ಬಯಸಿದವರು ಸಿಗುವವರೆಗೂ ಬಿಡಲ್ಲ, ಆದ್ರೆ.. ಧನಂಜಯ್-ಧನ್ಯತಾ ಮದುವೆ ಬಗ್ಗೆ ಅಮೃತಾ ಮಾತು
ನಟ-ನಟಿ ಸಿನಿಮಾಗಳಲ್ಲಿ ಪದೇ ಪದೆ ಒಟ್ಟಿಗೆ ನಟಿಸಿದರೆ, ಸ್ನೇಹಿತರಂತೆ ಒಟ್ಟೊಟ್ಟಿಗೆ ಸುತ್ತಾಡಿದರೆ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಚರ್ಚೆ ಶುರುವಾಗುತ್ತದೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರಾ? ಎನ್ನುವ ಅನುಮಾನ ಹುಟ್ಟಿಕೊಳ್ಳುತ್ತದೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಈ ಬಗ್ಗೆ ಫೋಟೊ, ವೀಡಿಯೋ ವೈರಲ್ ಆಗಿ ಮತ್ತಷ್ಟು ಇಂಬು ನೀಡುತ್ತದೆ.
ನಟ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಒಟ್ಟಿಗೆ 4 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರೂ ಆತ್ಮೀಯ ಸ್ನೇಹಿತರು. ಅವರಿಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಮದುವೆ ಆಗುತ್ತಾರೆ ಎಂದೇ ಭಾವಿಸಿದ್ದರು. ಕಾರ್ಯಕ್ರಮವೊಂದರಲ್ಲಿ ಅಮೃತಾ ಅವರಿಗೆ ಧನಂಜಯ್ ಪ್ರಪೋಸ್ ಮಾಡಿದ್ದ ವೀಡಿಯೋ ವೈರಲ್ ಆಗಿ ಮತ್ತಷ್ಟು ಚರ್ಚೆ ಆಗಿತ್ತು. ಆದರೆ ಇದ್ದಕ್ಕಿದಂತೆ ಧನ್ಯತಾ ಜೊತೆ ಧನಂಜಯ್ ಮದುವೆ ಸುದ್ದಿ ಬಂತು. ಆಗ ಸಾಕಷ್ಟು ಜನ ಅಮೃತಾ ಅಯ್ಯಂಗಾರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಅಮೃತಾ ಹಾಕಿದ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಿ ಧನಂಜಯ್ ಮದುವೆ ಸುದ್ದಿ ಬಗ್ಗೆ ಚರ್ಚಿಸಿದ್ದರು. ಅದಕ್ಕೆ ಅಮೃತಾ ಕಾಮೆಂಟ್ ಮಾಡಿದ್ದು ವೈರಲ್ ಆಗಿತ್ತು. ಡಾಲಿ ಮದುವೆ ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳು ಅಮೃತಾ ಮದುವೆ ಬಗ್ಗೆ ಚಿಂತಿಸಿ ಕಾಮೆಂಟ್ ಹಾಕಿದ್ದರು. ಕೆಲವರು ಪರೋಕ್ಷವಾಗಿ ವ್ಯಂಗ್ಯವಾಡಿದ್ದರು. ಇದೆಲ್ಲದರ ಬಗ್ಗೆ ಸ್ವತಃ ಗೋಲ್ಡ್ ಕ್ಲಾಸ್ ವಿತ್ ಮಯೂರ ಸಂದರ್ಶನ ಕಾರ್ಯಕ್ರಮದಲ್ಲಿ ಅಮೃತಾ ಮಾತನಾಡಿದ್ದಾರೆ.
