»   » ‘ಅಮ್ಮ ’ನಲ್ಲಿ ಮತ್ತೆ ಒಂದಾದ ಅನಂತ್‌ನಾಗ್‌ - ಲಕ್ಷ್ಮೀ

‘ಅಮ್ಮ ’ನಲ್ಲಿ ಮತ್ತೆ ಒಂದಾದ ಅನಂತ್‌ನಾಗ್‌ - ಲಕ್ಷ್ಮೀ

Posted By: Super
Subscribe to Filmibeat Kannada

ಬೆಂಕಿಯ ಬಲೆ, ಮುದುಡಿದ ತಾವರೆ ಅರಳಿತು, ಇಬ್ಬನಿ ಕರಗಿತು, ನಾನಿನ್ನ ಬಿಡಲಾರೆ, ಚಂದನದ ಬೊಂಬೆ ಹೀಗೆ ಹಲವಾರು ಹಿಟ್‌ - ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಟಿಸಿದ ಭಲೆ ಜೋಡಿ ಅನಂತ್‌ನಾಗ್‌- ಲಕ್ಷ್ಮೀ ಮತ್ತೊಮ್ಮೆ ಜತೆಯಾಗಿ ನಟಿಸುತ್ತಿದ್ದಾರೆ.

ಶ್ರೀ ಸಂಗಮೇಶ್ವರ ಪ್ರೊಡಕ್ಷನ್‌ ಲಾಂಛನದಲ್ಲಿ ಶ್ರೀಮತಿ ಗಿರಿಜಾಂಬಾ ಅರ್ಪಿಸಿ, ಕೆ. ವೆಂಕಟೇಶ್‌ ಮತ್ತು ಎನ್‌.ಸಿ. ಅಂಬರೀಶ್‌ ನಿರ್ಮಿಸುತ್ತಿರುವ 'ಅಮ್ಮ" ಚಿತ್ರದ ಮುಖ್ಯ ಭೂಮಿಕೆಯನ್ನು ಖ್ಯಾತ ಅಭಿನೇತ್ರಿ ಲಕ್ಷ್ಮೀ ನಿರ್ವಹಿಸುತ್ತಿದ್ದಾರೆ. ಇವರ ಜೋಡಿಯಾಗಿ ಬಹು ವರ್ಷಗಳ ನಂತರ ಅನಂತ್‌ನಾಗ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಹೆಸರೇ ಹೇಳುವಂತೆ ಚಿತ್ರ ಲಕ್ಷ್ಮೀ ಪ್ರಧಾನ. ಮಾತೆಯ ಮಮತೆಯ ಸುತ್ತಾ ಹೆಣೆದ ಕಥೆ. ಬಿಡುವಿಲ್ಲದೆ ದುಡಿಯುವ ತಾಯಿ ಹೇಗೆ ನಿರ್ಲಕ್ಷಿಸಲ್ಪಡುತ್ತಾಳೆ ಎಂಬುದು ಕಥಾವಸ್ತು. ಇತ್ತೀಚೆಗೆ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣ ಡಿ. ರಾಜೇಂದ್ರ ಬಾಬು ನಿರ್ದೇಶನದಲ್ಲಿ ನಡೆಯಿತು.

ಅನಂತ್‌ನಾಗ್‌ - ಲಕ್ಷ್ಮೀ ಅವರು ಅಪ್ಪ - ಅಮ್ಮ ಆದ ಮೇಲೆ ಮಕ್ಕಳಿರದಿದ್ದರೆ ಆದೀತೇ. ಜೈಜಗದೀಶ್‌, ಮೋಹನ್‌ ಮಕ್ಕಳ ಪಾತ್ರದ ಹೊಣೆ ಹೊತ್ತಿದ್ದಾರೆ. ಇವರ ಪತ್ನಿಯರ ಪಾತ್ರವನ್ನು ಅರ್ಥಾತ್‌ ಲಕ್ಷ್ಮೀಯ ಸೊಸೆ ಪಾತ್ರವನ್ನು ಪವಿತ್ರಾ ಲೋಕೇಶ್‌, ತಾರಾ ಮಾಡುತ್ತಿದ್ದಾರೆ.

ನಂದಿ ಬೆಟ್ಟದ ತಪ್ಪಲಿನಲ್ಲಿ ಚಿತ್ರದ ಷೂಟಿಂಗ್‌ ನಡೆದಿದೆ. ಅಮ್ಮನ ಚಿತ್ರಕ್ಕೆ ಆರ್‌.ಎನ್‌. ಜಯಗೋಪಾಲ್‌, ಬಿ.ಆರ್‌. ಲಕ್ಷ್ಮಣರಾವ್‌, ರಿಚರ್ಡ್‌ ಲೂಯಿಸ್‌ ಹಲವು ಸೆಂಟಿಮೆಂಟ್‌ ಸಾಂಗ್‌ ಬರೆದಿದ್ದಾರೆ. ಎಂ.ಎಂ. ಕೀರವಾಣಿ ರಾಗ ಸಂಯೋಜಿಸಿದ್ದಾರೆ. ರಿಚರ್ಡ್‌ ಲೂಯಿಸ್‌ ಚಿತ್ರಕ್ಕೆ ಗೀತೆ - ಸಂಭಾಷಣೆ ಒದಗಿಸಿರುವುದಷ್ಟೇ ಅಲ್ಲದೆ ಎರಡು ಹಾಡುಗಳನ್ನೂ ಹಾಡಿದ್ದಾರೆ.

ಪ್ರಸಾದ್‌ ಛಾಯಾಗ್ರಹಣ, ರಮೇಶ್‌ ಬಾಬು ಕಲಾ ನಿರ್ದೇಶನ, ಮನೋಹರ್‌ ಸಂಕಲನ ಚಿತ್ರಕ್ಕಿದೆ. ತಾರಾಗಣದಲ್ಲಿ ಅನಂತ್‌ನಾಗ್‌, ಲಕ್ಷ್ಮೀ, ಜೈಜಗದೀಶ್‌, ಪವಿತ್ರಾ ಲೋಕೇಶ್‌, ಮೋಹನ್‌, ತಾರಾ, ಸಂಜಯ್‌, ರೀತು ಸಿಂಗ್‌, ರಮೇಶ್‌ ಭಟ್‌, ಕರಿಬಸವಯ್ಯ, ಸಾಧು ಕೋಕಿಲಾ, ರೇಖಾದಾಸ್‌ ಮೊದಲಾದವರಿದ್ದಾರೆ.

English summary
Anantha nag and lakshmi acting togather after long time

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada