"ಒಬ್ಬ ಪುರುಷ ಕೊಲೆ ಮಾಡುವಂತೆ ಮಹಿಳೆ ತಲೆ ಕೆಡಿಸಬಹುದು"; ನಿವೇತಾ ಪೇತುರಾಜ್
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರೆದಿದೆ. ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಜುಲೈ 4ರವರೆಗೆ ನ್ಯಾಯಾಂಗ ಬಂಧನ ಮುಂದುವರೆಯಲಿದೆ.
ಪ್ರೇಯಸಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ. ಅದರಿಂದ ಕೆರಳಿದ ದರ್ಶನ್ ಆಪ್ತರ ಮೂಲಕ ಆತನನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಬುದ್ಧಿ ಕಲಿಸಲು ಮುಂದಾಗಿದ್ದಾರೆ. ಈ ವೇಳೆ ಆತನ ಪ್ರಾಣವೇ ಹೋಗಿದೆ ಎಂದು ಹೇಳಲಾಗುತ್ತಿದೆ. ದರ್ಶನ್ ಸೂಚನೆ ಮೇರೆಗೆ ನಾವು ರೇಣುಕಾಸ್ವಾಮಿಯನ್ನು ಕರೆತಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದರೆ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.

10 ವರ್ಷಗಳಿಂದ ನಾನು, ದರ್ಶನ್ ರಿಲೇಷನ್‌ಶಿಪ್‌ನಲ್ಲಿದ್ದೀವಿ ಎಂದು ಇತ್ತೀಚೆಗೆ ಪವಿತ್ರಾ ಗೌಡ ಹೇಳಿಕೊಂಡಿದ್ದರು. ಆಕೆಗೆ ರೇಣುಕಾಸ್ವಾಮಿ ಕೆಟ್ಟದ್ದಾಗಿ ಮೆಸೇಜ್ ಮಾಡಿದ್ದು ಆಕೆ ಆ ವಿಚಾರವನ್ನು ದರ್ಶನ್ ಬಳಿ ಹೇಳಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ. ರೇಣುಕಾಸ್ವಾಮಿಗೆ ಅಷ್ಟು ಚಿತ್ರಹಿಂಸೆ ನೀಡಲು ಇದೇ ಪ್ರೇರಣೆಯಾಗಿದ್ದು ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ಆಕೆ ಮಾತು ಕೇಳಿ ನಟ ದರ್ಶನ್ ದುಡುಕಿನ ನಿರ್ಧಾರ ಕೈಗೊಂಡುಬಿಟ್ರಾ? ಎನ್ನುವ ಚರ್ಚೆ ನಡೆಯುತ್ತಿದೆ.
ಪವಿತ್ರಾ ಗೌಡ ಪ್ರೇರಣೆಯಿಂದಲೇ ಇಷ್ಟೆಲ್ಲಾ ಆಯಿತು ಎನ್ನುವ ಚರ್ಚೆ ನಡುವೆ ತಮಿಳು ನಟಿ ನಿವೇತಾ ಪೇತುರಾಜ್ ಹೇಳಿಕೆ ವೈರಲ್ ಆಗುತ್ತಿದೆ. ಪುರುಷರು ಹಾಗೂ ಮಹಿಳೆಯರ ಬಗ್ಗೆ ಇತ್ತೀಚೆಗೆ ಸುದ್ದಿಗೋಷ್ಠಿವೊಂದರಲ್ಲಿ ನಿವೇತಾ ಮಾತನಾಡಿದ್ದರು. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ. ಆಕೆಯ ಪ್ರಭಾವದಿಂದ ಒಬ್ಬ ಪುರುಷ ಪ್ರಪಂಚ ಗೆಲ್ಲಬಹುದು, ಅಥವಾ ಯಾರನ್ನಾದರೂ ಕೊಲ್ಲಬಹುದು ಎಂದು ಆಕೆ ಹೇಳಿದ್ದರು. ಸದ್ಯ ಈ ವೀಡಿಯೋ ವೈರಲ್ ಆಗ್ತಿದೆ.
ತೆಲುಗಿನ 'ಪರುವು' ಎನ್ನುವ ವೆಬ್ ಸೀರಿಸ್‌ನಲ್ಲಿ ನಿವೇತಾ ಪೇತುರಾಜ್ ನಟಿಸಿದ್ದಾರೆ. ಚಿರಂಜೀವಿ ಪುತ್ರಿ ಸುಶ್ಮಿತಾ ಈ ಸೀರಿಸ್ ನಿರ್ಮಿಸಿದ್ದಾರೆ. ಇದರಲ್ಲಿ ಡಾಲಿ ಅಲಿಯಾಸ್ ಪಲ್ಲವಿ ಎನ್ನುವ ಪಾತ್ರದಲ್ಲಿ ನಿವೇತಾ ಪೇತುರಾಜ್ ನಟಿಸಿದ್ದಾರೆ. ಈ ಸೀರಿಸ್ ಕೂಡ ಒಂದು ಕೊಲೆ ಪ್ರಕರಣದ ಸುತ್ತಾ ಸಾಗುತ್ತದೆ. ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಸೀರಿಸ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.