ಸಿನಿಮಾಗಳಲ್ಲಿ ಅಮೃತಾಗೆ ತ್ಯಾಗರಾಣಿ ಪಟ್ಟ ಸಿಕ್ಕಿದೆ. ನಿಜ ಜೀವನದಲ್ಲಿ ಕೂಡ ಹೀಗೇನಾ ಎನ್ನುವ ಪ್ರಶ್ನೆಗೆ ಅಮೃತಾ ಮಾತನಾಡಿದ್ದಾರೆ. "ನಿಜ ಜೀವನದಲ್ಲಿ ನಾನು ತ್ಯಾಗರಾಣಿ ಅಲ್ಲ. ನನಗೆ ಏನು ಬೇಕೋ ಅದಕ್ಕಾಗಿ ನಾನು ಹೋರಾಡುತ್ತೀನಿ. ಅದು ನನಗೆ ಸರಿ ಹೋಗ್ತಿಲ್ಲ, ಆ ವ್ಯಕ್ತಿ ನನಗೆ ಸರಿ ಹೋಗಲ್ಲ ಎನಿಸಿದರೆ ಬಿಟ್ಟುಬಿಡ್ತೀನಿ. ನನಗೆ ಸರಿ ಅನ್ನಿಸಿ ಬೇಕು ಎಂದರೆ ಬಿಡಲ್ಲ" ಎಂದಿದ್ದಾರೆ.

ನೀವು ಹಾಗೂ ಧನಂಜಯ್ ಸ್ನೇಹಿತರು. ಆದರೆ ನಿಮ್ಮಿಬ್ಬರ ಬಗ್ಗೆ ಜನ ಏನೇನೋ ಕಲ್ಪನೆ ಮಾಡಿಕೊಂಡುಬಿಟ್ಟಿದ್ದರು. ಧನಂಜಯ್‌ಗೆ ಬೇರೊಬ್ಬರು ಜೊತೆ ಮದುವೆ ಅಂದಾಕ್ಷಣ, ಅಯ್ಯೋ ಅಮೃತಾ ಕೈ ಕೊಟ್ರಾ ಎನ್ನುವ ಚರ್ಚೆ ಶುರುವಾಯಿತು ಈ ಬಗ್ಗೆ ಏನ್ ಹೇಳ್ತೀರಾ? ಎಂದಾಗ ಅಮೃತಾ ನಾವಿಬ್ಬರು ಒಳ್ಳೆ ಸ್ನೇಹಿತರು ಅಷ್ಟೇ ಎಂದಿದ್ದಾರೆ.
"ಧನಂಜಯ್ ನಟನೆ ನನಗೆ ಬಹಳ ಇಷ್ಟ. 'ಟಗರು' ಸಿನಿಮಾ 15 ಬಾರಿ ನೋಡಿದ್ದೀನಿ, ಅವರ ನಟನೆಗೆ ದೊಡ್ಡ ಅಭಿಮಾನಿ ನಾನು. ನಾವಿಬ್ಬರು ಮೈಸೂರಿನವರು. ಕೋವಿಡ್ ಸಮಯದಲ್ಲಿ ಒಂದೇ ಏರಿಯಾದಲ್ಲಿ ಇದ್ದೆವು. ಗೋಲ್ಡನ್ ಗ್ಯಾಂಗ್ ಶೋಗೂ ಒಟ್ಟಿಗೆ ಬಂದಿದ್ದೆವು. ನಮಲ್ಲಿ ಆ ಸ್ನೇಹವನ್ನು ಸಂಭ್ರಮಿಸುವ ಮನಸ್ಥಿತಿ ಕಮ್ಮಿಯಿದೆ. ಬಾಲಿವುಡ್‌ನಲ್ಲಿ ನಟ, ನಟಿಯರು ಸ್ನೇಹಿತರಾಗಿ ಹೀಗೆ ಒಟ್ಟೊಟ್ಟಿಗೆ ಓಡಾಡುತ್ತಾರೆ. ಆದರೆ ಇಲ್ಲಿ ಅದನ್ನು ಒಪ್ಪಲ್ಲ" ಎಂದು ಅಮೃತಾ ಹೇಳಿದ್ದಾರೆ.
