'ಯುವ' ರಾಜ್‌ಕುಮಾರ್ ಪಟ್ಟಾಭಿಷೇಕಕ್ಕೆ ಬಿಸಿ ಬಿಸಿ ಚರ್ಚೆ ಶುರು; ಬಿರುದು ಏನು?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಯುವ' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ನಲ್ಲಿ ಕೆಲವಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಯುವ ರಾಜ್‌ಕುಮಾರ್ ಆಕ್ಷನ್, ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಚೊಚ್ಚಲ ಚಿತ್ರದಲ್ಲಿ ರಾಘಣ್ಣನ ಕಿರಿಮಗನ ಪರ್ಫಾರ್ಮನ್ಸ್ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಫಸ್ಟ್ ವೀಕೆಂಡ್‌ನಲ್ಲಿ 'ಯುವ' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹದವಾಗಿ ಬೆರೆಸಿ ಸಂತೋಷ್ ಆನಂದ್ ರಾಮ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಒಂದಷ್ಟು ತಪ್ಪುಗಳನ್ನು ಹೊರತುಪಡಿಸಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. 'ಯುವ'ನ ಆರ್ಭಟ ನೋಡಿದ ಅಭಿಮಾನಿಗಳು 'ಕಾಲರ್ ಎತ್ತಿಕೊಂಡು ಓಡಾಡಿ', 'ದೊಡ್ಮನೆ ಪರಂಪರೆ' ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಯುವ ರಾಜ್‌ಕುಮಾರ್ ಪಟ್ಟಾಭಿಷೇಕ ಮಾಡಬೇಕು, ಒಂದು ಬಿರುದು ಕೊಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭಿಸಿದ್ದಾರೆ.

ಚಿತ್ರರಂಗದಲ್ಲಿ ಕಲಾವಿದರಿಗೆ ಬಿರುದುಗಳನ್ನು ಕೊಡುವುದು ಹೊಸದೇನು ಅಲ್ಲ. ಸಾಕಷ್ಟು ನಟ, ನಟಿಯರಿಗೆ ಬಿರುದುಗಳನ್ನು ಅಭಿಮಾನಿಗಳು ಕೊಟ್ಟಿದ್ದಾರೆ. ಕೆಲವೊಮ್ಮೆ ಚಿತ್ರತಂಡಗಳು, ಆಪ್ತರು ಕೂಡ ಕಲಾವಿದರಿಗೆ ಬಿರುದುಗಳನ್ನು ಕೊಟ್ಟಿರುವ ಉದಾಹರಣೆಯಿದೆ. ಡಾ. ರಾಜ್‌ಕುಮಾರ್ ಆದಿಯಾಗಿ ಕನ್ನಡದ ಸ್ಟಾರ್ ನಟರಿಗೆಲ್ಲಾ ಬಿರುದುಗಳಿವೆ. ಅಣ್ಣಾವ್ರಿಗೆ ಸಿಕ್ಕಿದಷ್ಟು ಬಿರುದು ಮತ್ಯಾವುದೇ ನಟನಿಗೆ ಸಿಕ್ಕಿಲ್ಲ ಅಂದ್ರೆ ತಪ್ಪಾಗಲ್ಲ.
ನಟಸಾರ್ವಭೌಮ ಡಾ. ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಕ್ರೇಜಿಸ್ಟಾರ್ ರವಿಚಂದ್ರನ್, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರಾಕಿಂಗ್ ಸ್ಟಾರ್ ಯಶ್ ಹೀಗೆ ಪ್ರತಿಯೊಬ್ಬರನ್ನು ಅಭಿಮಾನಿಗಳು ಒಂದೊಂದು ಬಿರುದಿನ ಜೊತೆ ಗುರ್ತಿಸುತ್ತಾರೆ. ಸಿನಿಮಾ ಟೈಟಲ್ ಕಾರ್ಡ್‌ಗಳಲ್ಲಿ ಕೂಡ ಈ ಬಿರುದುಗಳು ಟ್ಯಾಗ್ ಆಗಿರುತ್ತದೆ. ಅದೇ ರೀತಿ ಇದೀಗ ಯುವ ರಾಜ್‌ಕುಮಾರ್‌ಗೆ ಬಿರುದು ನೀಡಬೇಕು ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ.

ಕೆಲ ಅಭಿಮಾನಿಗಳು ಯುವ ರಾಜ್‌ಕುಮಾರ್ ಅವರಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡುತ್ತಿದ್ದಾರೆ. ಜ್ಯೂನಿಯರ್ ಪವರ್ ಸ್ಟಾರ್ ಅಂತೆಲ್ಲಾ ಕರೆಯಲು ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇನ್ನು ಕೆಲವರು ತರಹೇವಾರಿ ಬಿದುರುಗಳನ್ನು ಸೂಚಿಸುತ್ತಿದ್ದಾರೆ. ಯುವ ರಾಜ್‌ಕುಮಾರ್ ಪಟ್ಟಾಭಿಷೇಕ ನಡೆಯಬೇಕು, ಬಿರುದು ಕೊಡಬೇಕು ಅಂತ ಚರ್ಚಿಸುತ್ತಿದ್ದಾರೆ. ಪಟ್ಟಾಭಿಷೇಕ ಅಂದ್ರೆ ಕಾರ್ಯಕ್ರಮ ನಡೆಸಿ ಯುವರಾಜ್‌ಕುಮಾರ್ ಅವರನ್ನು ಆಹ್ವಾನಿಸಿ ಬಿರುದು ಘೋಷಿಸಿಬೇಕು ಎನ್ನುತ್ತಿದ್ದಾರೆ. ಸಈಗಾಗಲೇ ಕೆಲ ಇಂಟ್ರೆಸ್ಟಿಂಗ್ ಬಿರುದುಗಳನ್ನು ಸೂಚಿಸುತ್ತಿದ್ದಾರೆ.
ಪ್ರಿನ್ಸ್, ಉಸ್ತಾದ್, ಮೆಗಾ ಪವರ್ ಸ್ಟಾರ್, ಯಂಗ್ ಟೈಗರ್, ಪವರ್ ಪ್ರಿನ್ಸ್, ಜ್ಯೂ. ಪವರ್ ಸ್ಟಾರ್ ಹೀಗೆ ಸಾಕಷ್ಟು ಬಿರುದುಗಳು ಸೋಶಿಯಲ್ ಮೀಡಿಯಾದಲ್ಲಿ ಚಾಲ್ತಿಗೆ ಬಂದಿದೆ. ಆದರೆ ಕೆಲವರು ಮಾತ್ರ ಸದ್ಯಕ್ಕೆ ಯಾವುದೇ ಬಿರುದು ಬೇಡ, ಮೊದಲ ಚಿತ್ರ ಬಿಡುಗಡೆಯಾಗಿ ವಾರ ಕಳೆದಿಲ್ಲ, ಇಷ್ಟು ಬೇಗ ಬಿರುದು ಬೇಕಾಗಿಲ್ಲ. ಖ್ಯಾತ ನಟರಿಗೆ ಯಾರಿಗೂ ಮೊದಲ ಚಿತ್ರಕ್ಕೆ ಬಿರುದು ಸಿಗಲಿಲ್ಲ. ದರ್ಶನ್‌ಗೆ ಚಾಲೆಂಜಿಂಗ್ ಸ್ಟಾರ್ ಟೈಟಲ್ ಸಿಗಲು ಕೆಲ ವರ್ಷಗಳು ಬೇಕಾಯಿತು, ಶಿವರಾಜ್‌ಕುಮಾರ್ ಹ್ಯಾಟ್ರಿಕ್ ಹೀರೊ ಆಗಲು 3 ಸಿನಿಮಾಗಳ ಸಕ್ಸಸ್ ಆಗುವವರೆಗೂ ಕಾಯಬೇಕಾಯಿತು. ಸುದೀಪ್ ಹೆಸರಿನ ಅಭಿನಯ ಚಕ್ರವರ್ತಿ ಟ್ಯಾಗ್ ಸೇರಿಕೊಳ್ಳಲು ಬಹಳ ಸಮಯ ಬೇಕಾಯಿತು ಎನ್ನುತ್ತಿದ್ದಾರೆ.
ಒಟ್ಟಾರೆ ಯುವ ರಾಜ್‌ಕುಮಾರ್ ಮೊದಲ ಪ್ರಯತ್ನದಲ್ಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ತಮ್ಮ ಮೇಲಿದ್ದ ನಿರೀಕ್ಷೆಯನ್ನು ತಲುಪಿದ್ದಾರೆ. ಮುಂದೆ ಯುವ ರಾಜ್‌ಕುಮಾರ್ ಯಾವ ಸಿನಿಮಾಗಳಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಟಿಸುತ್ತಾರೆ ಎನ್ನುವ ಚರ್ಚೆ ಬಹಳ ಹಿಂದೆಯೇ ನಡೆದಿತ್ತು. ಅಣ್ಣಾವ್ರ ಮೊಮ್ಮಗನ 2ನೇ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ.


Click it and Unblock the Notifications











