್ಷಿಸುತ್ತಿರುವುದು ನಮ್ಮ ಬುದ್ಧಿಮತ್ತೆಯನ್ನ"
"ಈ ಮಾತುಗಳಿಂದ ಭ್ರಮಿತರಾಗಿ ಬರೀ ಈ ತಲೆಬುಡವಿಲ್ಲದ ಮಾತುಗಳ ಬಗ್ಗೆಯೇ ಗಮನವಿಡುತ್ತೇವೆಯೋ ಇಲ್ಲಾ ಮೂಲಭೂತ ಸಮಸ್ಯೆಗಳನ್ನು ಮರೆಯದೇ ಓಟು ಹಾಕುತ್ತೇವೆಯೋ ನಮ್ಮ ಬುದ್ಧಿವಂತಿಕೆಗೆ ಬಿಟ್ಟದ್ದು. ನಾವು ಮೂರ್ಖರಾದೆವೋ ಇಲ್ಲವೋ ತಿಳಿಯಲು ಜೂನ್ 4 ರ ವರೆಗೆ ಕಾದು ನೋಡಬೇಕಿದೆ" ಎಂದು ಕಿಶೋರ್ ಬರೆದುಕೊಂಡಿದ್ದರು.


Click it and Unblock the Notifications











