ಎರಡೇ ತಿಂಗಳಲ್ಲಿ ಶೂಟಿಂಗ್ ಮುಗೀತು, ಒಂದೇ ದಿನದಲ್ಲಿ ಡಬ್ಬಿಂಗ್ ಆಯ್ತು
ಸರಿಯಾದ ಪ್ಲಾನಿಂಗ್ ಇದ್ದರೆ, ಸರಿಯಾದ ಸಮಯಕ್ಕೆ ಸಿನಿಮಾ ಮುಗಿಸಿಬಿಡಬಹುದು. ಇದೀಗ ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ ಸಿನಿಮಾವನ್ನು ಅಂದುಕೊಂಡ ಹಾಗೆ ಮುಗಿಸಿದ್ದಾರೆ.
ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೊಸ ಸಿನಿಮಾ 'ಅಮೃತಮತಿ'. ಈ ಸಿನಿಮಾದಲ್ಲಿ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ಸಿನಿಮಾದಲ್ಲಿ ಕೆಲಸ ಮಾಡಿದ ಸಂತಸವನ್ನು ಹರಿಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬರಗೂರು ರಾಮಚಂದ್ರಪ್ಪ ಸಿನಿಮಾ ಪ್ಲಾನಿಂಗ್ ಬಗ್ಗೆ ಹರಿಪ್ರಿಯಾ ಖುಷಿಯಾಗಿದ್ದಾರೆ. ಎರಡು ತಿಂಗಳಿನ ಒಳಗೆ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ತಮ್ಮ ಪಾತ್ರ ಡಬ್ಬಿಂಗ್ ಅನ್ನು ಕೇವಲ ಒಂದೇ ದಿನದಲ್ಲಿ ಮಾಡಿದ್ದಾರೆ. ಈ ಹಿಂದೆ ಒಂದು ಸಿನಿಮಾಗೆ ಒಂದೇ ದಿನದಲ್ಲಿ ಹರಿಪ್ರಿಯಾ ಡಬ್ಬಿಂಗ್ ಮಾಡಿದ್ದು, ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.

13ನೇ ಶತಮಾನದ ಸಿನಿಮಾ ಆಗಿರುವ ಕಾರಣ ಡಬ್ಬಿಂಗ್ ಮಾಡಲು ಸಿನಿಮಾದ ಸಂಭಾಷಣೆಗಳು ಸ್ವಲ್ಪ ಕಷ್ಟ ಆಗುತ್ತಿತಂತೆ. ಒಬ್ಬ ಕಲಾವಿದೆಯಾಗಿ ಈ ಸಿನಿಮಾ ನನಗೆ ತೃಪ್ತಿ ನೀಡಿದೆ ಎಂದು ಹರಿಪ್ರಿಯಾ ಹೇಳಿದ್ದಾರೆ.

ಕವಿಚಕ್ರವರ್ತಿ ಜನ್ನನ ಯಶೋಧರ ಚರಿತೆಯ 'ಅಮೃತಮತಿ' ಪಾತ್ರವನ್ನು ಇಟ್ಟುಕೊಂಡು ಬರಗೂರು ರಾಮಚಂದ್ರಪ್ಪ ಈ ಸಿನಿಮಾ ಮಾಡಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಇಂತಹ ಸಿನಿಮಾಗಳಲ್ಲಿ ಕೂಡ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