ಪಲ್ಲವಿ ಅಲಿಯಾಸ್ ಡಾಲಿ (ನಿವೇದಾ ಪೇತುರಾಜ್) ದೊಡ್ಡ ಮನೆಯ ಹೆಣ್ಣು ಮಗಳು. ಆದರೆ ಪ್ರೀತಿಸಿ ಪ್ರಿಯಕರನ ಜೊತೆ ಓಡಿ ಹೋಗಿ ಅಂತರ್ಜಾತಿ ವಿವಾಹ ಮಾಡಿಕೊಳ್ಳುತ್ತಾಳೆ. ದೊಡ್ಡಪ್ಪನ ನಿಧನ ವಾರ್ತೆ ಕೇಳಿ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲು ಪತಿ ಜೊತೆ ಹುಟ್ಟೂರಿಗೆ ಹೊರಡುತ್ತಾಳೆ. ಸೋದರ ಮಾವ ಚಂದು ಅವರನ್ನು ಪಿಕಪ್ ಮಾಡುತ್ತಾನೆ. ಆದರೆ ದಾರಿ ಮಧ್ಯೆ ಜಗಳವಾಗಿ ಸುಧೀರ್ ಹಲ್ಲೆಯಿಂದ ಚಂದು ಸಾಯುತ್ತಾನೆ. ಚಂದು ಮೃತ ದೇಹವನ್ನು ಪಲ್ಲವಿ ಮತ್ತು ಸುಧೀರ್ ಏನು ಮಾಡ್ತಾರೆ? ಮುಂದೇನಾಗುತ್ತದೆ ಎನ್ನುವುದು ಇನ್ನುಳಿದ ಕಥೆ.
ಸುದ್ದಿಗೋಷ್ಠಿಯಲ್ಲಿ ತಮ್ಮ ಡಾಲಿ ಪಾತ್ರದ ಬಗ್ಗೆ ಮಾತನಾಡುತ್ತಾ ನಿವೇತಾ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದರು. "ನಿಜ ಹೇಳಬೇಕು ಅಂದ್ರೆ ಮಹಿಳೆಯರು ಬಹಳ ಪ್ರಭಾವಶಾಲಿಗಳು(manipulative). ವಿಪರ್ಯಾಸ ಅಂದ್ರೆ ಅದು ಪುರುಷರಿಗೆ ಗೊತ್ತಿಲ್ಲ ಎಂದು ನಕ್ಕಿದ್ದಾರೆ. "ಮಹಿಳೆಯರು ತಮ್ಮ ಪ್ರಭಾವ ಬೀರಿ(manipulate) ಪುರುಷ ಏನು ಬೇಕಾದರೂ ಮಾಡುವಂತೆ ಮಾಡಬಲ್ಲಳು. ಅದು ಒಳ್ಳೆಯದೇ ಇರಬಹುದು, ಕೆಟ್ಟದೇ ಇರಬಹುದು. ಪ್ರಪಂಚ ಗೆಲ್ಲಲು ಬೆನ್ನಲುಬಾಗಿ ನಿಲ್ಲಬಹುದು. ಅಥವಾ ಯಾರನ್ನಾದರೂ ಕೊಲ್ಲುವಂತೆ ಮಾಡಬಹುದು" ಎಂದಿದ್ದರು.
ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಭಾರೀ ಸದ್ದು ಮಾಡುತ್ತಿರುವ ಸಮಯದಲ್ಲಿ ನಿವೇತಾ ಹೇಳಿಕೆಯ ಈ ವಿಡಿಯೋವನ್ನು ಕೆಲವರು ವೈರಲ್ ಮಾಡುತ್ತಿದ್ದಾರೆ. ಅಸಲಿ ಸಂಗತಿ ಇದೇ ಆಗಿರೋದು ಎಂದು ನೆಟ್ಟಿಗರು ಕಾಮೆಂಟ್ ಹಾಕುತ್ತಿದ್ದಾರೆ.


Click it and Unblock the Notifications











