»   » ಬಚ್ಚನ್‌ ‘ಶತಮಾನದ ನಟ’

ಬಚ್ಚನ್‌ ‘ಶತಮಾನದ ನಟ’

Posted By: Staff
Subscribe to Filmibeat Kannada

ದುಬೈ : ಬಾಲಿವುಡ್‌ನ ಲಂಬೂ ಅಮಿತಾಬ್‌ ಬಚ್ಚನ್‌ ಸಿನಿ ತಾರಾಗತಿಯ ಏರುಮುಖ ಮುಂದುವರೆದಿದೆ. ಮೊನ್ನೆಯಷ್ಟೇ ಮುಂಬಯಿಯ ಅಭಿಮಾನಿಗಳಿಂದ ಗುರುವಂದನೆಗೆ ಪಾತ್ರರಾಗುವ ಮೂಲಕ ದೇವತೆಗಳ ಸಾಲಿಗೆ ಸೇರ್ಪಡೆಯಾಗಿದ್ದ ಅಮಿತಾಬ್‌, ಈಗ 'ಶತಮಾನದ ನಟ" ಗೌರವಕ್ಕೆ ಪಾತ್ರರಾಗಿದ್ದಾರೆ.

ಎಲ್ಲವನ್ನೂ ಅಭಿಮಾನಿಗಳ ಕಟಾಕ್ಷ ಎನ್ನುವಂತಿಲ್ಲ . ಏಕೆಂದರೆ ಶತಮಾನದ ನಟ ಪ್ರಶಸ್ತಿ ನೀಡುತ್ತಿರುವುದು ಅಭಿಮಾನಿಗಳೇನೂ ಅಲ್ಲ . ಈಜಿಪ್ಟ್‌ನಲ್ಲಿ ನಡೆಯುವ ಅಲೆಕ್ಸಾಂಡ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವ ಸಮಿತಿ ನೀಡುತ್ತಿರುವ ಈ ಪ್ರಶಸ್ತಿ ಗೆ ತನ್ನದೇ ಆದ ಹೆಚ್ಚುಗಾರಿಕೆಯಿದೆ. ಚಿತ್ರರಂಗಕ್ಕೆ ಅಮಿತಾಬ್‌ ಸಲ್ಲಿಸಿರುವ ಸೇವೆಯನ್ನು ಗುರ್ತಿಸಿ 'ಶತಮಾನದ ನಟ" ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಂದಹಾಗೆ, ಈ ಚಿತ್ರೋತ್ಸವ ಐತಿಹಾಸಿಕ ನಗರಿ ಅಲೆಕ್ಸಾಂಡ್ರಿಯಾದಲ್ಲಿ ಸೆಪ್ಟಂಬರ್‌ 5 ರಿಂದ 10 ರವರೆಗೆ ಜರುಗಲಿದೆ. ಈಜಿಪ್ಟ್‌ ವಲಯದಲ್ಲಿ ಅಮಿತಾಬ್‌ ಅತ್ಯಂತ ಜನಪ್ರಿಯ ಭಾರತೀಯ ನಟ.

ಅಲೆಕ್ಸಾಂಡ್ರಿಯಾ ಚಿತ್ರೋತ್ಸವದಲ್ಲಿ ಮೆಡಿಟರೇನಿಯನ್‌ ಪ್ರದೇಶದ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನವಾಗಲಿವೆ. ಅದರಲ್ಲೂ ಫ್ರಾನ್ಸ್‌ ಹಾಗೂ ಇಟಲಿ ಸಿನಿಮಾಗಳದ್ದೇ ಚಿತ್ರೋತ್ಸವದಲ್ಲಿ ಮೇಲುಗೈ ಎನ್ನುತ್ತಾರೆ ಚಿತ್ರೋತ್ಸವದ ಜ್ಯೂರಿ ಅಧ್ಯಕ್ಷೆ ಜಯಾ ಬಚ್ಚನ್‌.

