UI vs MAX; 'ಯುಐ' ರಿಲೀಸ್ ಡೇಟ್ ಪೋಸ್ಟ್‌ಪೋನ್? ಕೆ. ಪಿ ಶ್ರೀಕಾಂತ್ ಪ್ರತಿಕ್ರಿಯೆ
ವರ್ಷದ ಕೊನೆಗೆ ಬಾಕ್ಸಾಫೀಸ್‌ನಲ್ಲಿ ಕನ್ನಡದ ಎರಡು ಚಿತ್ರಗಳ ನಡುವೆ ಪೈಪೋಟಿ ಏರ್ಪಡುತ್ತಿದೆ. ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ 'ಯುಐ' ರಿಲೀಸ್ ಬೆನ್ನಲ್ಲೇ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ತೆರೆಗಪ್ಪಳಿಸಲಿದೆ. ಕೇವಲ 5 ದಿನಗಳ ಅಂತರದಲ್ಲಿ ಎರಡೂ ಚಿತ್ರಗಳು ತೆರೆಗೆ ಬರುತ್ತಿರುವುದು ಸಹಜವಾಗಿಯೇ ಕುತೂಹಲ ಹುಟ್ಟಾಕ್ಕಿದೆ.
ಈ ವರ್ಷ ಕನ್ನಡದ ದೊಡ್ಡ ಸಿನಿಮಾಗಳು ತೆರೆಗೆ ಬರಲು ಮೀನಾಮೇಷ ಎಣಿಸಿದ್ದು ಸುಳ್ಳಲ್ಲ. ಪದೇ ಪದೆ ರಿಲೀಸ್ ಡೇಟ್ ಬದಲಾಗುತ್ತಾ ಬಂದಿತ್ತು. 'ಮ್ಯಾಕ್ಸ್' ಈ ವರ್ಷ ಬರೋದೇ ಅನುಮಾನ ಎನ್ನುವಂತಾಗಿತ್ತು. ಆದರೆ ದಿಢೀರನೆ ರಿಲೀಸ್ ಡೇಟ್ ಘೋಷಣೆ ಆಗಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ತಿಂಗಳ ಹಿಂದೆಯೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಇದೀಗ ಕ್ರಿಸ್‌ಮಸ್ ಸಂಭ್ರಮದಲ್ಲಿ ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆ ಆಗುವುದು ಪಕ್ಕಾ ಆಗಿದೆ. 'ಯುಐ' ಸಿನಿಮಾ ಡಿಸೆಂಬರ್ 20ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.
ಶುಕ್ರವಾರ 'ಯುಐ' ಬಂದರೆ ಬುಧವಾರ 'ಮ್ಯಾಕ್ಸ್' ಮ್ಯಾಕ್ಸಿಮಮ್ ಕಿಕ್ ಸಿಗಲಿದೆ. 5 ದಿನಗಳ ಅಂತರದಲ್ಲಿ ಎರಡೂ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಇಷ್ಟು ದಿನ ಒಳ್ಳೆ ರಿಲೀಸ್ ಡೇಟ್ ಎಲ್ಲಾ ಬಿಟ್ಟು ವರ್ಷದ ಕೊನೆಗೆ ಯಾಕೆ ಪೈಪೋಟಿ ಎಂದು ಕೇಳುತ್ತಿದ್ದಾರೆ.

ಜಿ. ಮನೋಹರನ್ ಜೊತೆ ಸೇರಿ ಕೆ. ಪಿ ಶ್ರೀಕಾಂತ್ 'ಯುಐ' ಚಿತ್ರ ನಿರ್ಮಿಸಿದ್ದಾರೆ. ಎರಡೂ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. ಎರಡೂ ಚಿತ್ರಗಳ ಟೀಸರ್, ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇನ್ನು ಸುದೀಪ್ ಜೊತೆ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಉತ್ತಮ ಒಡನಾಟ ಹೊಂದಿದ್ದಾರೆ. ಹಾಗಾಗಿ ಎರಡೂ ಚಿತ್ರಗಳ ಬಿಡುಗಡೆಯಲ್ಲಿ ಯಾವುದೇ ಪೈಪೋಟಿ ಇಲ್ಲ ಎನ್ನುವುದು ಗೊತ್ತಾಗುತ್ತಿದೆ.
ಎಲ್ಲಾ ವಿಧದಲ್ಲಿ ಚರ್ಚೆ ನಡೆಸಿ ಕೊನೆಗೆ ಒಪ್ಪಿ 'ಮ್ಯಾಕ್ಸ್' ಹಾಗೂ 'ಯುಐ' ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ದೊಡ್ಡ ಸಿನಿಮಾಗಳ ಆರ್ಭಟ 3 ದಿನಕ್ಕೆ ಮುಕ್ತಾಯವಾಗುತ್ತದೆ. ಬಳಿಕ ಪ್ರೇಕ್ಷಕರ ಸಂಖ್ಯೆ ಕಮ್ಮಿ ಆಗುತ್ತದೆ. ಹಾಗಾಗಿ 'ಯುಐ' ಸಿನಿಮಾ ಫಸ್ಟ್ ವೀಕೆಂಡ್ ಪ್ರದರ್ಶನ ಮುಗಿಸಿದ ಬಳಿಕ 'ಮ್ಯಾಕ್ಸ್' ಬರ್ತಾನೆ. ಹಾಗಾಗಿ ದೊಡ್ಡಮಟ್ಟದಲ್ಲಿ ಥಿಯೇಟರ್ ಸಮಸ್ಯೆ ಕೂಡ ಆಗುವುದಿಲ್ಲ ಎನ್ನುವ ಲೆಕ್ಕಾಚಾರವಿದೆ.
ಉಪೇಂದ್ರ ಬಹಳ ದಿನಗಳ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. 'ಯುಐ' ಚಿತ್ರದಲ್ಲಿ ಹೊಸ ಪ್ರಪಂಚ ತೆರೆದಿಡಲು ಮುಂದಾಗಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿದೆ. 'ಯುಐ' ಚಿತ್ರ ಕೂಡ ಎರಡು ತಿಂಗಳ ಹಿಂದೆ ಬರಬೇಕಿತ್ತು. ಆದರೆ ಗ್ರಾಫಿಕ್ಸ್, ಪೋಸ್ಟ್ ಪ್ರೊಡಕ್ಷನ್ ತಡವಾಗಿತ್ತು. ಲೇಟ್ ಆದರೂ ಭರ್ಜರಿಯಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
'ಮ್ಯಾಕ್ಸ್' ರಿಲೀಸ್ ಡೇಟ್ ಘೋಷಣೆ ಬೆನ್ನಲ್ಲಿ 'ಯುಐ' ಮುಂದಕ್ಕೆ ಹೋಗುತ್ತಾ? ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಪ್ರತಿಕ್ರಿಯಿಸಿದ್ದಾರೆ. ಯಾರು ಹೇಳಿದರು ಪೋಸ್ಟ್‌ಪೋನ್ ಆಗುತ್ತದೆ ಎಂದು? ಯಾವುದೇ ಕಾರಣಕ್ಕೂ ನಮ್ಮ ಸಿನಿಮಾ ರಿಲೀಸ್ ಡೇಟ್ ಬದಲಾಗಲ್ಲ. ಪಿವಿಆರ್‌ಗಳಲ್ಲಿ ಈಗಾಗಲೇ ಸ್ಟ್ಯಾಂಡಿಗಳನ್ನು ನಿಲ್ಲಿಸಲಾಗುತ್ತಿದೆ. ಡಿಸೆಂಬರ್ 20ಕ್ಕೆ ಸಿನಿಮಾ ರಿಲೀಸ್ ಗ್ಯಾರೆಂಟಿ ಎಂದು ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.
ಸುದೀಪ್ ನಟಿಸಿದ ಸಿನಿಮಾ ತೆರೆಗೆ ಬಂದು 2 ವರ್ಷ ಕಳೆದಿದೆ. ಮುಂದೆ ಸಂಕ್ರಾಂತಿ ಬರುತ್ತಿದೆ. ಆ ಸಮಯದಲ್ಲಿ ಪರಭಾಷಾ ಚಿತ್ರಗಳ ಹಾವಳಿ ಜಾಸ್ತಿ. ಹಾಗಾಗಿ ಅದಕ್ಕಿಂತ ಮುಂಚೆ 'ಮ್ಯಾಕ್ಸ್' ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಹಾಗಾಗಿ ಕ್ರಿಸ್‌ಮಸ್ ರಜಾ ದಿನವನ್ನು ಆಯ್ಕೆ ಮಾಡಿಕೊಂಡಿದ್ದಾರೆ.


Click it and Unblock the Notifications