"ನಮ್ಮಿಬ್ಬರ ಜೋಡಿಯನ್ನು ನೋಡಿ ಜನ ಇಷ್ಟಪಟ್ಟಾಗ ಬಹಳ ಖುಷಿ ಆಗುತ್ತಿತ್ತು. ಹಿಂದಿನ ಕಾಲದಲ್ಲಿ ನಟ- ನಟಿಯರು ಪದೇ ಪದೆ ಒಟ್ಟಿಗೆ ನಟಿಸಿದಾಗ ಜನ ಅದನ್ನು ನೋಡಿ ಖುಷಿಪಡುತ್ತಿದ್ದರು. ನನ್ನ, ಧನಂಜಯ್‌ನ ಒಟ್ಟಿಗೆ ನೋಡೊಕೆ ಬಹಳ ಇಷ್ಟ ಎಂದು ಜನ ಹೇಳಿದಾಗ ಎಂಜಾಯ್ ಮಾಡ್ತಿದ್ದೆ. ನಮ್ಮಿಬ್ಬರ ನಡುವೆ ಒಳ್ಳೆ ಸಲುಗೆ ಇದೆ. ಧನಂಜಯ್ ರೊಮ್ಯಾನ್ಸ್ ಮಾಡಲು ಬಹಳ ನಾಚಿಕೊಳ್ತಾರೆ. ಹಾಗಾಗಿ ಶೋನಲ್ಲಿ ಆ ಟಾಸ್ಕ್ ಕೊಟ್ಟಿದ್ದರು. ಆದಾಗ ಬಳಿಕ 2 ಕುಟುಂಬಗಳಿಗೆ ಬಹಳ ಕಷ್ಟ ಆಗಿತ್ತು" ಎಂದು ಅಮೃತಾ ನೆನಪಿಸಿಕೊಂಡಿದ್ದಾರೆ.
"ಜನ ಮತ್ತೆ ಮತ್ತೆ ನಮ್ಮನ್ನು ನೋಡಿ ಹೀಗೆ ಹೇಳುತ್ತಿದ್ದಾಗ ಹೋಗಲಿ ಬಿಡು ಎಂದು ಸುಮ್ಮನಾದೆವು. ಧನ್ಯತಾ ಜೊತೆ ಧನಂಜಯ್ ಮದುವೆ ಘೋಷಣೆ ಆದಾಗ ಜನ ಅದನ್ನು ಸ್ವೀಕರಿಸಿದ ಪರಿ ಇಷ್ಟವಾಯಿತು. ಅಯ್ಯೋ ಅಮೃತಾ ಅಂದುಕೊಂಡಿದ್ದೆವು, ಧನ್ಯನಾ? ಎಂದು ಕೆಲವರು ಹೇಳಿದರು. ಜನ ಅದನ್ನು ಪ್ರಬುದ್ಧರಾಗಿ ನೋಡಿದರು. ಅದು ಅಚ್ಚರಿ ತಂದಿತ್ತು. ಅದಕ್ಕೆ ಕಾರಣ ಜನ ಧನಂಜಯ್ ಅವರನ್ನು ಅಷ್ಟು ಇಷ್ಟಪಡ್ತಾರೆ, ನನ್ನನ್ನ ಬ್ಲೇಮ್ ಮಾಡ್ತಾರೆ ಅಂದುಕೊಂಡಿದ್ದೆ. ಆದರೆ ಹಾಗೆ ಆಗಲಿಲ್ಲ, ನನ್ನ ಬಗ್ಗೆಯೂ ಒಂದರ್ಥದಲ್ಲಿ ಕನಿಕರ ಭಾವದಿಂದ ನೋಡಿದ್ದು ಖುಷಿಯಾಗಿತು" ಎಂದು ಅಮೃತಾ ವಿವರಿಸಿದ್ದಾರೆ.


Click it and Unblock the Notifications