ಈಜಿಪ್ಟ್‌ ಚಿತ್ರೋತ್ಸವಕ್ಕೆ ಜಯಾ ಬಚ್ಚನ್‌ ಅವರು ಸಂದದ್ದಾದರೂ ಹೇಗೆ?

ಸಿನಿಮಾ ಒಂದು ದೃಶ್ಯ ಮಾಧ್ಯಮ. ಆ ಕಾರಣವಾಗಿ ಇಲ್ಲಿ ಗಡಿ ದೇಶಗಳಾಗಲಿ, ಭಾಷೆಯಾಗಲಿ ಅಡ್ಡವಾಗುವುದಿಲ್ಲ ಎನ್ನುತ್ತಾರೆ ಪ್ರಸ್ತುತ ಕೈರೋದಲ್ಲಿರುವ ಜಯಾ ಬಚ್ಚನ್‌. ಚಿತ್ರೋತ್ಸವದ ಮೂಲಕ ಭಾರತ ಹಾಗೂ ಈಜಿಪ್ಟ್‌ ಸಿನಿಮಾಗಳ ಉದ್ದೇಶಗಳನ್ನು ಅರ್ಥೈಸಿಕೊಳ್ಳಲು ಹಾಗೂ ಉಭಯ ದೇಶಗಳ ನಡುವಣ ಸಾಂಸ್ಕೃತಿಕ ವಿನಿಮಯ ಸಾಧ್ಯವಾಗುತ್ತದೆನ್ನುವ ವಿಶ್ವಾಸ ಅವರದು. ಜಯಾ ಅವರ ಈ ಹೇಳಿಕೆಯನ್ನು ಕೈರೋದಲ್ಲಿನ ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿದೆ.

ಭಾರತೀಯ ಸಿನಿಮಾ ಸೇರಿದಂತೆ ಸ್ಥಳೀಯ ಸಿನಿಮಾಗಳ ಮೇಲೆ ಅಮೇರಿಕಾದ ಸಿನಿಮಾಗಳ ಪ್ರಾಬಲ್ಯ ಹೆಚ್ಚಾಗುತ್ತಿದೆ ಅನ್ನುವ ಆತಂಕಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ್ದೇನೂ ಇಲ್ಲ ಅನ್ನುತ್ತಾರೆ ಜಯಾ ಬಚ್ಚನ್‌. ಈಜಿಪ್ಟ್‌ ವಲಯದಲ್ಲಿನ ಸಿನಿಮಾಗಳು ಬಹುತೇಕ ಜಂಟಿ ನಿರ್ಮಾಣವಾಗಿವೆ. ಅಲ್ಲದೆ ಉಭಯ ದೇಶಗಳು ಸಮೃದ್ಧ ಸಂಸ್ಕೃತಿ, ಪರಂಪರೆ ಹೊಂದಿರುವ ಕಾರಣ ಅಮೇರಿಕಾ ಸಿನಿಮಾಗಳಗೆ ಹೆದರಿಕೊಳ್ಳಬೇಕಾದ ಅಗತ್ಯವೇನೂ ಇಲ್ಲ ಎನ್ನುತ್ತಾರೆ ಇನ್ನೂ ಅಭಿನಯ ಮರೆತಿಲ್ಲದ ಜಯಾ ಬಚ್ಚನ್‌.

ಒಟ್ಟಿನಲ್ಲಿ ಬಚ್ಚನ್‌ ದಂಪತಿಗಳೀಗ ಯಶಸ್ಸಿನ ಮರುಹುಟ್ಟಿನ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮದ ಸುಗ್ಗಿ ಮುಂದುವರೆಯಲಿ ಎಂದು ಆಶಿಸೋಣವಾ? ಏಕೆಂದರೆ, ಬಾಲಿವುಡ್‌ಗೆ ಬಚ್ಚನ್‌ ಅಗತ್ಯ ಯಾವತ್ತಿಗಿಂತ ಇಂದು ಹೆಚ್ಚಾಗಿದೆ.

English summary
amitabh bachchan will be honoured with the actor of the century award at the alexandria film festival

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada